ಕಾರ್ಕಳದ ಮಾಳ ಗುರುಕುಲ ಅನುದಾನಿತ ಶಾಲೆಯ ಅಮೃತ ಮಹೋತ್ಸವದ ಸಭಾ ಕಾರ್ಯಕ್ರಮ ನಡೆಯುt
ಕನ್ನಡಪ್ರಭ ವಾರ್ತೆ ಕಾರ್ಕಳ
ಶಿಕ್ಷಣ ವ್ಯಾಪಾರೀಕರಣವಲ್ಲ. ಅದು ಸೇವಾ ಮನೋಭಾವನೆಯ ಪರಿಕಲ್ಪನೆ. ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವವಾದುದು. ಈ ನಿಟ್ಟಿನಲ್ಲಿ ಮಾಳದ ಗುರುಕುಲ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಜೊತೆಗೆ ಜೀವನ ಮೌಲ್ಯ ಹಾಗೂ ಸಂಸ್ಕಾರಗಳನ್ನು ನೀಡುತ್ತಾ, ಕನ್ನಡ ಭಾಷೆ–ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು. ಮಾಳ ಗುರುಕುಲ ಅನುದಾನಿತ ಶಾಲೆಯ ಅಮೃತ ಮಹೋತ್ಸವದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಅನುದಾನಿತ ಹಾಗೂ ಸರ್ಕಾರಿ ಶಾಲೆಗಳು ಇಂದು ಶಿಕ್ಷಕರ ಕೊರತೆ, ವಿದ್ಯಾರ್ಥಿಗಳ ಸಂಖ್ಯೆ ಇಳಿಕೆ ಮತ್ತು ಸರ್ಕಾರದ ನೀತಿ ನಿಯಮಾವಳಿಗಳಂತಹ ಹಲವು ಸವಾಲುಗಳನ್ನು ಎದುರಿಸುತ್ತಿವೆ. ಇಂತಹ ಸವಾಲಿನ ನಡುವೆಯೂ ಗುರುಕುಲ ಶಿಕ್ಷಣ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ ಮಾಳದ ಗುರುಕುಲ ಶಿಕ್ಷಣ ಸಂಸ್ಥೆಯ ಕಾರ್ಯ ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ ಎಂದರು.ಮುಖ್ಯ ಅತಿಥಿಯಾಗಿ ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ಇದರ ನ್ಯಾನೋ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ನವಕಾಂತ ಗೋರೆ ಮಾತನಾಡಿ, ಭಾರತವು ಪ್ರಸ್ತುತ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದ್ದು, ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಮುಂದಿನ ಮೂರು ವರ್ಷಗಳಲ್ಲಿ ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ 2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವುದರ ಜೊತೆಗೆ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲೂ ಬಲಿಷ್ಠ ರಾಷ್ಟ್ರವಾಗಲಿದೆ ಎಂದು ಹೇಳಿದರು.ಗುರುಕುಲ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗಜಾನನ ಮರಾಠೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾಳದಂತಹ ಗ್ರಾಮೀಣ ಪ್ರದೇಶದಲ್ಲಿ ಗುರುಕುಲ ಪರಂಪರೆಯ ಶಿಕ್ಷಣ ಸಂಸ್ಥೆ 75 ವರ್ಷಗಳನ್ನು ಪೂರೈಸಿ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವುದು ಅತ್ಯಂತ ಸಂತಸದ ವಿಚಾರವಾಗಿದೆ. ಸಮಸ್ತ ದಾನಿಗಳು, ಪೋಷಕರು ಹಾಗೂ ಊರವರ ಸಹಕಾರದಿಂದಲೇ ಇಂತಹ ಸಾಧನೆ ಸಾಧ್ಯವಾಗಿದೆ. ಪ್ರಾಥಮಿಕ ಶಿಕ್ಷಣದ ಜೊತೆಗೆ ಪ್ರೌಢ ಶಿಕ್ಷಣ ನೀಡುವ ಉದ್ದೇಶದಿಂದ ಮುಂದಿನ ಎರಡು ವರ್ಷಗಳಲ್ಲಿ ಪ್ರೌಢಶಾಲಾ ವಿಭಾಗವನ್ನು ಆರಂಭಿಸುವ ಚಿಂತನೆ ನಡೆಯುತ್ತಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದರು. ಈ ಸಂದರ್ಭ ಅಮೃತ ಮಹೋತ್ಸವ ಸಮಿತಿಯ ಪ್ರಧಾನ ಅಧ್ಯಕ್ಷ ಡಾ. ಎಂ. ಪ್ರಭಾಕರ ಜೋಶಿ, ಖ್ಯಾತ ಸಾಹಿತಿಗಳು ಹಾಗೂ ವಾಗ್ಮಿ ಎಚ್. ಡುಂಡಿರಾಜ್, ಬಜಗೋಳಿ ಆರೂರ್ಸ್ ಕ್ಲಿನಿಕ್‌ನ ವೈದ್ಯರಾದ ಡಾ. ವೆಂಕಟಗಿರಿ ರಾವ್, ಮುಂಬೈ ಉದ್ಯಮಿ ಸತೀಶ್ ಶೆಟ್ಟಿ ದೇವಸ, ಖ್ಯಾತ ನ್ಯಾಯವಾದಿ ನಾರಾಯಣ ಹೆಬ್ಬಾರ್, ನಿವೃತ್ತ ತಹಸೀಲ್ದಾರ್ ಶಾಂತರಾಮ್ ಚಿಪಳೂಣ್ಕರ್, ಪ್ರಗತಿಪರ ಕೃಷಿಕ ಮಾಧವ ಡೊಂಗ್ರೆ, ಗುರುಕುಲ ಶಾಲೆಯ ಸಂಚಾಲಕ ಸುಧಾಕರ ಡೊಂಗ್ರೆ, ಶರತ್ ಚಂದ್ರ ಮರಾಠೆ ಉಪಸ್ಥಿತರಿದ್ದರು.ಶಿಕ್ಷಕ–ರಕ್ಷಕ ಸಂಘದ ಅಧ್ಯಕ್ಷ ನಾಗಭೂಷಣ ಮರಾಠೆ ಸ್ವಾಗತಿಸಿ, ಸತೀಶ್ ಶೆಟ್ಟಿ ವಂದಿಸಿದರು. ರಘುಪತಿ ಕಾಮತ್ ಕಾರ್ಯಕ್ರಮ ನಿರೂಪಿಸಿದರು.