ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಇಂದಿನ ಮಕ್ಕಳಿಗೆ ಶಿಕ್ಷಣದ ಜೊತೆಗೆ ಆಧ್ಯಾತ್ಮಿಕತೆ ಮತ್ತು ಸಂಸ್ಕಾರವನ್ನು ಕಲಿಸಿ ಬೆಳೆಸಿದಾಗ ಮಾತ್ರ ಅದಕ್ಕೆ ಬೆಲೆ ಬರಲು ಸಾಧ್ಯ. ಇಂದಿನ ಮಕ್ಕಳು ಮೊಬೈಲ್, ಟಿವಿ ಅನೇಕ ದುಶ್ಚಟಗಳಲ್ಲಿ ಭಾಗಿಯಾಗುವುದು ತಂದೆ ತಾಯಿಯ ಹಾಗೂ ಗುರುಹಿರಿಯರನ್ನು ಗೌರವಿಸದೆ ಇರುವುದಕ್ಕೆ ಕಾರಣ ಅವರಲ್ಲಿ ಸಂಸ್ಕಾರವಿಲ್ಲದ ಶಿಕ್ಷಣ ಎಂದು ಜಮಖಂಡಿಯ ಓಲೆಮಠದ ಆನಂದ ದೇವರು ಕಳವಳ ವ್ಯಕ್ತಪಡಿಸಿದರು.ತಾಲೂಕಿನ ಕನ್ನೂರಿನ ಶಾಂತಿ ಕುಟೀರ ಆಶ್ರಮದಲ್ಲಿ ಶಾಂತಿ ಕುಟೀರ ಟ್ರಸ್ಟ್ ಹಾಗೂ ಭಾರತೀಯ ಸುರಾಜ್ಯ ಸಂಸ್ಥೆ ಮತ್ತು ಶ್ರೀಶೈಲೇಶ್ವರ ವಿದ್ಯಾ ಕೇಂದ್ರ ಸಂಡೂರು ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಬೇಸಿಗೆ ಶೀಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಶಾಂತಿ ಕುಟೀರದಲ್ಲಿ ನಡೆಯುವ ಉಚಿತ ಬೇಸಿಗೆ ಶಿಬಿರವು ಇಲ್ಲಿನ ಎಲ್ಲಾ ಮಕ್ಕಳಿಗೆ ಶಿಕ್ಷಣದ ಜೊತೆಗೆ ಅವರಿಗೆ ಬೇಕಾದ ಆಧ್ಯಾತ್ಮಿಕತೆ ಮತ್ತು ಸಂಸ್ಕಾರ ಮತ್ತು ಕಲಿಕೆ ಜೊತೆಗೆ ನೀಡುತ್ತಿರುವ ಏಕೈಕ ಶಿಬಿರವಾಗಿದೆ. ಮಕ್ಕಳು ದುಶ್ಚಟಗಳಿಂದ ದೂರವಾಗಬೇಕಾದರೆ ಅವರ ಕಲಿಕೆಯಲ್ಲಿ ಸಂಸ್ಕಾರವಿದ್ದಾಗ ಮಾತ್ರ ಅವರಿಗೆ ನೈತಿಕವಾಗಿ ಬದುಕುವ ಕಲೆಯನ್ನು ಕಲಿಸಿದಂತಾಗುತ್ತದ ಎಂದು ತಿಳಿಸಿದರು.ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಕವಲಗಿ ಮಾತನಾಡಿ, ನಾವೂ ಬೇಸಿಗೆ ಶಿಬಿರವನ್ನು ನಡೆಸುತ್ತೇವೆ. ಅಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕದ ವಿಷಯವನ್ನು ಬೋಧಿಸುತ್ತೇವೆ. ಆದರೆ, ಶಾಂತಿ ಕುಟೀರದಲ್ಲಿ ನಡೆಯುವ ಬೇಸಿಗೆ ಶಿಬಿರವು ಮಕ್ಕಳಿಗೆ ಪಠ್ಯದ ಜೊತೆಗೆ ಜೀವನದ ಪಠ್ಯ ವಿಷಯವನ್ನು ಕಲಿಸುವ ಶಿಬಿರವಾಗಿದೆ. ಇಲ್ಲಿ ಶಿಕ್ಷಣ ಪಡೆದ ಮಕ್ಕಳು ಪುಣ್ಯವಂತರು ಎಂದು ಹಾರೈಸಿದರು.ಪ್ರೊ.ಡಾ.ಜಿ.ಪಿ.ಮಾಳಿ ಮಾತನಾಡಿ, ಧಾರ್ಮಿಕ ಕ್ಷೇತ್ರದಲ್ಲಿ ಶೈಕ್ಷಣಿಕ ಉಪಕ್ರಮ ನಡೆಸುವದು ಅತ್ಯಂತ ವಿರಳ. 21ನೇ ಶತಮಾನವು ಜ್ಞಾನ-ವಿದ್ಯೆಯ ಶತಮಾನವಾಗಲಿದೆ. ಹೀಗಾಗಿ, ಮನೆಯಲ್ಲಿ ದೊಡ್ಡ ಟಿವಿ ಇರಿಸದೆ ದೊಡ್ಡ ಕಪಾಟ ಇರಿಸಿ ಹಾಗೂ ಅದರಲ್ಲಿ ಪುಸ್ತಕಗಳನ್ನು ಇಡಬೇಕು ಎಂದರು.
ಶೈಲೇಶ್ವರ ವಿದ್ಯಾ ಕೇಂದ್ರದ ಆಡಳಿತಾಧಿಕಾರಿ ಎಸ್.ನಾನಾವಟೆ, ಟ್ರಸ್ಟ್ ನ ಅಧ್ಯಕ್ಷ ಗೋವಿಂದ ಲಾಲ, ಬಾಹೇತಿ ಮಾತನಾಡಿದರು. ಈ ಸಂದರ್ಭದಲ್ಲಿ ಅಜಿತ ಕನ್ನೂರ, ಶೈಲೇಶ್ವರ ವಿದ್ಯಾ ಕೇಂದ್ರ ಅಧ್ಯಕ್ಷೆ ಲಕ್ಷ್ಮೀಬಾಯಿ ನಾನಾವಟೆ, ಶ್ರೀಕೃಷ್ಣ ಸಂಪಗಾವಂಕರ, ಭಾರತೀಯ ಸುರಾಜ್ಯ ಸಂಸ್ಥೆಯ ಕಾರ್ಯಾಧ್ಯಕ್ಷ ಶ್ರೀನಿವಾಸ ಕುಲಕರ್ಣಿ ಮುಂತಾವದರು ಇದ್ದರು.