ಸಾರಾಂಶ
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಿಶ್ವಕರ್ಮ ಜಯಂತಿ ಉದ್ಘಾಟಿಸಿ
ಕನ್ನಡಪ್ರಭ ವಾರ್ತೆ, ಕಡೂರುಹಿಂದುಳಿದ ಸಮಾಜಗಳು ಅಭಿವೃದ್ಧಿ ಹೊಂದಲು ಶಿಕ್ಷಣವೇ ಪ್ರಮುಖ ಅಸ್ತ್ರ ಎಂದು ಶಾಸಕ ಕೆ. ಎಸ್. ಆನಂದ್ ಅಭಿಪ್ರಾಯ ಪಟ್ಟರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಿಶ್ವಕರ್ಮ ಜಯಂತಿ ಉದ್ಘಾಟಿಸಿ ಮಾತನಾಡಿ, ಸಿಎಂ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ 2014ರಲ್ಲಿ ವಿಶ್ವಕರ್ಮ ಜಯಂತಿಯನ್ನು ಅಧಿಕೃತವಾಗಿ ಘೋಷಣೆ ಮಾಡುವ ಮೂಲಕ ಸಣ್ಣ ಸಮಾಜಗಳಿಗೂ ದನಿ ನೀಡಿದರು. ಅಲ್ಲದೆ ಸಮಾಜದ ಅಭಿವೃದ್ಧಿಗಾಗಿ ವಿಶ್ವಕರ್ಮ ನಿಗಮ ಆರಂಭಿಸಿ ಸಮಾಜ ಆರ್ಥಿಕವಾಗಿ ಸ್ವಾವಲಂಬಿಯಾಗಲು ಎಲ್ಲ ರೀತಿಯ ಸಹಕಾರ ನೀಡಿದೆ ಎಂದರು.ಸಮಾಜದ ಸಮುದಾಯ ಭವನ ನಿರ್ಮಾಣ ಪೂರ್ಣಗೊಳಿಸಲು ಈಗಾಗಲೇ ಹಣ ನಿಗದಿ ಮಾಡಲಾಗಿದೆ. ಅಲ್ಲದೆ ಸಮಾಜ ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಬೆಳೆಯಲು ಸಂಘಟನೆ ಮತ್ತು ಶಿಕ್ಷಣ ಕಾರಣವಾಗಿದೆ. ಸಮಾಜದ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯಗಳಿಗೆ ನನ್ನ ಸಹಕಾರ ಇರುತ್ತದೆ. ಬೀರೂರಿನಲ್ಲಿರುವ ವಿಶ್ವ ಕರ್ಮ ಸಮಾಜದ ಕೋಟ್ಯಂತರ ರು. ಬೆಲೆ ಬಾಳುವ ಜಮೀನು ಬಿಡಿಸಿಕೊಂಡು ಸಮಾಜದ ಅಭಿವೃದ್ದಿ ಕಾರ್ಯಗಳಿಗೆ ಬಳಸಿ ಎಂದು ಸಲಹೆ ನೀಡಿದರು.
ಮುಂದಿನ ದಿನಗಳಲ್ಲಿ ಈ ಸಮಾಜಕ್ಕೆ ರಾಜಕೀಯ ಶಕ್ತಿಯ ಕುರಿತು ಸದನದಲ್ಲಿ ಸರ್ಕಾರದ ಗಮನ ಸೆಳೆಯುತ್ತೇನೆ ಎಂದು ಭರವಸೆ ನೀಡಿದರು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ದೇವರನ್ನು ಕೆತ್ತನೆ ಮಾಡಿ ಅದಕ್ಕೆ ಜೀವ ತುಂಬುವ ಕೆಲಸ ಮಾಡುವುದು ವಿಶ್ವಕರ್ಮರು. ಸಂಸ್ಕಾರದಿಂದ ವಿಶ್ವಕರ್ಮರನ್ನು ಬ್ರಾಹ್ಮಣರೆಂದು ಕರೆಯುವ ಮೂಲಕ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತ ರಾಗಿರುವ ಈ ಸಮುದಾಯದೊಂದಿಗೆ ತಾವಿದ್ದು, ಶಾಸಕರೊಂದಿಗೆ ಚರ್ಚೆ ಮಾಡಿ ಪಟ್ಟಣದ ಒಂದು ರಸ್ತೆಗೆ ಜಕಣಾಚಾರಿ ಹೆಸರಿಡಲು ಕ್ರಮ ವಹಿಸ ಲಾಗುವುದು. ಅಲ್ಲದೆ ಸಮಾಜದ ಭವನಕ್ಕೆ ಶಾಸಕರಾದ ಆನಂದ್ ಈಗಾಗಲೇ ಹಣ ಹಾಕಿದ್ದಾರೆ ಎಂದರು.ತಹಸೀಲ್ದಾರ್ ಸಿ.ಆರ್.ಪೂರ್ಣಿಮಾ ಮಾತನಾಡಿ, ಶೈಕ್ಷಣಿಕವಾಗಿ ಬೆಳೆದಲ್ಲಿ ಮಾತ್ರ ಒಂದು ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. ಸಮಾಜದ ಮುಖಂಡ ಓಂಕಾರ್ ಮೂರ್ತಿ ಮಾತನಾಡಿ, ವಿಶ್ವಕರ್ಮರು ತಮ್ಮ ಕಸುಬಿನಿಂದ ಪ್ರಪಂಚಕ್ಕೆ ಮಾದರಿಯಾಗಿದ್ದಾರೆ. ನಿಯತ್ತಿಗೆ ಹೆಸರು ವಾಸಿಯಾದ ವಿಶ್ವಕರ್ಮರು ಎಂದರೆ ತಪ್ಪಾಗಲಾರದು. ವಿಶ್ವಕರ್ಮ ಜಯಂತಿಯನ್ನು ಸಿದ್ದರಾಮಯ್ಯ ಅವಧಿಯಲ್ಲಿ ಮಾಡಿದ್ದು ಸಮಾಜ ಶೈಕ್ಷಣಿಕ ವಾಗಿ ಇನ್ನಷ್ಟು ಅಭಿವೃದ್ಧಿ ಆಗಬೇಕಿದೆ ಎಂದರು.
ವಿಶ್ವಕರ್ಮ ಸಮಾಜದ ಅಧ್ಯಕ್ಷ ತೀರ್ಥಾಚಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಮಾಜದ ಹಿರಿಯ ಸಾಧಕರನ್ನು ಗೌರವಿಸಲಾಯಿತು.ಸಮಾಜದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಗೋಪಾಲಾಚಾರ್, ತಾಪಂ ಇಒ ಸಿ.ಆರ್. ಪ್ರವೀಣ್, ಪುಷ್ಪಕುಮಾರ ಆಚಾರ್, ಆರ್. ಕೆ. ಮಂಜು ನಾಥ್, ಕೃಷ್ಣಮೂರ್ತಿ, ಜಿ. ಅಶೋಕ್ , ಪರಮೇಶ್ವರಾಚಾರ್, ಅಧಿಕಾರಿಗಳು ಇದ್ದರು.ಬಾಕ್ಸ್ ಸುದ್ದಿಗೆ --
ಬಿ ಸಿ ಎಂ ಇಲಾಖೆಯಲ್ಲಿರುವ ವಿಶ್ವಕರ್ಮ ನಿಗಮದ ಅಧಿಕಾರಿಗಳು ಸಮಾಜದ ಜನರು ಅಭಿವೃದ್ಧಿಗಾಗಿ ಸಾಲಕ್ಕೆ ಅರ್ಜಿ ಹಾಕಲು ಹೋದರೆ ಹಣವೇ ಇಲ್ಲ ಅರ್ಜಿ ಹಾಕಬೇಡಿ ಎಂದು ಮೊದಲಿಸಿ ಅರ್ಜಿ ಪಡೆಯುತ್ತಿಲ್ಲ ಎಂದು ಕಾರ್ಯಕ್ರಮದಲ್ಲಿ ಶಿಕ್ಷಕ ಬಸವರಾಜ್ ಶಾಸಕರ ಸಮ್ಮುಖದಲ್ಲಿ ದೂರಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಕೆ.ಎಸ್. ಆನಂದ್ ನಿಗಮದಲ್ಲಿ ಯಾವುದೇ ಹಣಕಾಸಿಗೆ ತೊಂದರೆ ಇಲ್ಲ. ಈ ರೀತಿ ಹೇಳುವುದು ಯಾರೆಂದು ತಮಗೆ ತಿಳಿಸಿದರೆ ಆತನನ್ನು ಅಮಾನತು ಮಾಡಿಸುವುದಾಗಿ ಹೇಳಿದರು.17ಕೆಕೆಡಿಯು2.ಕಡೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಿಶ್ವಕರ್ಮ ಜಯಂತಿಯ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯ ಸಾಧಕರನ್ನು ಸನ್ಮಾನಿಸಲಾಯಿತು.