ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಪ್ರತಿಯೊಬ್ಬರ ಜೀವನದಲ್ಲಿಯೂ ಶಿಕ್ಷಣ ಮಹತ್ವದ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ಇಲ್ಲ, ಸಲ್ಲದ ಆಕರ್ಷಣೆಗಳಿಗೆ ಮಾರು ಹೋಗದೆ ವಿದ್ಯಾಭ್ಯಾಸದ ಕಡೆಗೆ ಯುವಜನರು ಆಸಕ್ತಿ ವಹಿಸಬೇಕು ಎಂದು ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಬ್ದುಲ್ ಖಾದರ್ ತಿಳಿಸಿದ್ದಾರೆ.ನಗರದ ಕನ್ನಡ ಭವನದಲ್ಲಿ ಬಿ.ಎಸ್.ಎಸ್. ಮೈಕ್ರೋ ಫೈನಾನ್ಸ್ ಕಂಪನಿ ತನ್ನ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಗ್ರಾಮೀಣ ಮಕ್ಕಳಿಗೆ ಹಮ್ಮಿಕೊಂಡಿದ್ದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕೆರೆಯ ನೀರನ್ನು ಕೆರೆಗೆ ಚಲ್ಲಿ ಎಂಬ ಮಾತಿನಂತೆ, ಬಿ.ಎಸ್.ಎಸ್.ಸಂಸ್ಥೆ ತನ್ನ ಲಾಭದಲ್ಲಿ ಕೆಲ ಅಂಶವನ್ನು ಶೈಕ್ಷಣಿಕ ವಿಚಾರಗಳಿಗೆ ಖರ್ಚು ಮಾಡುತ್ತಿರುವುದು ಸಂತೋಷದ ವಿಚಾರ, ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಲಿ ಎಂದರು.
ಬಿ.ಎಸ್.ಎಸ್.ಸಂಸ್ಥೆ ಸೇರಿ ಯಾವುದೇ ಕಿರು ಹಣಕಾಸು ಸಂಸ್ಥೆಗಳಿಗೆ ಸಾಲ ಪಡೆಯುವ ಜನರು, ತಮಗೆ ಅವಶ್ಯಕತೆ ಇರುವಷ್ಟು ಮಾತ್ರ ಸಾಲ ಪಡೆದು, ಅದನ್ನು ನಿಗಧಿತ ಉದ್ದೇಶಕ್ಕೆ ಬಳಸಿಕೊಂಡು ಸರಿಯಾದ ಸಮಯಕ್ಕೆ ಮರುಪಾವತಿಸಿದರೆ, ಅದರಿಂದ ಸಂಸ್ಥೆಗೂ ಮತ್ತು ಸಾರ್ವಜನಿಕರಿಗೆ ಇಬ್ಬರಿಗೂ ಉಪಯೋಗ, ಸರಿಯಾದ ಸಮಯಕ್ಕೆ ಸಾಲ ಮರುಪಾವತಿಸಿದರೆ ಮತ್ತಷ್ಟು ಜನರಿಗೆ ಈ ರೀತಿಯ ಸೌಲಭ್ಯ ನೀಡಲು ಸಂಸ್ಥೆಗಳಿಗೆ ಶಕ್ತಿ ತುಂಬಿದಂತಾಗುತ್ತದೆ. ವಿದ್ಯಾರ್ಥಿಗಳು ತಮಗೆ ಸಿಕ್ಕಿರುವ ಈ ವಿದ್ಯಾರ್ಥಿವೇತನವನ್ನು ಶೈಕ್ಷಣಿಕ ವಿಷಯಕ್ಕೆ ಅಗತ್ಯವಿರುವ ವಸ್ತುಗಳನ್ನು ಕೊಳ್ಳಲು ಬಳಸಿಕೊಂಡು, ಉತ್ತಮ ಪ್ರಜೆಗಳಾಗಿ ರೂಪಗೊಳ್ಳುವಂತೆ ಎಎಸ್ಪಿ ಅಬ್ದುಲ್ ಖಾದರ್ ಸಲಹೆ ನೀಡಿದರು.ಬಿ.ಎಸ್.ಎಸ್.ಸಂಸ್ಥೆಯ ಡೆಪ್ಯೂಟಿ ವೈಸ್ ಪ್ರೆಸಿಡೆಂಟ್ ಎಚ್.ವಿ.ಜಗದೀಶ್ ಮಾತನಾಡಿ, ಕಳೆದ 27 ವರ್ಷಗಳಿಂದ ದೇಶದ 13 ರಾಜ್ಯಗಳ 20 ಲಕ್ಷ ಗ್ರಾಹಕರೊಂದಿಗೆ ಬಿ.ಎಸ್.ಎಸ್.ಸಂಸ್ಥೆ ಕೆಲಸ ಮಾಡುತ್ತಾ ಬಂದಿದೆ ಎಂದರು.
ಅಂದಿನಿಂದಲೂ ತನ್ನ ಸಾಮಾಜಿಕ ಹೊಣೆಗಾರಿಕೆ ನಿಧಿ ಅಡಿಯಲ್ಲಿ ಸರಕಾರಿ ಶಾಲಾ ಕಟ್ಟಡ ದುರಸ್ತಿ, ಕಾಂಪೌಂಡ್ ನಿರ್ಮಾಣ,ಶೌಚಾಲಯ ನಿರ್ಮಾಣ, ಪೀಠೋಪಕರಣ, ಪಾಠೋಪಕರಣಗಳ ವಿತರಣೆ, ಗ್ರಾಮೀಣ ಭಾಗದಲ್ಲಿ ಆರೋಗ್ಯ ಚಿಕಿತ್ಸಾ ಶಿಬಿರ,ಹೈನುಗಾರಿಕೆಗೆ ಪ್ರೋತ್ಸಾಹ ಸೇರಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಎಂದರು.ಇದೇ ಮೊದಲ ಬಾರಿಗೆ ವಿದ್ಯಾರ್ಥಿ ವೇತನ ಆರಂಭಿಸಲಾಗಿದೆ. ಹೆಚ್ಚಿನದಾಗಿ ಗ್ರಾಮೀಣ ಮಕ್ಕಳಿಗೆ ಈ ಸೌಲಭ್ಯ ಸಿಗಬೇಕೆಂಬ ಆಶಯ ಸಂಸ್ಥೆಯದಾಗಿದೆ. ಕಿರು ಸಾಲ ಹಿರಿ ಕನಸು ಅದುವೇ ಮೈಕ್ರೋ ಫೈನಾನ್ಸ್ ಎಂಬ ಘೋಷವಾಕ್ಯದೊಂದಿಗೆ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಕೇವಲ ನಂಬಿಕೆಯ ಮೇಲೆ ಸಾಲ ವಿತರಣೆ ಮಾಡುತ್ತಾ ಬಂದಿದ್ದೇವೆ. ವಿದ್ಯಾರ್ಥಿಗಳು ಒಳ್ಳೆಯ ಗುರಿಯೊಂದಿಗೆ ಮುನ್ನೆಡೆದರೆ ಯಶಸ್ಸು ಕಾಣಬಹುದು. ಈ ನಿಟ್ಟಿನಲ್ಲಿ ನಿಮ್ಮೆಲ್ಲರಿಗೂ ಶುಭವಾಗಲಿ ಎಂದರು.
ಬಿ.ಎಸ್.ಎಸ್.ಸಂಸ್ಥೆಯ ಚೀಫ್ ಅಪರೇಟಿಂಗ್ ಅಫೀಸರ್ ಎಸ್.ಪಂಚಾಕ್ಷರಿ ಮಾತನಾಡಿ, ಪಿಯುಸಿ, ಪದವಿ ನಂತರ ನೂರಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅವಕಾಶಗಳಿವೆ. ನಿಮ್ಮ ಆಸಕ್ತಿಯ ವಿಷಯಗಳ ಕಡೆಗೆ ಒತ್ತು ನೀಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆಗೈದವರಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು. ಪ್ರತಿ ಮಧ್ಯಮ ವರ್ಗದ ಕನಸು ಸರಕಾರಿ ನೌಕರಿ. ಹಾಗಾಗಿ ಹೆಚ್ಚಿನ ಪರಿಶ್ರಮದಿಂದ ಓದಿದರೆ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಬಿ.ಎಸ್.ಎಸ್ ಸಂಸ್ಥೆ ಕುರಿತು ಕೃಷಿಕ ಕುಣಿಗಲ್‌ನ ಗಂಗಾಧರಸ್ವಾಮಿ ಮತ್ತು ತುರುವೇಕೆರೆಯ ಮಂಜಯ್ಯ ಅವರು ಮಾತನಾಡಿದರು. ಸುಮಾರು 600 ವಿದ್ಯಾರ್ಥಿಗಳಿಗೆ ೨ ಸಾವಿರದಿಂದ ೫ ಸಾವಿರದವರೆಗೆ ವಿದ್ಯಾರ್ಥಿ ವೇತನ ನೀಡಿ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಬಿ.ಎಸ್.ಎಸ್ ಮೈಕ್ರೋ ಫೈನಾನ್ಸ್ ಸಂಸ್ಥೆಯ ವಲಯ ವ್ಯವಸ್ಥಾಪಕ ಚೌಡಾನಾಯ್ಕ್, ರಾಜ್ಯ ಮುಖ್ಯಸ್ಥ ದರ್ಶನ್, ಕ್ವಾಲಿಟಿ ಮ್ಯಾನೇಜರ್ ಸುರೇಶಕುಮಾರ್, ತರಬೇತಿ ಅಧಿಕಾರಿ ಕರಣ್ ಕುಮಾರ್ ಸೇರಿ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.