ದಾಂಡೇಲಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಜೆಇಇ-ನೀಟ್ ಪುಸ್ತಕ ವಿತರಿಸಿದ ರೋಟರಿ ಕ್ಲಬ್
ಕನ್ನಡಪ್ರಭ ವಾರ್ತೆ ದಾಂಡೇಲಿಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿ ಜೀವನ ಮುಂದುವರಿಸಲು ಬಯಸುವ ಪ್ರತಿಭಾನ್ವಿತ ಮತ್ತು ಅರ್ಹ ವಿದ್ಯಾರ್ಥಿಗಳನ್ನು ಬೆಂಬಲಿಸುವ ಉದ್ದೇಶದಿಂದ ದಾಂಡೇಲಿಯ ರೋಟರಿ ಕ್ಲಬ್ ನಗರದ ಹಳೆ ದಾಂಡೇಲಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಜೆಇಇ ಮತ್ತು ನೀಟ್ ಪುಸ್ತಕಗಳನ್ನು ಇತ್ತೀಚೆಗೆ ವಿತರಿಸಿತು.
ಅಧ್ಯಕ್ಷತೆ ವಹಿಸಿದ್ದ ದಾಂಡೇಲಿ ರೋಟರಿ ಕ್ಲಬ್ ಅಧ್ಯಕ್ಷ ಅಶುತೋಷಕುಮಾರ ರಾಯ್, ಶಿಕ್ಷಣವು ಬಲವಾದ ಮತ್ತು ಪ್ರಗತಿಪರ ಸಮಾಜದ ಅಡಿಪಾಯವಾಗಿದೆ. ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳು ತಮ್ಮ ಕನಸು ಸಾಧಿಸುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ, ಗುಣಮಟ್ಟದ ಅಧ್ಯಯನ ಸಾಮಗ್ರಿ ಪಡೆಯಲು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಮುಂಬೈಯ ರತ್ನ ನಿಧಿ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ರಾಜೀವ್ ಮೆಹ್ತಾ ಮತ್ತು ಬೆಂಗಳೂರು ಪ್ರೈಮ್‌ನ ರೋಟರಿ ಕ್ಲಬ್‌ನ ಮೋಹನಕುಮಾರ ಅವರು ಆರ್ಥಿಕವಾಗಿ ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗೆ ಅಗತ್ಯವಾದ ಜೆಇಇ ಮತ್ತು ನೀಟ್ ತಯಾರಿ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದರು.ಈ ಕಾರ್ಯಕ್ಕೆ ರೋಟರಿ ಕ್ಲಬ್‌ನ ಸಹಾಯಕ ಪ್ರಾಂತಪಾಲರಾದ ಮೂಲತಃ ದಾಂಡೇಲಿಯವರೇ ಆದ ಡಾ. ಸಮೀರ್ ನಾಯಕ ಅವರು ಉಪಯುಕ್ತ ಮಾರ್ಗದರ್ಶನ ನೀಡಿ ಸಹಕರಿಸಿದ್ದಾರೆ. ಈ ಕಾರ್ಯಕ್ಕೆ ರೋಟರಿ ಕ್ಲಬ್‌ನ ಪದಾಧಿಕಾರಿಗಳು ಮತ್ತು ಸದಸ್ಯರು ಸಂಪೂರ್ಣ ಬೆಂಬಲ ನೀಡಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ಉನ್ನತಿಗೆ ಈ ಪುಸ್ತಕಗಳು ಪ್ರೇರಣಾಲಿಯಾಗಲಿ ಎಂದು ಹಾರೈಸಿದರು.
ರೋಟರಿ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಮಿಥುನ್ ನಾಯಕ, ಖಜಾಂಚಿ ಲಿಯೋ ಪಿಂಟೋ, ರೋಟರಿ ಕ್ಲಬ್‌ನ ಪ್ರಮುಖರಾದ ಆರ್.ಪಿ. ನಾಯ್ಕ ಮತ್ತು ಅಭಿಷೇಕ್ ಕನ್ಯಾಡಿ ಮಾತನಾಡಿ, ಶಿಕ್ಷಣ ಉತ್ತೇಜಿಸುವ ಮತ್ತು ವಿದ್ಯಾರ್ಥಿಗಳ ಸಬಲೀಕರಣದ ಕಡೆಗೆ ರೋಟರಿ ಕ್ಲಬ್ ಸದಾ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಾ ಬಂದಿದೆ. ಈ ಕಾರ್ಯಕ್ರಮವು ಪುಸ್ತಕ ವಿತರಿಸುವುದು ಮಾತ್ರವಲ್ಲದೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ದೃಢ ನಿಶ್ಚಯದಿಂದ ಎದುರಿಸಲು ಆತ್ಮವಿಶ್ವಾಸ ತುಂಬುವ ಗುರಿ ಹೊಂದಿದೆ ಎಂದರು.
ಪ್ರಾಚಾರ್ಯರಾದ ನಾಗರೇಖಾ ಗಾಂವಕರ ಮಾತನಾಡಿ, ಸಂಘ-ಸಂಸ್ಥೆಗಳ ಸಹಭಾಗಿತ್ವ ಇದ್ದಲ್ಲಿ ಶಿಕ್ಷಣ ಕ್ಷೇತ್ರದ ಬಲವರ್ಧನೆ ಸಾಧ್ಯ. ಈ ನಿಟ್ಟಿನಲ್ಲಿ ದಾಂಡೇಲಿಯ ರೋಟರಿ ಕ್ಲಬ್‌ನ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ರೋಟರಿ ಕ್ಲಬ್ ಪ್ರಮುಖರಾದ ಸುಧಾಕರ ಶೆಟ್ಟಿ, ಶೇಖರ ಪೂಜಾರಿ, ಉಪನ್ಯಾಸಕರು, ರೋಟರಿ ಕ್ಲಬ್‌ನ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.