ಸಾರಾಂಶ
ನಮ್ಮ ಗ್ರಂಥಾಲಯಕ್ಕೆ ಜೀವಧಾರ ರಕ್ತನಿಧಿ , ಒಂದು ವರ್ಷದಿಂದ ಕನ್ನಡ ದಿನಪತ್ರಿಕೆಗಳನ್ನ ಓದುಗರಿಗಾಗಿ ನೀಡುತ್ತಾ ಸೇವೆ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಉದಯಗಿರಿಯಲ್ಲಿರುವ ಕನ್ನಡಪ್ರೇಮಿ ಸೈಯದ್ ಇಸಾಕ್ ಅವರ ಗ್ರಂಥಾಲಯದಲ್ಲಿ ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ಲಯನ್ಸ್ ಜೀವಧಾರ ರಕ್ತನಿಧಿ ಕೇಂದ್ರ ಮತ್ತು ಕೆಎಂಪಿಕೆ ಟ್ರಸ್ಟ್ ವತಿಯಿಂದ ವಿವಿಧ ಪುಸ್ತಕಗಳನ್ನು ಕೊಡುಗೆಯಾಗಿ ಬುಧವಾರ ನೀಡಲಾಯಿತು.ಈ ವೇಳೆ ಸೈಯದ್ ಇಸಾಕ್ ಮಾತನಾಡಿ, ಶಿಕ್ಷಣ ಎನ್ನುವುದು ದೇಶದ ಪ್ರತಿಯೊಂದು ಮಗುವಿಗೂ ಸಿಗಬೇಕು, ನಮ್ಮ ಬಳಿಯಿರುವ ಸಂಪತ್ತು ಅಂತಸ್ತು ಅಧಿಕಾರವನ್ನ ಯಾರಾದರೂ ಕಸಿದುಕೊಳ್ಳಬಹುದು. ಆದರೆ ನಮ್ಮಲ್ಲಿರುವ ಜ್ಞಾನವನ್ನು ಯಾರೂ ಕಿತ್ತುಕೊಳ್ಳಲು ಆಗುವುದಿಲ್ಲ ಎಂದರು.
ನಮ್ಮ ಗ್ರಂಥಾಲಯಕ್ಕೆ ಜೀವಧಾರ ರಕ್ತನಿಧಿ ಕೇಂದ್ರ ವತಿಯಿಂದ ಕಳೆದ ಒಂದು ವರ್ಷದಿಂದ ಕನ್ನಡ ದಿನಪತ್ರಿಕೆಗಳನ್ನ ಓದುಗರಿಗಾಗಿ ನೀಡುತ್ತಾ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳು, ಶುಭ ಸಮಾರಂಭಗಳು ಮತ್ತು ಹುಟ್ಟುಹಬ್ಬಗಳಲ್ಲಿ ಕನ್ನಡ ಪುಸ್ತಕಗಳನ್ನ ಉಡುಗರೆಯಾಗಿ ನೀಡುವ ಸಂಪ್ರದಾಯ ರೂಢಿಸಿಕೊಳ್ಳೋಣ. ಇದರಿಂದ ನಾಡಿನ ಕವಿಗಳಿಗೆ, ಸಾಹಿತಿಗಳಿಗೆ ಪ್ರೋತ್ಸಾಹಿಸಬಹುದು ಎಂದು ಹೇಳಿದರು.ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ, ಕನ್ನಡ ಭಾಷೆಯ ಮಹತ್ವವನ್ನ ಮತ್ತು ಕರುನಾಡಿನ ಸಂಪತ್ತನ್ನ ಮುಂದಿನ ಯುಪೀಳಿಗೆಗೆ ಪರಿಚಯಿಸುವಲ್ಲಿ ಗ್ರಂಥಾಲಯದ ಪಾತ್ರ ಪ್ರಮುಖವಾದುದು. ಇತ್ತೀಚಿನ ದಿನದಲ್ಲಿ ರಾಜಕೀಯ, ಜಾತಿ ವ್ಯವಸ್ಥೆ, ಧರ್ಮ ಸಂಘರ್ಷದ ನಡುವೆ ಕನ್ನಡ ಭಾಷಾ ಅಭಿಮಾನ ಕಳೆದುಕಳ್ಳುತ್ತಿರುವುದು ಕನ್ನಡಿಗರಾಗಿ ನಾವು ನಮಗೆ ಮಾಡಿಕೊಳ್ಳುವ ಅಪಮಾನ ಎಂದರು.
ಸೈಯದ್ ಇಸಾಖ್ ಅವರ ನಾಲ್ಕು ದಶಕದ ಕನ್ನಡ ಸೇವೆ ಅಪಾರವಾದುದು. ಈ ಗ್ರಂಥಾಲಯಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಮೈಸೂರು ನಗರಪಾಲಿಕೆ ವಿಶೇಷ ನೆರವು ಕಲ್ಪಿಸಿ, ಶಾಶ್ವತ ಕನ್ನಡ ಗ್ರಂಥಾಯಲಯಕ್ಕೆ ಸಹಕಾರ ನೀಡಬೇಕು ಎಂದು ಅವರು ತಿಳಿಸಿದರು.ಬಿಜೆಪಿ ಮಹಿಳಾ ಮೋರ್ಚಾ ನಗರಾಧ್ಯಕ್ಷೆ ರೇಣುಕಾ ರಾಜ್, ನಗರ ಪಾಲಿಕೆ ಮಾಜಿ ಸದಸ್ಯ ರಘುರಾಜೇ ಅರಸ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಮುಖಂಡರಾದ ಅಜಯ್ ಶಾಸ್ತ್ರಿ, ದುರ್ಗಾಪ್ರಸಾದ್, ರಾಕೇಶ್, ಎಸ್.ಎನ್. ರಾಜೇಶ್ ಮೊದಲಾದವರು ಇದ್ದರು.