ಬಾಳೆಹೊನ್ನೂರು, ದೇಶದ ಭವ್ಯ ಭವಿಷ್ಯಕ್ಕೆ ಶಿಕ್ಷಣವೇ ಅಡಿಪಾಯ. ಎಲ್ಲ ಗ್ಯಾರಂಟಿಗಳಿಗಿಂತ ಶಿಕ್ಷಣವೇ ಬಹುದೊಡ್ಡ ಗ್ಯಾರಂಟಿ ಎಂದು ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.

ದೇಶ ಉದ್ಧಾರ ಶಿಕ್ಷಣದಿಂದ ಮಾತ್ರ ಸಾಧ್ಯ । ಶೀಘ್ರ 12 ಸಾವಿರ ಶಿಕ್ಷಕರ ನೇಮಕ । ನೂತನ ಪ್ರೌಢಶಾಲಾ ಕಟ್ಟಡ ಉದ್ಘಾಟನೆಕನ್ನಡಪ್ರಭ .ವಾರ್ತೆ, ಬಾಳೆಹೊನ್ನೂರು

ದೇಶದ ಭವ್ಯ ಭವಿಷ್ಯಕ್ಕೆ ಶಿಕ್ಷಣವೇ ಅಡಿಪಾಯ. ಎಲ್ಲ ಗ್ಯಾರಂಟಿಗಳಿಗಿಂತ ಶಿಕ್ಷಣವೇ ಬಹುದೊಡ್ಡ ಗ್ಯಾರಂಟಿ ಎಂದು ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.ಮೇಲ್ಪಾಲ್‌ನಲ್ಲಿ ನೂತನವಾಗಿ ನಿರ್ಮಾಣಗೊಂಡ ಕರ್ಕೇಶ್ವರ ಗ್ರಾಪಂನ ಭಾರತ್ ನಿರ್ಮಾಣ ರಾಜೀವ್‌ಗಾಂಧಿ ಸೇವಾ ಕೇಂದ್ರ ಮತ್ತು ನೂತನ ಪ್ರೌಢಶಾಲಾ ಕಟ್ಟಡ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಕಳೆದ ಎರಡೂವರೆ ವರ್ಷಗಳಲ್ಲಿ ನಮ್ಮ ಸರ್ಕಾರ ಶಿಕ್ಷಣಕ್ಕೆಆದ್ಯತೆ ನೀಡಿ, ಬಜೆಟ್‌ನ ಶೇ.12ರಷ್ಟು ಅಂದರೆ ₹50 ಸಾವಿರ ಕೋಟಿ ಹಣವನ್ನು ನೀಡಲಾಗುತ್ತಿದೆ. ಇದರಿಂದ ಭಾರತದಲ್ಲೇ ಉತ್ತಮ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ ರಾಜ್ಯ ನಮ್ಮದಾಗಿದೆ.

ಶಿಕ್ಷಣ ಇಲಾಖೆಯಲ್ಲಿ 46 ಸಾವಿರ ಸರ್ಕಾರಿ ಶಾಲೆಗಳು, ಸೇರಿದಂತೆ ಅನುದಾನಿತ ಶಾಲೆಗಳು ಸೇರಿ ಒಟ್ಟು 57 ಸಾವಿರ ಶಿಕ್ಷಣ ಸಂಸ್ಥೆಗಳಿವೆ. ರಾಜ್ಯ ಸರ್ಕಾರದ ಶೇ.40 ರಷ್ಟು ನೌಕರರು ಶಿಕ್ಷಣ ಇಲಾಖೆಯಲ್ಲೇ ಕೆಲಸ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಸಿಎಂ, ಡಿಸಿಎಂ ನನ್ನ ಮೇಲೆ ಭರವಸೆ ಇಟ್ಟು ಶಿಕ್ಷಣ ಇಲಾಖೆ ಜವಾಬ್ದಾರಿ ವಹಿಸಿದ್ದಾರೆ. ದೇಶ ಉದ್ಧಾರವಾಗಬೇಕೆಂದರೆ ಅದು ದೇವಸ್ಥಾನಗಳ ನಿರ್ಮಾಣದಿಂದಲ್ಲ. ಶಿಕ್ಷಣದಿಂದ ಮಾತ್ರ ಸಾಧ್ಯ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟರೆ ದೇಶ ಉದ್ಧಾರವಾಗಲಿದೆ. ದೇವಸ್ಥಾನಕ್ಕಿಂತ ಶಾಲೆಯಲ್ಲಿ ಗಂಟೆ ಹೊಡೆದರೆ ದೇಶ ಬೆಳಗಲಿದೆ ಎಂದರು.

ಶಿಕ್ಷಣ ಇಲಾಖೆ ಮೂಲಕ ರಾಜ್ಯದಲ್ಲಿ ಪ್ರೌಢಶಾಲೆವರೆಗೆ ೫೭ಲಕ್ಷ ಮಕ್ಕಳಿಗೆ ಬಿಸಿಯೂಟ, ಅಷ್ಟೇ ಮಕ್ಕಳಿಗೆ ವಾರವಿಡೀ ಮೊಟ್ಟೆ, ಬಾಳೆಹಣ್ಣು ವಿತರಿಸಲಾಗುತ್ತಿದೆ. ಮಕ್ಕಳ ಪೌಷ್ಟಿಕತೆಯನ್ನು ಗುರಿಯಾಗಿಸಿಕೊಂಡು ಇದನ್ನು ವಿತರಿಸಲಾಗುತ್ತಿದೆ.ಈಗಾಗಲೇ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ, ಸಮವಸ್ತ್ರ, ಶೂ, ಸಾಕ್ಸ್ ನೀಡುತ್ತಿದ್ದು, ಪ್ರಸಕ್ತ ವರ್ಷದಿಂದ 1ರಿಂದ 12ನೇ ತರಗತಿವರೆಗೆ ಉಚಿತ ನೋಟ್‌ಪುಸ್ತಕ ಹಾಗೂ ಪಠ್ಯಪುಸ್ತಕ ನೀಡುವ ಯೋಜನೆ, ರಾಜ್ಯ ಸರ್ಕಾರ ಜನಸಾಮಾನ್ಯರು ಸಬಲರಾಗಲು ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದು, ಐದು ಗ್ಯಾರಂಟಿಗಳೊಂದಿಗೆ ಶಿಕ್ಷಣದ ಗ್ಯಾರಂಟಿ ನೀಡುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ 11 ತಿಂಗಳಲ್ಲಿ 13 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗಿದೆ. ಇನ್ನೊಂದು ವಾರದಲ್ಲಿ ಟಿಇಟಿ ಪರೀಕ್ಷೆ ಮೂಲಕ 12 ಸಾವಿರ ಶಿಕ್ಷಕರ ನೇಮಕಕ್ಕೆ ಕ್ರಮವಹಿಸಿದೆ.

ಮಕ್ಕಳು ಪರೀಕ್ಷೆಯಲ್ಲಿ ಫೇಲ್ ಆದರೆ ಅದು ಮಕ್ಕಳ ತಪ್ಪಲ್ಲ. ಪೋಷಕರು ಹಾಗೂ ಶಿಕ್ಷಕರ ತಪ್ಪು ಎನ್ನುವುದು ನನ್ನ ಅಭಿಪ್ರಾಯ. ಶಿಕ್ಷಣದಲ್ಲಿ ಸುಧಾರಣೆ ತರುವ ಉದ್ದೇಶದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ವಿಧಾನ ಬದಲಾಯಿಸಿ, ವರ್ಷಕ್ಕೆ ಮೂರು ಬಾರಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ 1-2 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ ಎಂದರು.ಈ ಹಿಂದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಕೇವಲ 2 ವಿದ್ಯಾರ್ಥಿಗಳು ಟಾಪರ್ ಆಗಿರುತ್ತಿದ್ದರು. ಕಳೆದ ಈ ಬಾರಿ 51 ವಿದ್ಯಾರ್ಥಿಗಳು 625 ಅಂಕ ಪಡೆದು ಟಾಪರ್ ಆಗಿದ್ದಾರೆ. ಈ ಮೊದಲು ಕಾಪಿ ಹೊಡೆಯುವವರ ಸಂಖ್ಯೆ ಹೆಚ್ಚಿತ್ತು. ಆದರೆ ನಾವು ಅಧಿಕಾರಕ್ಕೆ ಬಂದ ನಂತರ ಕಟ್ಟುನಿಟ್ಟಾಗಿ ಪರೀಕ್ಷೆ ಮಾಡಲು ಸುಧಾರಣೆ ತಂದಿದ್ದು ಕಾಪಿ ಕಡಿಮೆಯಾಗಿದೆ. ಗುಣಮಟ್ಟದ ಶಿಕ್ಷಣ ನೀಡುವ ವ್ಯವಸ್ಥೆ ನಾವು ಮಾಡಬೇಕು. ಆಗ ಶಿಕ್ಷಣ ವ್ಯವಸ್ಥೆ ಸುಧಾರಿಸಲಿದೆ. ಇದಕ್ಕಾಗಿ ನಾವು ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗುವ ಮೊದಲೇ ರಾಜ್ಯದಲ್ಲಿ ೫೧ ಸಾವಿರ ಅತಿಥಿ ಶಿಕ್ಷಕರನ್ನು ಸರ್ಕಾರಿ ಶಾಲೆಗಳಿಗೆ ನೇಮಕ ಮಾಡಲಾಗಿತ್ತು. ರಾಜ್ಯಾದ್ಯಂತ ಪ್ರತೀ ಗ್ರಾಪಂಗೆ ಒಂದು ಕೆಪಿಎಸ್ ಶಾಲೆ ಆರಂಭಿಸುವುದು ನಮ್ಮ ಉದ್ದೇಶ. ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಒಂದೇ ಸೂರಿನಡಿ ಶಿಕ್ಷಣ ಪಡೆಯಬೇಕು ಹಾಗೂ ಶಾಲೆಗೆ ಬರಲು ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವುದು ನಮ್ಮ ಆಶಯ ಎಂದು ತಿಳಿಸಿದರು.ಮುಂದಿನ ವರ್ಷ ರಾಜ್ಯದಲ್ಲಿ 3 ಸಾವಿರ ಕೆಪಿಎಸ್ ಶಾಲೆ ಆರಂಭಿಸುವ ಗುರಿ ಇದೆ. ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿ 500 ಕೆಪಿಎಸ್ ಶಾಲೆಗಳನ್ನು ಘೋಷಣೆ ಮಾಡಿದ್ದು, ವಿವಿಧ ಯೋಜನೆಗೆ ಒಳಪಡಿಸಿ ಸುಮಾರು 900 ಶಾಲೆಗಳನ್ನು ಮಾಡಲಾಗಿದೆ. ಈಗಾಗಲೇ ಕ್ಯಾಬಿನೆಟ್‌ನಲ್ಲಿ ಅನುಮೋದನೆಗೊಂಡು ಡಿಪಿಆರ್‌ಗೆ ಹೋಗಿದೆ. ಪೋಷಕರು ಸರ್ಕಾರಿ ಶಾಲೆಗಳ ಮೇಲೆ ನಂಬಿಕೆಯಿಟ್ಟು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಬೇಕು ಎಂದರು.ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಕರ್ಕೇಶ್ವರ ಗ್ರಾಪಂನ ನೂತನ ಕಟ್ಟಡವನ್ನು ₹42 ಲಕ್ಷ ವೆಚ್ಚದಲ್ಲಿ, ಮೇಲ್ಪಾಲ್ ಸರ್ಕಾರಿ ಪ್ರೌಢಶಾಲೆ ಕಟ್ಟಡ ₹82 ಲಕ್ಷ ವೆಚ್ಚದಲ್ಲಿ ವಿವೇಕ ಯೋಜನೆಯಡಿ ಸುಸಜ್ಜಿತವಾಗಿ ನಿರ್ಮಿಸಿ ಸಾರ್ವಜನಿಕರು, ವಿದ್ಯಾರ್ಥಿಗಳ ಅನುಕೂಲಕ್ಕೆ ಮಾಡಲಾಗಿದೆ. ಮಧು ಬಂಗಾರಪ್ಪ ಅವರು ಶಿಕ್ಷಣ ಸಚಿವರಾದ ನಂತರ ಅನೇಕ ಸುಧಾರಣೆ ತಂದಿದ್ದು, ಗೋವಿಂದೇಗೌಡರ ನಂತರ ಮಾದರಿ ಸಚಿವರಾಗಿದ್ದಾರೆ. ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ನೀಡಬೇಕು ಎಂಬ ಪಣ ತೊಟ್ಟ ವ್ಯಕ್ತಿ ಮಧು ಅವರಾಗಿದ್ದಾರೆ ಎಂದು ಶ್ಲಾಘಿಸಿದರು.ಕ್ಷೇತ್ರಕ್ಕೆ 5 ಕೆಪಿಎಸ್ ಶಾಲೆಗಳ ಬೇಡಿಕೆಯಿಟ್ಟಿದ್ದು, ಇದರಲ್ಲಿ ಈಗಾಗಲೇ 3 ಶಾಲೆಗಳು ಮಂಜೂರಾಗಿದ್ದು, ಶೀಘ್ರ ಇನ್ನೆರಡು ಶಾಲೆ ನೀಡುವ ಭರವಸೆ ನೀಡಿದ್ದಾರೆ. ಸರ್ಕಾರಿ ಶಾಲೆಗಳಿಗೆ ಖಾಸಗಿ ಸಂಸ್ಥೆಗಳ ₹1560 ಕೋಟಿ ಸಿಎಸ್‌ಆರ್ ನಿಧಿಯನ್ನು ತಂದು ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು, ರಾಗಿ ಮಾಲ್ಟ್‌ ಕೊಡುವ ಯೋಜನೆಗೆ ಚಾಲನೆ ನೀಡಿದ್ದಾರೆ. ಇದು ಅವರ ದೂರದೃಷ್ಟಿಗೆ ಸಾಕ್ಷಿ. ಸರ್ಕಾರಿ ಶಾಲೆಗಳಲ್ಲಿ ಹಳೇ ವಿದ್ಯಾರ್ಥಿಗಳ ಸಂಘ ಸ್ಥಾಪಿಸಿ ಅದರ ಮೂಲಕ ಶಾಲೆಗಳ ಅಭಿವೃದ್ಧಿ ಕಾಯಕಕ್ಕೆ ಸಚಿವರು ರೂಪಿಸಿರುವ ಯೋಜನೆ ಯಶಸ್ವಿಯಾಗುವ ವಿಶ್ವಾಸವಿದೆ ಎಂದರು. ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಗ್ರಾಪಂ ಅಧ್ಯಕ್ಷ ಕೆ.ಎಸ್.ರಾಜೇಶ್ ಕೇಶವತ್ತಿ, ಉಪಾಧ್ಯಕ್ಷೆ ಆಶಾಲತ, ಎಸ್‌ಡಿಎಂಸಿ ಅಧ್ಯಕ್ಷೆ ಮಮತಾ, ಡಿಡಿಪಿಐ ತಿಮ್ಮರಾಜು, ಬಿಇಒ ಶಬನಾ ಅಂಜುಮ್, ತಾಪಂ ಇಒ ನವೀನ್‌ಕುಮಾರ್, ಮುಖ್ಯಶಿಕ್ಷಕ ಸುರೇಶಪ್ಪ, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷೆ ಚಂದ್ರಮ್ಮ, ಪ್ರಮುಖರಾದ ಗೇರುಬೈಲು ನಟರಾಜ್, ಮಹಮ್ಮದ್ ಹನೀಫ್, ಹೇಮಲತಾ, ದಿನಕರ್, ಜಯಪಾಲ್, ಪ್ರಕಾಶ್, ವಿನುತ, ಕೆ.ಡಿ.ಜೋಸೆಫ್, ಕೆ.ಎಂ.ರಾಘವೇಂದ್ರ, ಎಚ್.ಎನ್.ವಿಶ್ವನಾಥ್, ಶಾರದ, ಯಶೋಧ, ಎಸ್.ಆರ್.ಸುಚಿತ್ರ, ಎಚ್.ಡಿ.ಮಹೇಶ್, ಪ್ರಕಾಶ್, ಶಶಿಕುಮಾರ್ ಮತ್ತಿತರರು ಹಾಜರಿದ್ದರು. ೦೫ಬಿಹೆಚ್‌ಆರ್ ೧:

ಬಾಳೆಹೊನ್ನೂರು ಸಮೀಪದ ಮೇಲ್ಪಾಲ್‌ನಲ್ಲಿ ನೂತನವಾಗಿ ನಿರ್ಮಾಣಗೊಂಡ ಕರ್ಕೇಶ್ವರ ಗ್ರಾಪಂನ ಭಾರತ್ ನಿರ್ಮಾಣ ರಾಜೀವ್‌ಗಾಂಧಿ ಸೇವಾ ಕೇಂದ್ರ ಮತ್ತು ನೂತನ ಪ್ರೌಢಶಾಲಾ ಕಟ್ಟಡವನ್ನು ಸಚಿವ ಎಸ್.ಮಧು ಬಂಗಾರಪ್ಪ ವಿದ್ಯಾರ್ಥಿಗಳೊಂದಿಗೆ ಉದ್ಘಾಟಿಸಿದರು. ಟಿ.ಡಿ.ರಾಜೇಗೌಡ, ಡಾ.ಅಂಶುಮಂತ್, ರಾಜೇಶ್ ಕೇಶವತ್ತಿ, ಮಮತಾ, ಆಶಾಲತ, ತಿಮ್ಮರಾಜು, ಶಬನಾ ಅಂಜುಮ್ ಇದ್ದರು.