ವಿದ್ಯಾರ್ಥಿ ಜೀವನದಲ್ಲಿಯೇ ಶಿಕ್ಷಣದ ಜೊತೆ ಜೊತೆಗೆ ಶಿಸ್ತುಬದ್ಧ ಜೀವನ ಶೈಲಿಯೊಂದಿಗೆ ಉತ್ತಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಈ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಉಡುಪಿಯ ಖ್ಯಾತ ಮಧುಮೇಹ ತಜ್ಞ ವೈದ್ಯ ಡಾ. ಶ್ರುತಿ ಬಲ್ಲಾಳ್ ಹೇಳಿದರು.
ಉಡುಪಿ: ವಿದ್ಯಾರ್ಥಿ ಜೀವನದಲ್ಲಿಯೇ ಶಿಕ್ಷಣದ ಜೊತೆ ಜೊತೆಗೆ ಶಿಸ್ತುಬದ್ಧ ಜೀವನ ಶೈಲಿಯೊಂದಿಗೆ ಉತ್ತಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಈ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಉಡುಪಿಯ ಖ್ಯಾತ ಮಧುಮೇಹ ತಜ್ಞ ವೈದ್ಯ ಡಾ. ಶ್ರುತಿ ಬಲ್ಲಾಳ್ ಹೇಳಿದರು.
ಪುಷ್ಪಾನಂದ ಫೌಂಡೇಶನ್ ವತಿಯಿಂದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಉಡುಪಿ ತಾಲೂಕಿನ 554 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಫೌಂಡೇಶನ್ ಪ್ರವರ್ತಕರಾದ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ತಮ್ಮ ತಂದೆ ತಾಯಿಯ ಹೆಸರಿನಲ್ಲಿ ಆರಂಭಿಸಿರುವ ಫೌಂಡೇಶನ್ ಮೂಲಕ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮ ಅತ್ಯಂತ ಸಂತಸ ತಂದಿದ್ದು, ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳ ಸಾಧನೆ ಇತರ ವಿದ್ಯಾರ್ಥಿಗಳಿಗೂ ಪ್ರೇರಣೆ ನೀಡಲಿ ಎಂದರು.ಉಡುಪಿ ನಗರಸಭೆಯ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಪೂಜಾರಿ ಮಾತನಾಡಿ, ಶಾಸಕ ಯಶ್ ಪಾಲ್ ಸುವರ್ಣ ತಮ್ಮ ಪುಷ್ಪಾನಂದ ಫೌಂಡೇಶನ್ ಹಾಗೂ ಅಧ್ಯಕ್ಷರಾಗಿರುವ ಮೀನು ಮಾರಾಟ ಫೆಡರೇಶನ್ ಮತ್ತು ಮಹಾಲಕ್ಷ್ಮೀ ಬ್ಯಾಂಕ್ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಮೂಲಕ ಶಿಕ್ಷಣದ ಬಗ್ಗೆ ತಮ್ಮ ಸಾಮಾಜಿಕ ಬದ್ಧತೆಯನ್ನು ನಿರೂಪಿಸಿದ್ದಾರೆ ಎಂದರು.ಅಜ್ಜರಕಾಡು ವಾರ್ಡಿನ ನಗರಸಭೆ ಮಾಜಿ ಸದಸ್ಯೆ ರಶ್ಮಿ ಸಿ. ಭಟ್, ಬಾಲಕಿಯರ ಸರಕಾರಿ ಪಪೂ ಕಾಲೇಜಿನ ಉಪಾಧ್ಯಕ್ಷೆ ನಿರುಪಮಾ ಪ್ರಸಾದ್ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಜಗದೀಶ್ ಕುಮಾರ್, ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಇಂದಿರಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿಜೇತ ಶೆಟ್ಟಿ ನಿರೂಪಿಸಿದರು.