ವಿದ್ಯೆ ಯಾರೊಬ್ಬರ ಸ್ವತ್ತಲ್ಲ

| Published : May 13 2024, 12:00 AM IST

ಸಾರಾಂಶ

ಮುಂಬರುವ ದಿನಗಳಲ್ಲಿ ಗದಗ ಜಿಲ್ಲೆಯನ್ನು ಹತ್ತನೇ ಸ್ಥಾನಕ್ಕೆ ತರುವಲ್ಲಿ ಈಗಿನಿಂದಲೇ ಯೋಜನೆ

ಗದಗ: ವಿದ್ಯೆ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಅದು ಯಾರೊಬ್ಬರ ಸ್ವತ್ತಲ್ಲ ಹಾಗೂ ಯಾವ ಜಾತಿಗೂ ಸೀಮಿತ ಅಲ್ಲ ಎಂದು ವಿಪ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ಇತ್ತೀಚೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 622 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದ ಸಮೃದ್ಧಿ ಶ್ರೀಧರ್ ಸಿದ್ಲಿಂಗ್ ಅವರ ಹೆಲ್ತ್‌ಕ್ಯಾಂಪ್ ನಿವಾಸಕ್ಕೆ ಭೇಟಿ ನೀಡಿ ಅವರನ್ನು ಸನ್ಮಾನಿಸಿ ಮಾತನಾಡಿದರು.

ಸಮೃದ್ಧಿ ಸಿದ್ಲಿಂಗ್ ಮಾತನಾಡಿ, ತನ್ನ ಯಶಸ್ಸಿಗೆ ಕಾರಣೀಕರ್ತರಾದ ಲೋಯಲಾ ಪ್ರೌಢಶಾಲೆ ಶಿಕ್ಷಕರಿಗೆ ಹಾಗೂ ಪಾಲಕರಿಗೆ ಧನ್ಯವಾದ ಹೇಳಿ ಪ್ರಾಮಾಣಿಕ ಪ್ರಯತ್ನ ಹಾಗೂ ಪರಿಶ್ರಮದಿಂದ ಈ ರೀತಿಯ ಸಾಧನೆ ಮಾಡಲು ಸಾಧ್ಯ. ಮುಂಬರುವ ದಿನಗಳಲ್ಲಿ ನಾನು ಕಾನೂನು ಶಿಕ್ಷಣ ಅಭ್ಯಾಸ ಮಾಡಿ ಉಚ್ಚ ನ್ಯಾಯಾಲಯ ನ್ಯಾಯಾಧೀಶೆ ಆಗುವ ಗುರಿ ಹೊಂದಿರುವುದಾಗಿ ತಿಳಿಸಿದರು.

ಜಿಲ್ಲಾ ಉಪನಿರ್ದೇಶಕ ಎಂ.ಎ. ರೆಡ್ಡೇರ ಮಾತನಾಡಿ, ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗದಗ ಜಿಲ್ಲೆಯು ರಾಜ್ಯದಲ್ಲಿ 25ನೇ ಸ್ಥಾನದಲ್ಲಿ ಇತ್ತು. ಈ ಬಾರಿ 17ನೇ ಸ್ಥಾನಕ್ಕೆ ಬಂದಿರುವುದು ಸಂತೋಷದ ಸಂಗತಿ. ಈ ಸಾಧನೆಗೆ ಕಾರಣಿಕರ್ತರಾದ ಜಿಲ್ಲೆಯ ಎಲ್ಲ ಸಹ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರನ್ನು ಅಭಿನಂದಿಸಿದ ಅವರು, ಮುಂಬರುವ ದಿನಗಳಲ್ಲಿ ಗದಗ ಜಿಲ್ಲೆಯನ್ನು ಹತ್ತನೇ ಸ್ಥಾನಕ್ಕೆ ತರುವಲ್ಲಿ ಈಗಿನಿಂದಲೇ ಯೋಜನೆ ರೂಪಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರುಡಿ, ಸಹ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಪಿ.ಎಚ್. ಕಡಿವಾಳ, ತಾಲೂಕಾಧ್ಯಕ್ಷ ಬಿ.ಎಫ್. ಪೂಜಾರ, ಶಿಕ್ಷಣ ಇಲಾಖೆಯ ಸಿಬ್ಬಂದಿಗಳು, ಹೆಲ್ತಕ್ಯಾಂಪ್ ನಿವಾಸಿ ಅರವಿಂದ ಹುಲ್ಲೂರ ಹಾಗೂ ಓಣಿಯ ಹಿರಿಯರು ಇದ್ದರು. ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡವಿನಮನಿ ವಂದಿಸಿದರು.