ಪ್ರತಿ ವ್ಯಕ್ತಿಯ ಬದುಕಿನಲ್ಲಿ ಭದ್ರ ಬುನಾದಿ ದೊರಕುವುದು ಶಿಕ್ಷಣದಿಂದ. ಅದರಲ್ಲೂ ಪ್ರಾಥಮಿಕ ಶಾಲಾ ಹಂತದ ಶಿಕ್ಷಣ ಮಹತ್ವದ್ದು.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಪ್ರತಿ ವ್ಯಕ್ತಿಯ ಬದುಕಿನಲ್ಲಿ ಭದ್ರ ಬುನಾದಿ ದೊರಕುವುದು ಶಿಕ್ಷಣದಿಂದ. ಅದರಲ್ಲೂ ಪ್ರಾಥಮಿಕ ಶಾಲಾ ಹಂತದ ಶಿಕ್ಷಣ ಮಹತ್ವದ್ದು ಎಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ ಹೇಳಿದರು.

ಪಟ್ಟಣದ ಬಾಲಭವನದಲ್ಲಿ ತಾಲೂಕಿನ ಶಿಕ್ಷಕರ ವೇದಿಕೆ ಹಾಗೂ ಶಿಕ್ಷಕಿ ಶ್ರೀಮತಿ ರೀಟಾ ಎಂ.ಡಿಸೋಜಾ ಸಹಯೋಗದಲ್ಲಿ ನಡೆದ ನಿವೃತ್ತ ಶಿಕ್ಷಕ ದಿ.ಎಂ.ಎಸ್. ಡಿಸೋಜಾ ಸದ್ಭಾವನಾ ಪ್ರಶಸ್ತಿ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ಶಿಕ್ಷಕರಿಗೆ ಗೌರವ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರು ಉತ್ತಮ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವರು. ಸಮಾಜದ ವ್ಯವಸ್ಥೆಯನ್ನು ಸರಿದಾರಿಯಲ್ಲಿ ಸಾಗುವ ಕಾರ್ಯ ಶಿಕ್ಷಕರಿಂದಾಗಬೇಕು ಎಂದರು.

ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ, ಸಾಹಿತಿ ಗಂಗಾಧರ ಕೊಳಗಿ ಮಾತನಾಡಿದರು.

ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಕೆ. ನಾಯ್ಕ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಎಎಸ್ಐ ರಮೇಶ ಗೌಡ, ಪ್ರಾ.ಶಾ.ಶಿ.ಸಂಘದ ಉಪಾಧ್ಯಕ್ಷೆ ರೀಟಾ ಡಿಸೋಜಾ, ಪ್ರಧಾನ ಕಾರ್ಯದರ್ಶಿ ಜಿ.ಜಿ. ಹೆಗಡೆ, ಕಸಾಪ ನಿಕಟಪೂರ್ವ ಅಧ್ಯಕ್ಷ ಗೋಪಾಲ ನಾಯ್ಕ ಮಾತನಾಡಿದರು. ಪ್ರಾ.ಶಾ.ಶಿ.ಸಂಘದ ಜಿಲ್ಲಾ ಖಜಾಂಚಿ ಮಂಜುನಾಥ ನಾಯ್ಕ, ಉಡುಪಿ ಟೀಚರ್ಸ ಬ್ಯಾಂಕ್ ನಿರ್ದೇಶಕ ಎಂ.ಎಸ್. ಹೆಗಡೆ, ಪ್ರಾ.ಶಾ.ಶಿ. ಸಂಘದ ಖಜಾಂಚಿ ಸುಧಾಬಾಯಿ ರಾಯ್ಕರ, ಶಿಕ್ಷಕಿ ಸುಧಾರಾಣಿ ನಾಯ್ಕ ಉಪಸ್ಥಿತರಿದ್ದರು.

ಈ ಸಂದರ್ಭ ಗಂಗಾಧರ ಕೊಳಗಿಯವರಿಗೆ ಎಂ.ಎಸ್.ಡಿಸೋಜಾ ಸದ್ಭಾವನಾ ಪ್ರಶಸ್ತಿ ಹಾಗೂ ಮಹೇಶ ಶೇಟ್, ಹರಿಣಿ ಬೋರ್ಕರ್, ನಜೀಬುಲ್ಲಾ ಅಬ್ದುಲ್ ಬಷೀರ್, ಕುಮಾರ ಎಂ. ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು.

ಶಿಕ್ಷಕಿಯರಾದ ಗುಲಾಬಿ ನಾಯ್ಕ, ಪದ್ಮಾವತಿ ನಾಯ್ಕ ಪ್ರಾರ್ಥಿಸಿದರು. ಶಿಕ್ಷಕರ ವೇದಿಕೆ ಉಪಾಧ್ಯಕ್ಷ ಗಣೇಶ ಪೂಜಾರಿ ಸ್ವಾಗತಿಸಿದರು. ಜಿಲ್ಲಾ ಪ್ರಾ.ಶಾ.ಶಿ. ಸಂಘದ ಸದಸ್ಯ ಸಂತೋಷ ಅಳ್ವೆಕೋಡಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಪ್ರಕಾಶ ಮೌರ್ಯ ನಿರೂಪಿಸಿದರು.