ಸಾರಾಂಶ
ರಾಣಿಬೆನ್ನೂರು ನಗರದ ದೇವರಗುಡ್ಡ ರಸ್ತೆಯ ಸ್ವಕುಳಸಾಳಿ ಸಮಾಜದ ಜೀವೇಶ್ವರ ಸಭಾಭವನದಲ್ಲಿ ಭಾನುವಾರ ರಾಜ್ಯ ಸ್ವಕುಳ ಸಾಳಿ ಶಿಕ್ಷಣ ಸಂಸ್ಥೆಯ ವಾರ್ಷಿಕ ಸರ್ವಸಾಧಾರಣ ಸಭೆ, ರಾಜ್ಯ ಸ್ವಕುಳಸಾಳಿ ಸಮಾಜದ ಕಾರ್ಯಕಾರಿ ಸಮಿತಿ ಸಭೆ ಮತ್ತು ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ರಾಣಿಬೆನ್ನೂರು: ಯಾವುದೇ ಸಮಾಜ ಮುಖ್ಯವಾಹಿನಿಗೆ ಬರಲು ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ಮುಖ್ಯವಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ಸ್ಥಳೀಯ ದೇವರಗುಡ್ಡ ರಸ್ತೆಯ ಸ್ವಕುಳಸಾಳಿ ಸಮಾಜದ ಜೀವೇಶ್ವರ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯ ಸ್ವಕುಳ ಸಾಳಿ ಶಿಕ್ಷಣ ಸಂಸ್ಥೆಯ ವಾರ್ಷಿಕ ಸರ್ವಸಾಧಾರಣ ಸಭೆ ಹಾಗೂ ರಾಜ್ಯ ಸ್ವಕುಳಸಾಳಿ ಸಮಾಜದ ಕಾರ್ಯಕಾರಿ ಸಮಿತಿ ಸಭೆ ಮತ್ತು ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲರೂ ಶಿಕ್ಷಿತರಾಗಿ ಸ್ವಾವಲಂಬಿಯಾದರೆ ದೇಶ ಅಭಿವೃದ್ಧಿ ಸಾಧಿಸಲು ಸಾಧ್ಯವಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಓದಿದ ವಿಷಯಕ್ಕಿಂತ ಹೊರಗಡೆ ವಿಷಯ ತಿಳಿದುಕೊಳ್ಳುವುದು ಬಹಳಷ್ಟಿದೆ. ಶಾಲಾ ಅವಧಿಯಲ್ಲಿ ಅಧ್ಯಯನ ಜತೆಗೆ ವೃತ್ತಿ ಕೌಶಲ್ಯ ಅರಿತುಕೊಳ್ಳುವುದು ಅವಶ್ಯವಾಗಿದೆ. ಇಂದಿನ ದಿನಗಳಲ್ಲಿ ಸಾಕ್ಷರರಾಗಿದ್ದರೂ ಕಂಪ್ಯೂಟರ್ ಜ್ಞಾನ ಹೊಂದಿರದಿದ್ದರೆ ಅವರು ಅನಕ್ಷರಸ್ಥರಿದ್ದಂತೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಕಂಪ್ಯೂಟರ್ ಶಿಕ್ಷಣ ಹೊಂದಿರಬೇಕು ಎಂದರು.ಐರಣಿ ಮನಿಮಠದ ಗಜದಂಡ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ರಾಜ್ಯಾಧ್ಯಕ್ಷ ಚಂದ್ರಕಾಂತ ಭಂಡಾರೆ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಳ್ಳಿ, ಅಖಿಲ ಭಾರತ ಸ್ವಕುಳ ಸಾಳಿ ಸಮಾಜದ ಅಧ್ಯಕ್ಷ ರಮೇಶ ಚಿಲ್ಲಾಳ, ಶಶಿಕಲಾ ಚೌಧರಿ, ಸಮಾಜದ ತಾಲೂಕಾಧ್ಯಕ್ಷ ವಿಠ್ಠಲ ಏಡಕೆ, ಗೀತಾಬಾಯಿ ಏಕಬೋಟೆ, ಕರಬಸಪ್ಪ ಏಕಬೋಟೆ, ಧೀರೇಂದ್ರ ಏಕಬೋಟೆ, ರಾಮಕೃಷ್ಣ ತಾಂಬೆ ಮತ್ತಿತರರಿದ್ದರು.