ಗಂಗಾವತಿ: ವಿದ್ಯಾರ್ಥಿಗಳಿಗೆ ಶಿಕ್ಷಣವೇ ಜೀವನದ ಬುನಾದಿಯಾಗಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ನಗರದ ಗ್ರಾಮದೇವತೆ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಜೋಗದ್ ನಾರಾಯಣಪ್ಪ ನಾಯಕ ಹಾಗೂ ಅವರ ಕುಟುಂಬದ ವತಿಯಿಂದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಾರಾಯಣಪ್ಪ ನಾಯಕ ಅವರು 15 ವರ್ಷಗಳಿಂದ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಸಮಾಜದ ಮೇಲಿನ ಕಳಕಳಿಯಿಂದ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸುತ್ತಿರುವುದು ಶ್ಲಾಘನೀಯ. ಅವರ ಈ ಸೇವಾ ಮನೋಭಾವ ಇಂದಿನ ಸಮಾಜಕ್ಕೆ ಮಾದರಿಯಾಗಿದೆ ಎಂದು ಪ್ರಶಂಸಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜೋಗದ ನಾರಾಯಣಪ್ಪ ನಾಯಕ ಅವರು, ಬಡತನದ ಅನುಭವವೇ ಪ್ರೇರಣೆ ಎಂದು ಹೇಳಿದರು. ತಮ್ಮ ಬಾಲ್ಯದ ಕಷ್ಟದ ದಿನಗಳನ್ನು ಭಾವುಕರಾಗಿ ಸ್ಮರಿಸಿದರು. ನಾನು ಅತ್ಯಂತ ಬಡ ಕುಟುಂಬದಲ್ಲಿ ಬೆಳೆದವನು. ಶಿಕ್ಷಣ ಪಡೆಯಲು ಅನುಭವಿಸಿದ ಕಷ್ಟಗಳು ನನಗೆ ಇಂದಿಗೂ ನೆನಪಿವೆ. ಆರ್ಥಿಕ ಸಂಕಷ್ಟ ಶಿಕ್ಷಣಕ್ಕೆ ತಡೆಯಾಗಬಾರದು ಎಂಬ ದೃಢ ನಿರ್ಧಾರದಿಂದ, ಸರ್ಕಾರಿ ಶಾಲೆಯ ಮಕ್ಕಳಿಗೆ ನನ್ನಿಂದ ಸಾಧ್ಯವಿರುವ ಸಣ್ಣ ಸಹಾಯವನ್ನು ಕಳೆದ ಒಂದೂವರೆ ದಶಕದಿಂದ ಮಾಡುತ್ತಿದ್ದೇನೆ ಎಂದು ಹೇಳಿದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ನಾರಾಯಣಪ್ಪ ಅವರು ಕೈಗೊಂಡಿರುವ ಈ ಕಾರ್ಯ ನಿರಂತರವಾಗಿರಲಿ ಎಂದು ಶುಭ ಹಾರೈಸಿದರು.

ಉದ್ಯಮಿ ನೆಕ್ಕಂಟಿ ಸೂರಿಬಾಬು ಮಾತನಾಡಿ, ಶಿಕ್ಷಣದ ಶಕ್ತಿಯನ್ನು ಅರಿತ ವ್ಯಕ್ತಿ ಮಾತ್ರ ಇಂತಹ ಸಮಾಜಮುಖಿ ಕೆಲಸ ಮಾಡಲು ಸಾಧ್ಯ ಎಂದು ಹೇಳಿದರು.

ಮಾಜಿ ಸಚಿವ ಮಲ್ಲಿಕಾರ್ಜುನ್ ನಾಗಪ್ಪ, ಮಾಜಿ ಸಂಸದ ಶಿವರಾಮಗೌಡ, ಪ್ರಮುಖರಾದ ಸಿಂಗನಾಳ ವಿರುಪಾಕ್ಷಪ್ಪ, ಅಮರ್ ಜ್ಯೋತಿ ನರಸಪ್ಪ, ವೀರಭದ್ರಪ್ಪ ನಾಯಕ್, ಹನುಮಂತಪ್ಪ ನಾಯಕ್, ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ್, ಹೊಸಮಲಿ ಮಲ್ಲೇಶಪ್ಪ ಭಾಗವಹಿಸಿದ್ದರು.