ಸಾರಾಂಶ
ಚಿತ್ರದುರ್ಗ: ಸ್ಪರ್ಧಾತ್ಮಕ ಯುಗದಲ್ಲಿ ಸ್ವಾವಲಂಬಿಯಾಗಿ ಜೀವಿಸುವಂತ ಶಿಕ್ಷಣ ಬೇಕಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಸಿ.ಸೋಮಶೇಖರ್ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ-13 ಪಿಳ್ಳೆಕೆರನ ಹಳ್ಳಿಯಲ್ಲಿರುವ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ಹತ್ತು ಬೆಳದಿಂಗಳ ವಿಶೇಷ ಕಾರ್ಯಕ್ರಮ, ಪ್ರಥಮ ಬಿಇಡಿ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ, ವಿದ್ಯಾರ್ಥಿ ಸಂಘದ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಬಿಇಡಿ ವಿಶೇಷವಾದ ಕೋರ್ಸ್. ಮಕ್ಕಳ ಬದುಕನ್ನು ರೂಪಿಸುವ ಶಕ್ತಿ ನಿಮ್ಮಲ್ಲಿರಬೇಕು. ಶಿಕ್ಷಕ ಕೆಲಸವೆಂದರೆ ಅನನ್ಯ ತೃಪ್ತಿ ನೀಡಬೇಕು. ವಿದ್ಯೆ ಅನ್ನ ಕೊಡುವುದರ ಜೊತೆಗೆ ಅಂತರ್ ವೀಕ್ಷಣೆಯ ಆವಿಷ್ಕಾರವಾಗಬೇಕು. ಶಿಕ್ಷಣದಿಂದ ಮಾತ್ರ ಮನುಷ್ಯ ಚಾರಿತ್ರ್ಯವಂತ, ಶೀಲವಂತನಾಗಬಹುದು. ಜ್ಞಾನ ಸಿಗದ ಶಿಕ್ಷಣದಿಂದ ಏನು ಪ್ರಯೋಜನವಿಲ್ಲ. ಶಿಕ್ಷಣದಿಂದ ಜೀವನದಲ್ಲಿ ಶಿಸ್ತು ಕಲಿಯಬಹುದು ಎಂದು ಹೇಳಿದರು. ಪದವಿ ಪಡೆಯುವುದು ಮುಖ್ಯವಲ್ಲ. ಸಾಮಾನ್ಯ ಜ್ಞಾನವಿರಬೇಕು. ಆದರ್ಶ ಶಿಕ್ಷಕನಿಂದ ಮಾತ್ರ ಸಮಾಜದಲ್ಲಿ ಆದರ್ಶ ಮಕ್ಕಳನ್ನು ರೂಪಿಸಲು ಸಾಧ್ಯ. ಬದುಕಿಗೆ ನಂಬಿಕೆ ಮುಖ್ಯ. ಕತ್ತಲನ್ನು ನಿವಾರಿಸುವುದು ನಿಜವಾದ ಶಿಕ್ಷಣ. ಬಿಇಡಿ ಮುಗಿದ ಮೇಲೆ ಶಿಕ್ಷಕರೆ ಆಗಬೇಕೆಂದೇನು ಇಲ್ಲ. ಕೆಎಎಸ್, ಐಎಎಸ್ ಪರೀಕ್ಷೆಗಳನ್ನು ಬರೆದು ಉನ್ನತಮಟ್ಟದ ಅಧಿಕಾರಿಯಾಗುವ ಅವಕಾಶಗಳಿವೆ ಎಂದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಡಾ.ಕೆ.ವೆಂಕಟೇಶ್ ಮಾತನಾಡಿ, ಶಿಕ್ಷಣ ಸಂಸ್ಥೆ ಕಟ್ಟುವುದು ಸುಲಭವಲ್ಲ. ಸರ್ಕಾರ, ಸಮಾಜ, ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರುಗಳ ಪಾತ್ರಮುಖ್ಯ. ಹತ್ತು ಹಲವಾರು ಸಮಸ್ಯೆಗಳನ್ನು ಮೆಟ್ಟಿನಿಲ್ಲಬೇಕು. ಈ ನಿಟ್ಟಿನಲ್ಲಿ ಕೆ.ಎಂ.ವೀರೇಶ್ ಅವರ ಸಾಧನೆ ಅಪಾರ. ಶಿಕ್ಷಣ ಕ್ಷೇತ್ರದಲ್ಲಿನ ಇವರ ಸೇವೆ ಗುರುತಿಸಿ ಮೈಸೂರು ಮುಕ್ತ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿರುವುದು ಅವರ ಶ್ರಮಕ್ಕೆ ತಕ್ಕ ಪುರಸ್ಕಾರ ಎಂದರು.ಮುರುಘಾಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಸಾನಿಧ್ಯವಹಿಸಿದ್ದರು. ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರಶ್ ಅಧ್ಯಕ್ಷತೆವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಡಾ.ಎಂ.ಕೆ.ಪ್ರಭುದೇವ್, ಬಾಪೂಜಿ ಸಮೂಹ ಸಂಸ್ಥೆಗಳ ನಿರ್ದೇಶಕ ಕೆ.ಎಂ.ಚೇತನ್, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎಂ.ಆರ್.ಜಯಲಕ್ಷ್ಮಿ, ಉಪಪ್ರಾಂಶುಪಾಲ ಪ್ರೊ.ಎಚ್.ಎನ್.ಶಿವಕುಮಾರ್, ನಿವೃತ್ತ ಸಾರಿಗೆ ಅಧಿಕಾರಿ ಹಂಪಯ್ಯ, ಹೊನ್ನಲಿಂಗಯ್ಯ ವೇದಿಕೆಯಲ್ಲಿದ್ದರು.