ಆತ್ಮವಿಶ್ವಾಸ ತುಂಬಿದರೆ ಶಿಕ್ಷಣ ಪ್ರಗತಿ ಸಾಧ್ಯ: ನಟರಾಜ್‌

| Published : May 01 2024, 01:18 AM IST

ಸಾರಾಂಶ

ಗ್ರಾಮೀಣ ಶಾಲೆಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸುವಂತೆ ಮಾಡುವಲ್ಲಿ ಶಿಕ್ಷಕರು ಹೆಚ್ಚು ಗಮನಹರಿಸಬೇಕು.

ಚಳ್ಳಕೆರೆ: ಗ್ರಾಮೀಣ ಶಾಲೆಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸುವಂತೆ ಮಾಡುವಲ್ಲಿ ಶಿಕ್ಷಕರು ಹೆಚ್ಚು ಗಮನಹರಿಸಬೇಕು. ಶಾಲೆಯ ಪ್ರತಿಯೊಂದು ಚಟುವಟಿಕೆಯಲ್ಲೂ ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯಗೊಳಿಸಬೇಕು. ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರೆ ಮಾತ್ರ ಅವರು ಓದುವದರ ಜೊತೆಗೆ ಇತರೆ ಚಟುವಟಿಕೆಗಳಲ್ಲೂ ಸಹ ಕ್ರಿಯಾಶೀಲರಾಗುತ್ತಾರೆ ಎಂದು ತಾಲೂಕಿನ ತಳಕು ಹೋಬಳಿಯ ಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಿರ್ಗಮನ ಮುಖ್ಯ ಶಿಕ್ಷಕ ಎಂ.ಎಸ್.ನಟರಾಜ್‌ ತಿಳಿಸಿದರು.

ಸೇವಾ ಅವಧಿಯನ್ನು ಪೂರ್ಣಗೊಳಿಸಿ ಮಂಗಳವಾರ ಸೇವೆಯಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಶಾಲೆಯ ಶಿಕ್ಷಕರ ವೃಂದ ಅವರನ್ನು ಬೀಳ್ಕೊಡುವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಶಿಕ್ಷಕರ ಪರವಾಗಿ ಮಾತನಾಡಿದ ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕ ಕೆ.ಎಸ್.ಶ್ರೀಕಾಂತ್, ಇಂದು ಸೇವೆಯಿಂದ ನಿವೃತ್ತರಾಗುತ್ತಿರುವ ಎಂ.ಎಸ್.ನಟರಾಜ್‌ ಶಿಕ್ಷಣ ಇಲಾಖೆ ಆಸ್ತಿ. ಸುಮಾರು ೨೯ ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದಾರೆ. ವಿವಿಧ ಶಾಲೆಗಳಲ್ಲಿ ಕಾರ್ಯನಿರ್ವಹಿಸಿ ಶಾಲೆಯ ಪ್ರಗತಿಗೆ ಶ್ರಮಿಸಿದ್ದಾರೆ. ನಮ್ಮ ಶಾಲೆಯಲ್ಲೂ ಎರಡೂ ವರ್ಷಗಳಿಂದ ಮುಖ್ಯ ಶಿಕ್ಷಕರಾಗಿ ಉತ್ತಮ ಕಾರ್ಯಚಟುವಟಿಕೆಯಿಂದ ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿದ್ದರು ಎಂದರು.

ಶಿಕ್ಷಕ ಜಿ.ಟಿ.ಮಲ್ಲಿಕಾರ್ಜುನ, ರಾಜೇಶ್ವರಿ, ನಂದೀಶ್, ಪಿ.ವಿಜಯ್, ಚಿಟ್ಟಿಬಾಬು, ಮಂಜಣ್ಣ, ಬಿ.ಸಿ.ಮಂಜುಳಾ, ಗಾಯಿತ್ರಿದೇವಿ, ನಸ್ರತ್‌ ಉನ್ನೀಸಾ ಮುಂತಾದವರು ಭಾಗವಹಿಸಿದ್ದರು.