ಶಿಸ್ತು,ಮೌಲ್ಯ ಹಾಗೂ ನೈತಿಕತೆ ಬೆಳೆಸುವ ಶಿಕ್ಷಣವೇ ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿಸುತ್ತದೆ
ಕೊಪ್ಪಳ: ಶಿಕ್ಷಣವೇ ಸಮಾಜದ ಎಲ್ಲ ಪ್ರಗತಿಗೆ ಮೂಲ ಅಡಿಪಾಯವಾಗಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಸ್.ವಿ.ಡಾಣಿ ಹೇಳಿದ್ದಾರೆ.
ನಗರದ ಖಾಸಗಿ ಹೊಟೇಲ್ ನಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಭಾಗ್ಯನಗರ ಪಟ್ಟಣದ ನ್ಯಾಷನಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 22ನೇ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.ಶಿಸ್ತು,ಮೌಲ್ಯ ಹಾಗೂ ನೈತಿಕತೆ ಬೆಳೆಸುವ ಶಿಕ್ಷಣವೇ ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿಸುತ್ತದೆ.ಹೀಗಾಗಿ ಶಿಕ್ಷಣವೇ ಎಲ್ಲ ಪ್ರಗತಿಗಳಿಗೆ ಮೂಲ ಅಡಿಪಾಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಪ್ರಹ್ಲಾದ್ ಅಗಳಿ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಶಾಲೆಯು ಸತತವಾಗಿ 12 ವರ್ಷಗಳಿಂದ ಶೇ.100 ರಷ್ಟು ಫಲಿತಾಂಶ ದಾಖಲಿಸಿರುವುದು ನಮ್ಮ ಶಾಲೆಯ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ ಎಂದರು.ಶಾಲೆಯ ಆಡಳಿತಾಧಿಕಾರಿ ಗುರುರಾಜ ಅಗಳಿ ಹಾಗೂ ಮುಖ್ಯೋಪಾಧ್ಯಾಯ ಕಲ್ಪನಾ ವಿಜಯಕುಮಾರ್ ಅತಿಥಿಗಳನ್ನು ಸ್ವಾಗತಿಸಿ ಶಾಲೆಯ ಬೆಳವಣಿಗೆಯ ಪಯಣ, ಸಾಧನೆ ಹಾಗೂ ಭವಿಷ್ಯದ ಯೋಜನೆಗಳ ಕುರಿತು ವಿವರಿಸಿದರು.
ವಿದ್ಯಾರ್ಥಿಗಳು ಪ್ರದರ್ಶಿಸಿದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನಸೂರೆಗೊಂಡವು. ಜತೆಗೆ ಪಾಲಕರ ವಿವಿಧ ರಾಜ್ಯಗಳ ಪರಂಪರೆಯ ವೇಷಭೂಷಣದ ರ್ಯಾಂಪ್ ವಾಕ್ ಹಾಗೂ ಪಾಲಕರ ನೃತ್ಯ ಪ್ರದರ್ಶನ ಸಭಿಕರಿಂದ ಭಾರೀ ಪ್ರಶಂಸೆ ಪಡೆದವು. ಪಾಲಕರು, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿ ವಾರ್ಷಿಕೋತ್ಸವದ ಸಂಭ್ರಮ ಹಂಚಿಕೊಂಡರು. ಒಟ್ಟಾರೆ ಈ ವಾರ್ಷಿಕೋತ್ಸವವು ಶಿಕ್ಷಣದ ಮಹತ್ವ ಪ್ರತಿಪಾದಿಸುವ ಜತೆಗೆ ಸಾಂಸ್ಕೃತಿಕ ವೈಭವ ತೋರಿಸುವ ಸ್ಮರಣೀಯ ಕಾರ್ಯಕ್ರಮವಾಗಿತ್ತು.ಕೊಪ್ಪಳ ವಿಶ್ವವಿದ್ಯಾಲಯದ ಆಡಳಿತಾಧಿಕಾರಿ ತಿಮ್ಮಾರೆಡ್ಡಿ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅದ್ಯಕ್ಷ ಶ್ರೀನಿವಾಸ್ ಗುಪ್ತಾ, ಭಾಗ್ಯನಗರ ಪಪಂ ಅಧ್ಯಕ್ಷ ರಮೇಶ್ ಹ್ಯಾಟಿ, ನಿಂಗೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಸ್.ಎ.ನಿಂಗೋಜಿ, ಮಿಲೆನಿಯಂ ಪಬ್ಲಿಕ್ ಶಾಲೆಯ ಅಧ್ಯಕ್ಷ ಗಿರೀಶ್ ಕಣವಿ, ಎಜುಕೇರ್ ಶಾಲೆಯ ಅಧ್ಯಕ್ಷ ಡಾ.ಶ್ರೀನಿವಾಸ್ ಹ್ಯಾಟಿ, ಭಾಗ್ಯನಗರ ಪಪಂ ಮಾಜಿ ಸದಸ್ಯ ವಿಜಯಕುಮಾರ್ ಪಾಟೀಲ್ ಸೇರಿದಂತೆ ಮೊದಲಾದವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಶಾಲೆಯ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಾಧನೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.