ಕನ್ನಡಪ್ರಭವಾರ್ತೆ, ತುರುವೇಕೆರೆ

ವಿದ್ಯೆ ಎಂಬುದು ಸಾಧಕನ ಸ್ವತ್ತೇ ವಿನಃ, ಸೋಮಾರಿಯ ಸ್ವತ್ತಲ್ಲ. ವಿದ್ಯೆಯನ್ನು ಹಠ, ಛಲದಿಂದ ಸಂಪಾದಿಸಬೇಕು. ಗಳಿಸಿದ ವಿದ್ಯೆ ಯಾರ ಪಾಲೂ ಆಗದು. ಅದು ಸ್ವಯಾರ್ಜಿತ ಸಂಪತ್ತು ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಪಿ.ಪಾಪಣ್ಣ ಹೇಳಿದರು.

ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್, ಭಾರತ್ ಸ್ಕೌಟ್ ಮತ್ತು ಗೈಡ್ಸ್ ಹಾಗೂ ಇತರೆ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಾಧನೆ ಇಲ್ಲದೇ ಸತ್ತರೆ ಸಾವಿಗೆ ಅವಮಾನ, ಉತ್ತಮವಾಗಿ ಬಾಳದೇ ಸತ್ತರೆ ಬದುಕಿಗೆ ಅವಮಾನ. ದೇಶ ನಮಗೇನು ಕೊಟ್ಟಿದೆ ಎಂದು ಪ್ರಶ್ನಿಸುವುದಕ್ಕಿಂತ ನಾವು ದೇಶಕ್ಕೇನು ಕೊಟ್ಟಿದ್ದೇವೆ ಎಂದು ಪ್ರಶ್ನಿಸಿಕೊಳ್ಳಬೇಕು. ನಾವು ಉತ್ತಮ ಪ್ರಜೆಗಳಾಗಿ ಸಮಾಜಕ್ಕೆ ಭಾರವಾಗದೇ ನಮ್ಮಿಂದ ಆಗುವ ಉಪಕಾರಗಳನ್ನು ಮಾಡಿ ಸಮಾಜದ ಋಣ ತೀರಿಸಿದರೆ ಅದುವೇ ದೇಶಕ್ಕೆ ನಾವು ಕೊಡುವ ಕೊಡುಗೆಯಾಗಿದೆ ಎಂದರು. ಬಾಳೆಗೊಂದು ಗೊನೆ, ಬಾಳಿಗೊಂದು ಗುರಿ ಇರಬೇಕು ಎಂಬ ನಾಲ್ನುಡಿಯಂತೆ ವಿದ್ಯಾರ್ಥಿಗಳು ಉತ್ತಮ ಗುರಿಯನ್ನು ಇಟ್ಟುಕೊಳ್ಳಬೇಕು. ಗಾಜಿನ ಮನೆಯ ಆಸೆಯನ್ನು ಪಡುವ ಬದಲು ವಜ್ರದ ಗಣಿಯನ್ನೇ ಪಡೆದುಕೊಳ್ಳುವ ಹಂಬಲವನ್ನು ಇಟ್ಟುಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಸರಿದಾರಿಗೆ ತಂದುಕೊಳ್ಳಲು ಪಾಠಗಳ ಜೊತೆಗೆ ಕ್ರೀಡೆಗೂ ಗಮನ ಕೊಡಬೇಕು. ಸೋಲಿಗೆ ಅಂಜದೇ, ಸೋಲೇ ಗೆಲುವಿನ ಮೆಟ್ಟಿಲು ಎಂದು ಭಾವಿಸಿ ಜೀವನವನ್ನು ನಡೆಸಬೇಕೆಂದು ವಿದ್ಯಾರ್ಥಿಗಳಿಗೆ ಎಚ್. ಪಿ.ಪಾಪಣ್ಣ ಕಿವಿಮಾತು ಹೇಳಿದರು. ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿ.ಎನ್.ನಂಜೇಗೌಡ ಮಾತನಾಡಿ ಶಿಸ್ತಿರುವ ಕಡೆ ಶಿಕ್ಷಣ ಸಿಗಲಿದೆ. ಇಂದು ಪ್ರಪಂಚ ವಿಶಾಲವಾಗಿದೆ. ಕೈನ ಬೆರಳ ತುದಿಯಲ್ಲೇ ವಿಶ್ವವನ್ನು ಕಾಣಬಹುದಾಗಿದೆ. ವಿದ್ಯಾರ್ಥಿಗಳು ಹೆಚ್ಚೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು. ವಿಷಯಾಧಾರಿತ ಶಿಕ್ಷಣದಲ್ಲಿ ಆಸಕ್ತಿ ತೋರಬೇಕು. ಸರ್ಕಾರಿ ಶಾಲೆಗಳೆಂದರೆ ಜನರಲ್ಲಿ ತಾತ್ಸಾರ ಮನೋಭಾವ ಮೂಡಿದೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಜ್ಞಾನ ಹೊಂದಿರುವ ಶಿಕ್ಷಕರು, ಉಪನ್ಯಾಸಕರು ಇರುವರು. ಹಲವಾರು ಸೌಲಭ್ಯಗಳು ಉಚಿತವಾಗಿ ದೊರೆಯುತ್ತಿದೆ. ಹಾಗಾಗಿ ತಾತ್ಸಾರ ಮನೋಭಾವ ಬಿಟ್ಟು ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೇ ಸೇರಿಸಬೇಕೆಂದು ಮನವಿ ಮಾಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಈರಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಸೀಗೇಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಎಸ್.ನಿಜಗುಣ ಸ್ವಾಮಿ, ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಈ.ರಾಜು, ಕನ್ನಡ ಉಪನ್ಯಾಸಕ ಡಾ.ಚಂದ್ರಯ್ಯ, ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಬಿ.ಜಿ.ವೆಂಕಟೇಶ್, ಪತ್ರಾಂಕಿತ ವ್ಯವಸ್ಥಾಪಕ ಎಸ್.ಆರ್.ನರೇಂದ್ರಬಾಬು, ಇತಿಹಾಸ ಉಪನ್ಯಾಸಕ ವಿಜಯಕುಮಾರ್, ರಾಷ್ಟ್ರೀಯ ಸೇವಾ ಯೋಜನೆಯ ಯತೀಶ್ ಕುಮಾರ್, ಮನೋರಂಜನ್, ಕೃಷ್ಣವೇಣಿ, ಯುವ ರೆಡ್ ಕ್ರಾಸ್ ಸಂಸ್ಥೆಯ ವೆಂಕಟೇಶ್, ರಾಘವೇಂದ್ರ, ರಾಜೇಂದ್ರ, ಸಾಂಸ್ಕೃತಿಕ ಕಾರ್ಯದರ್ಶಿ ಪಿ.ಬಿ.ಕುಮಾರ್ ಇದ್ದರು. ವಿಜಯಕುಮಾರ್ ಸ್ವಾಗತಿಸಿದರು. ಲಹರಿ ನಿರೂಪಿಸಿದರು. ಕುಮಾರ್ ವಂದಿಸಿದರು.