ಸಾರಾಂಶ
ಡಂಬಳ: ನಾವು ಮುಖ್ಯವಾಹಿನಿಯಲ್ಲಿ ಇರಬೇಕಾದರೆ ನಮ್ಮ ಸಮುದಾಯದ ಪಾಲಕರು ಜಾಗೃತೆಯಿಂದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಯುವಸಮೂಹ ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ದುರಗಪ್ಪ ಹರಿಜನ ಹೇಳಿದರು.
ಡಂಬಳ ಗ್ರಾಮದಲ್ಲಿ ಶುಕ್ರವಾರ ಮಾದಿಗ ಸಮುದಾಯದ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ 134ನೇ ಜಯಂತ್ಯುತ್ಸವ, ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ ಅವರ 118ನೇ ಜಯಂತ್ಯುತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ನಮ್ಮ ಸಮುದಾಯ ಸರಿಯಾದ ಮಾರ್ಗದಲ್ಲಿ ನಡೆಯಬೇಕಾದರೆ ಹಿರಿಯರ ಹಾಗೂ ಪ್ರಜ್ಞಾವಂತರ ಮಾರ್ಗದರ್ಶನ ತುಂಬಾ ಅವಶ್ಯವಾಗಿದೆ ಎಂದರು.ಸಮುದಾಯದ ಹಿರಿಯ ಮುಖಂಡ ಕೆ.ಎನ್. ದೊಡ್ಡಮನಿ ಮಾತನಾಡಿ, ಸ್ವಾತಂತ್ರ್ಯ ದೊರೆತು ಏಳು ದಶಕಗಳು ಕಳೆದರೂ ನಮ್ಮ ಸಮುದಾಯ ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕವಾಗಿ ಶೋಷಣೆಗೆ ಒಳಗಾಗಿರುವುದಕ್ಕೆ ಪ್ರಮುಖ ಕಾರಣ ನಮ್ಮನ್ನು ಆಳುವ ಸರ್ಕಾರಗಳು. ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಲೀಲಾ ದೇವಪ್ಪ ಬಂಡಿಹಾಳ, ಗ್ರಾಮ ಪಂಚಾಯಿತಿ ಸದಸ್ಯರಾದ ಮರಿಯಪ್ಪ ಸಿದ್ಧಣ್ಣವರ ಮಾತನಾಡಿ, ಅಂಬೇಡ್ಕರ್ ಅವರ ತತ್ವ ಸಿದ್ಧಾಂತದಂತೆ ಶಿಕ್ಷಣ ಸಂಘಟನೆ ಹೋರಾಟದ ಮೂಲಕ ನಮ್ಮ ಹಕ್ಕು ಪಡೆದುಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು. ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನರಾಮ್ ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಸೋಮಪ್ಪ ಹೈತಾಪೂರ ಪ್ರಸ್ತಾವಿಕವಾಗಿ ಮಾತನಾಡಿ, ನಮ್ಮ ಸಮುದಾಯ ಪ್ರತಿಯೊಂದು ಓಣಿಯಲ್ಲಿ ಅಕ್ರಮ ಸಾರಾಯಿ ಮಾರಾಟ, ಅಕ್ರಮ ಚಟುವಟಿಕೆಗಳು ನಡೆಯದಂತೆ ಪ್ರತಿಯೊಬ್ಬರು ಜಾಗೃತಿ ವಹಿಸಬೇಕು. ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು. ಮಕ್ಕಳು ನಮ್ಮ ಸಮುದಾಯದ ಆಸ್ತಿಯಾಗಿದ್ದು, ಅವರು ತಪ್ಪು ದಾರಿಯಲ್ಲಿ ಹೋಗದಂತೆ ತಡೆಯುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದರು.
ಮೊಳಗಿದ ಜೈ ಭೀಮ ಹಾಡು: ಶ್ರೀಮೈಲಾರಲಿಂಗೇಶ್ವರ ದೇವಸ್ಥಾನದಿಂದ ಸಾಯಂಕಾಲ ಆರುಗಂಟೆಗೆ ಪ್ರಾರಂಭವಾದ ಮೆರವಣಿಗೆ ಶ್ರೀ ಕೆಂಚಮ್ಮ ದೇವಸ್ಥಾನದ ಮಾರ್ಗದ ರಸ್ತೆ, ರೇವಡಿ ಗಿಡ, ಹಾಲೇಶ್ವರ ದೇವಸ್ಥಾನ, ಮುಖ್ಯ ಬಜಾರ, ಮ್ಯಾಗಳ ಓಣಿ, ಜಂಗಳಿಯವರ ಓಣಿ ಸೇರಿದಂತೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ನಡೆಯಿತು. ಧ್ವನಿ ವರ್ಧಕದಲ್ಲಿ ಮಹಾನಾಯಕ, ಜೈ ಭೀಮ ಹಾಡು, ಭೀಮಾ ಕೊರೆಗಾಂವ್ ಸೇರಿದಂತೆ ಹಲವು ಕ್ರಾಂತಿ ಗೀತೆ, ಹಿಂದಿ ಹಾಗೂ ಕನ್ನಡ ಹಾಡುಗಳಿಗೆ ನೂರಾರು ಯುವಕರು ನೀಲಿ ಶಾಲು ಹಾಗೂ ಹಣೆಗೆ ನೀಲಿ ತಿಲಕವನ್ನಿಟ್ಟುಕೊಂಡು ಭರ್ಜರಿಗಾಗಿ ನೃತ್ಯ ಮಾಡುವುದು ಗಮನ ಸೆಳೆಯಿತು.ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷೆ ಮಂಜವ್ವ ನಿಂಗಪ್ಪ ಮಾದರ, ಸದಸ್ಯೆ ಹನಮವ್ವ ಶಿವಪ್ಪ ದೊಡ್ಡಮನಿ, ಯುವ ಮುಖಂಡ ಮಹೇಶ ಗುಡ್ಡದ, ಹಿರಿಯರಾದ ಹನಮಪ್ಪ ತಳಗೇರಿ, ಯುವಮುಖಂಡ ನಿಂಗಪ್ಪ ಮಾದರ, ದುರಗಪ್ಪ ಗೋವಿನಕೊಪ್ಪ ಸೇರಿದಂತೆ ಜೈ ಭೀಮ್ ಯುವಕರು, ಅಭಿಮಾನಿಗಳು ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಇತರರು ಭಾಗವಹಿಸಿದ್ದರು. ಶಿಕ್ಷಕ ಮಲ್ಲಿಕಾರ್ಜುನ ಗೌಡಣ್ಣವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.