ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ, ತೆಲಂಗಾಣದ ಹಲವು ಗ್ರಾಮಗಳಲ್ಲಿ ವಾಸಿಸುತ್ತಿರುವ ಗಡಿ ಕನ್ನಡಿಗರ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದಕ್ಕೆ ಕರ್ನಾಟಕ ಸರ್ಕಾರ ಸ್ಪಂದಿಸಿ ಕನ್ನಡಿಗರ ನೆರವಿಗೆ ಧಾವಿಸಬೇಕಾದ ಅನಿವಾರ್ಯ ಎದುರಾಗಿದೆ.
ದೇವಪ್ಪ ವಡವಟ್
ಕನ್ನಡಪ್ರಭ ವಾರ್ತೆ ಸೈದಾಪುರಯಾದಗಿರಿ ಮತ್ತು ರಾಯಚೂರು ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ, ತೆಲಂಗಾಣದ ಹಲವು ಗ್ರಾಮಗಳಲ್ಲಿ ವಾಸಿಸುತ್ತಿರುವ ಗಡಿ ಕನ್ನಡಿಗರ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದಕ್ಕೆ ಕರ್ನಾಟಕ ಸರ್ಕಾರ ಸ್ಪಂದಿಸಿ ಕನ್ನಡಿಗರ ನೆರವಿಗೆ ಧಾವಿಸಬೇಕಾದ ಅನಿವಾರ್ಯ ಎದುರಾಗಿದೆ.
ಜಿಲ್ಲೆಯ ಗಡಿ ಭಾಗದ ಗ್ರಾಮಗಳಾದ ನಾರಾಯಣಪೇಟ ಜಿಲ್ಲೆಯ ಕೃಷ್ಣಾ, ಚೇಗುಂಟಾ, ಐನಾಪೂರ, ಕುಮ್ಸಿ, ಆನಂಪಲ್ಲಿ, ಹಿಂದೂಪುರ, ತಂಗಡಿಗಿ, ಗುರ್ಜಾಲ್, ಕುಸುಮೂರ್ತಿ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಗ್ರಾಮಸ್ಥರ ಮಾತೃ ಭಾಷೆ ಕನ್ನಡವಾಗಿರುವುದರಿಂದ, ಅಲ್ಲಿನ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾರೆ. ನಂತರ ಪ್ರೌಢ ಶಿಕ್ಷಣವನ್ನು ತೆಲಂಗಾಣದ ಕೃಷ್ಣಾ ಮತ್ತು ಸೈದಾಪುರ ಸೇರಿದಂತೆ ರಾಯಚೂರು ಜಿಲ್ಲೆಯ ಶಕ್ತಿನಗರದಲ್ಲಿ ಮಾಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಉನ್ನತ ಶಿಕ್ಷಣ ಪಡೆಯುವಾಗ ಹಲವಾರು ಸಮಸ್ಯೆಗಳನ್ನು ಎದುರಿಸುವುದರ ಮೂಲಕ ಅನ್ಯಾಯವಾಗುತ್ತಿದೆ ಎಂಬುವುದು ಅಲ್ಲಿನ ಕನ್ನಡಿಗರ ನೋವು.*ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿರ್ಲಕ್ಷ್ಯ: ತೆಲಂಗಾಣದ ಹಲವು ಗ್ರಾಮಗಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ತಮ್ಮ ಜೀವನ ಪದ್ದತಿಯಾಗಿ ರೂಢಿಸಿಕೊಂಡು ಬರುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ಗಡಿ ಭಾಗದಲ್ಲಿ ಕನ್ನಡದ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ಥಿತಿಯನ್ನು ಸುಧಾರಿಸಬೇಕಾದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಇಲ್ಲಿಯವರೆಗೂ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸದೇ ಸಂಪೂರ್ಣವಾಗಿ ಗಡಿ ಕನ್ನಡಿಗರನ್ನು ನಿರ್ಲಕ್ಷಿಸಿದೆ ಎಂಬುವುದು ಇಲ್ಲಿನ ಕನ್ನಡಿಗರ ಆರೋಪ.
* ಗಡಿನಾಡು ಕನ್ನಡಿಗರೆಂದು ಘೋಷಿಸಿ: ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ ಗಡಿಯಲ್ಲಿರುವ ತೆಲಂಗಾಣದ ನಾರಯಣಪೇಟ ಜಿಲ್ಲೆಯ 20ಕ್ಕೂ ಹೆಚ್ಚು ಗ್ರಾಮದ ಜನರು ಕನ್ನಡ ಸಂಸ್ಕೃತಿ, ಭಾಷೆ ಆಧಾರಿಸಿಕೊಂಡು ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಗಡಿ ಕನ್ನಡಿಗರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಸಹಾಯವಾಗಲು ಗಡಿನಾಡು ಕನ್ನಡಿಗರೆಂದು ಘೋಷಣೆ ಮಾಡಿ ಪ್ರಮಾಣ ಪತ್ರವನ್ನು ವಿತರಿಸಬೇಕು. ಇದರಿಂದಾಗಿ ಕನ್ನಡ ಭಾಷೆ ಅಭಿವೃದ್ಧಿಗೆ ಸಹಾಯವಾಗುತ್ತದೆ.ಜಾತಿ ಪ್ರಮಾಣ ಪತ್ರ ಸಮಸ್ಯೆ: ಗಡಿ ನಾಡಿನ ಕನ್ನಡಿಗರು ತೆಲಂಗಾಣ ಸರ್ಕಾರದ ನೀಡಿದ ಜಾತಿ ಪ್ರಮಾಣ ಪತ್ರಕ್ಕೆ ಕರ್ನಾಟಕದಲ್ಲಿ ಮಾನ್ಯತೆ ನೀಡದಿರುವುದರಿಂದ ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ವಸತಿನಿಲಯದಲ್ಲಿ ಪ್ರವೇಶ ಪಡೆಯಲು ಅಸಾಧ್ಯವಾಗಿದೆ. ಇದರಿಂದಾಗಿ ಕನ್ನಡ ಭಾಷೆಯಲ್ಲಿ ಭವಿಷ್ಯ ನಿರ್ಮಾಣ ಮಾಡಬೇಕು ಎಂದುಕೊಂಡ ಹಲವು ವಿದ್ಯಾರ್ಥಿಗಳು ವ್ಯಾಸಾಂಗ ನಿಲ್ಲಿಸಿದ್ದಾರೆ. ಕೆಲವು ಪಾಲಕರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದ ಶಿಕ್ಷಣದಿಂದ ಬಿಡಿಸಿ ತೆಲಗು ಭಾಷೆಯ ಶಿಕ್ಷಣಕ್ಕೆ ದಾಖಲಿಸಿದ್ದಾರೆ.
ಕರ್ನಾಟಕ ಗಡಿಗೆ ಅಂಟಿಕೊಂಡಿರುವ ತೆಲಂಗಾಣದ ಗ್ರಾಮಗಳಲ್ಲಿ ಕನ್ನಡ ಕಲಿಕಾ ಕೇಂದ್ರಗಳು, ಅತ್ಯತ್ತಮ ಸೌಲಭ್ಯವುಳ್ಳ ಗ್ರಂಥಾಲಯಗಳು ನಿರ್ಮಿಸಬೇಕು. ಕನ್ನಡ ಉಳಿಸುವ ಕಾರ್ಯಕ್ರಮಗಳನ್ನು ಗಡಿ ಗ್ರಾಮಗಳಲ್ಲಿ ಆಯೋಜಿಸುವ ಕಾರ್ಯ ಮಾಡಬೇಕು. ಕನ್ನಡ ಭಾಷೆಯಲ್ಲಿ ವಿದ್ಯಾಭ್ಯಾಸ ಮಾಡಿದ ಪ್ರತಿಯೊಬ್ಬರಿಗೂ ಅನ್ಯಾಯವಾಗದಂತೆ ನಮ್ಮ ರಾಜ್ಯ ಸರ್ಕಾರ ನಿಯಮಗಳನ್ನು ರೂಪಿಸಿ ಅಲ್ಲಿನ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗ ದೊರಕುವ ಹಾಗೆ ಅನುಕೂಲ ಮಾಡಿಕೊಡಬೇಕು. ಅಂದಾಗ ಮಾತ್ರ ರಾಜ್ಯೋತ್ಸವಕ್ಕೆ ಹೆಚ್ಚಿನ ಮೆರುಗು ಬರುತ್ತದೆ ಎಂದು ಕರ್ನಾಟಕ ರಕ್ಷಣ ವೇದಿಕೆ ಉತ್ತರ ಕರ್ನಾಟಕ ವಿಭಾಗ ಅಧ್ಯಕ್ಷ ಡಾ. ಶರಣು ಬಿ.ಗದ್ದುಗೆ ಹೇಳಿದರು.ಕರ್ನಾಟಕ ಗಡಿಯಲ್ಲಿರುವ ನಮ್ಮ ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ಕರ್ನಾಟಕ ಸರ್ಕಾರ ನೀಡಬೇಕು. ಇಲ್ಲಿ ನಮ್ಮ ಮಾತೃಭಾಷೆ ಕನ್ನಡವಾಗಿರುವದರಿಂದ ನಾವುಗಳು ಕೂಡ ಕನ್ನಡಾಂಬೆಯ ಮಕ್ಕಳು. ಆದರಿಂದ ಕನ್ನಡದ ಮಕ್ಕಳಿಗೆ ಉನ್ನತ ಶಿಕ್ಷಣ, ಉದ್ಯೋಗ ಪಡೆಯಲು ಜಾತಿ ಪ್ರಮಾಣ ಪತ್ರ ಸಹಿತ ಅನೇಕ ಸಮಸ್ಯೆಗಳಿಗೆ ಪರಿಹಾರ ಕೈಗೊಳಬೇಕು. ಅಂದಾಗ ಮಾತ್ರ ನಾವುಗಳು ಸಂತೋಷದಿಂದ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿಕೊಳ್ಳುತ್ತೇವೆ ಎಂದು ಚಿಂತಕ ಅಮರ್ ದೀಕ್ಷಿತ್ ಹೇಳಿದರು.