ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯ

| Published : Jan 03 2024, 01:45 AM IST

ಸಾರಾಂಶ

ಶಿಕ್ಷಣ ಇಲಾಖೆಯ ಗೌರವ ಹೆಚ್ಚಿಸಬೇಕಾದ ಸಚಿವರು ಚೆಕ್‌ಬೌನ್ಸ್‌ ಪ್ರಕರಣದಲ್ಲಿ ಸಿಲುಕಿ ಹಾಕಿಕೊಂಡಿರುವುದು ದುರಂತದ ಸಂಗತಿ ಎಂದು ಎಬಿವಿಪಿ ಆಕ್ರೋಶ ವ್ಯಕ್ತಪಡಿಸಿದೆ

- ಹುಬ್ಬಳ್ಳಿಯಲ್ಲಿ ಎಬಿವಿಪಿಯಿಂದ ಪ್ರತಿಭಟನೆ, ಆಕ್ರೋಶ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಚೆಕ್ ಬೌನ್ಸ್‌ ವಂಚನೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ನೈತಿಕ ಹೊಣೆ ಹೊತ್ತು, ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಮಂಗಳವಾರ ನಗರದ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಆಡಳಿತಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್ ಸರ್ಕಾರ ಪ್ರಜಾವಿರೋಧಿ ನಡೆಯನ್ನು ಅನುಸರಿಸುತ್ತಿದೆ. ಶಿಕ್ಷಣ ಇಲಾಖೆಯ ಗೌರವ ಹೆಚ್ಚಿಸಬೇಕಾದ ಸಚಿವರು ಚೆಕ್‌ಬೌನ್ಸ್‌ ಪ್ರಕರಣದಲ್ಲಿ ಸಿಲುಕಿ ಹಾಕಿಕೊಂಡಿರುವುದು ದುರಂತದ ಸಂಗತಿ. ಕೂಡಲೇ ಅವರಿಗೆ ಶಿಕ್ಷಣ ಇಲಾಖೆಯ ಮೇಲೆ ಗೌರವ ಇದ್ದರೆ ರಾಜೀನಾಮೆ ಸಲ್ಲಿಸುವ ಮೂಲಕ ನ್ಯಾಯಾಲಯದ ವಿಚಾರಣೆಗೆ ಒಳಗಾಗಬೇಕು ಎಂದು ಒತ್ತಾಯಿಸಿದರು.

ಖಾಸಗಿ ಆಡಿಯೋ ಕಂಪನಿಯ ವ್ಯವಸ್ಥಾಪಕರಾಗಿದ್ದ ಮಧು ಬಂಗಾರಪ್ಪ ಅವರು 2011ರಲ್ಲಿ ರಾಜೇಶ ಎಕ್ಸ್‌ಪೋರ್ಟ್ ಸಂಸ್ಥೆಗೆ ₹6.6 ಕೋಟಿ ಚೆಕ್ ನೀಡಿದ್ದರು. ಆದರೆ, ಹಣ ಪಾವತಿಯಾಗದ ಕಾರಣಕ್ಕೆ ಚೆಕ್ ಬೌನ್ಸ್‌ ಆಗಿತ್ತು. ಈ ಹಿನ್ನಲೆಯಲ್ಲಿ ಮಧು ಬಂಗಾರಪ್ಪನವರ ವಿರುದ್ಧ ದೂರು ದಾಖಲಾಗಿದೆ. ಅದರಂತೆ ಜನಪ್ರತಿನಿಗಳ ವಿಶೇಷ ನ್ಯಾಯಾಲಯ ₹6.96 ಕೋಟಿ ದಂಡ ವಿಧಿಸಿದ್ದು, ಅದನ್ನು ಪಾವತಿಸದೇ ಹೋದಲ್ಲಿ 6 ತಿಂಗಳ ಸೆರೆವಾಸ ಅನುಭವಿಸುವಂತೆ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿಗಳು ಕೂಡಲೇ ಸಚಿವ ಮಧು ಬಂಗಾರಪ್ಪ ಅವರಿಂದ ರಾಜೀನಾಮೆ ಪಡೆಯಬೇಕು. ಇಲ್ಲದೇ ಹೋದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ನಂತರ ಎಬಿವಿಪಿ ಕಾರ್ಯಕರ್ತರು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.