ಶಿಕ್ಷಣದಿಂದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲ: ಕೆ.ಪಿ.ಬಾಬು

| Published : Aug 12 2025, 12:30 AM IST

ಸಾರಾಂಶ

ಮಕ್ಕಳಲ್ಲಿ ಅದ್ಭುತವಾದ ಗ್ರಹಿಕೆ ಶಕ್ತಿ ಇದೆ. ಎಲ್ಲ ವಿಷಯಗಳನ್ನು ಮನನ ಮಾಡಿಕೊಳ್ಳುವ ಸಾಮರ್ಥ್ಯವಿದೆ. ಆಸಕ್ತಿಯಿಂದ ಕಲಿಕೆಯಲ್ಲಿ ತೊಡಗಿದಾಗ ಮಾತ್ರ ಇದು ಸಾಧ್ಯವಾಗಲಿದೆ. ಪರೀಕ್ಷೆ ಬಂದ ಸಮಯಕ್ಕೆ ತಯಾರಿ ನಡೆಸುವ ಬದಲು ಪರೀಕ್ಷಾ ದಿನಗಳ ಪೂರ್ವದಲ್ಲೇ ಅಧ್ಯಯನಶೀಲರಾಗಿ ಉತ್ತಮ ಸಾಧನೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ವಿದ್ಯಾರ್ಥಿ ಜೀವನದಿಂದಲೇ ಕಲಿಕೆಯತ್ತ ಆಸಕ್ತಿ ವಹಿಸಿ ಶಿಕ್ಷಣವಂತರಾದರೆ ಭವಿಷ್ಯ ಉಜ್ವಲವಾಗಲಿದೆ ಎಂದು ರಾಮನಗರ ಡಯಟ್ ಉಪನ್ಯಾಸಕ ಕೆ.ಪಿ.ಬಾಬು ಹೇಳಿದರು.

ತಾಲೂಕಿನ ತಳಗವಾದಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ನಾಡಪ್ರಭು ಲಯನ್ಸ್ ಸಂಸ್ಥೆ ಹಾಗೂ ಯೂನಿವರ್ಸಲ್ ಸೇವಾ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಾಗಾರದಲ್ಲಿ ಮಾತನಾಡಿದರು.

ಮಕ್ಕಳಲ್ಲಿ ಅದ್ಭುತವಾದ ಗ್ರಹಿಕೆ ಶಕ್ತಿ ಇದೆ. ಎಲ್ಲ ವಿಷಯಗಳನ್ನು ಮನನ ಮಾಡಿಕೊಳ್ಳುವ ಸಾಮರ್ಥ್ಯವಿದೆ. ಆಸಕ್ತಿಯಿಂದ ಕಲಿಕೆಯಲ್ಲಿ ತೊಡಗಿದಾಗ ಮಾತ್ರ ಇದು ಸಾಧ್ಯವಾಗಲಿದೆ. ಪರೀಕ್ಷೆ ಬಂದ ಸಮಯಕ್ಕೆ ತಯಾರಿ ನಡೆಸುವ ಬದಲು ಪರೀಕ್ಷಾ ದಿನಗಳ ಪೂರ್ವದಲ್ಲೇ ಅಧ್ಯಯನಶೀಲರಾಗಿ ಉತ್ತಮ ಸಾಧನೆ ಮಾಡಬೇಕು.

ಸಮಯ ಬಹಳ ಅಮೂಲ್ಯವಾದುದು. ಕಳೆದುಹೋದ ಸಮಯ ಮತ್ತೆ ಸಿಗುವುದಿಲ್ಲ. ಸಮಯವನ್ನು ವ್ಯರ್ಥಮಾಡದೆ ಪಠ್ಯವಿಷಯಗಳನ್ನು ಮನನ ಮಾಡಿಕೊಳ್ಳಬೇಕು. ಆಗಾಗ ಪುನರಾವರ್ತನೆ ಮಾಡುವುದು, ಮೆಲುಕು ಹಾಕುವುದರಿಂದ ವಿಷಯಗಳು ಹೆಚ್ಚು ಮನದಟ್ಟಾಗುತ್ತವೆ ಎಂದರು.

ಓದುವ ಸಮಯದಲ್ಲಿ ಮನಸ್ಸು ಚಂಚಲಗೊಳ್ಳುವುದಕ್ಕೆ ಅವಕಾಶ ನೀಡಬಾರದು. ಅದನ್ನು ನಿಯಂತ್ರಣದಲ್ಲಿಟ್ಟುಕೊಂಡು ನಿರಂತರ ಅಧ್ಯಯನದಲ್ಲಿ ತೊಡಗಬೇಕು. ಉತ್ತಮ ಕಲಿಕೆಯಿಂದ ಉನ್ನತ ಸ್ಥಾನ-ಮಾನ ಪಡೆಯಲು ಸಾಧ್ಯವಿದೆ. ಈಗ ಇಪ್ಪತ್ತೈದು ವರ್ಷ ಇಷ್ಟಪಟ್ಟು ವ್ಯಾಸಂಗ ಮಾಡಿದರೆ ಮುಂದಿನ ಜೀವನ ಸುಖಮಯವಾಗಿರುತ್ತದೆ ಎಂದರು.

ವಿದ್ಯಾರ್ಥಿಗಳು ಮೊಬೈಲ್, ಸಾಮಾಜಿಕ ಜಾಲ ತಾಣಗಳಿಂದ ದೂರ ಉಳಿಯಬೇಕು. ಉತ್ತಮವಾದ ಆಹಾರ ಸೇವಿಸುವುದು, ಕಣ್ತುಂಬಾ ನಿದ್ರೆ ಮಾಡುವುದು, ಮನಸ್ಸನ್ನು ನಿರಾಳವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಯಾವುದೇ ಕಾರಣಕ್ಕೂ ಒತ್ತಡಗಳಿಗೆ ಒಳಗಾಗಬಾರದು. ಓದಿನ ಬಗ್ಗೆ ನಿಖರತೆ, ಸ್ಪಷ್ಟತೆ ಇದ್ದಾಗ ಯಶಸ್ಸು ಸುಲಭವಾಗುತ್ತದೆ ಎಂದರು.

ಯೂನಿವರ್ಸಲ್ ಸೇವಾ ಟ್ರಸ್ಟ್ ಕಾರ್ಯದರ್ಶಿ ಟಿ.ಪಿ.ಪ್ರಕಾಶ್ ಮಾತನಾಡಿ, ಮಕ್ಕಳು ತಂದೆ-ತಾಯಿಯಯ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆ ಅಲಂಕರಿಸುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಟಿ.ಎಸ್.ಚಂದ್ರು, ಟಿ.ಎಂ.ರಮೇಶ್, ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಟಿ.ಪಿ.ಚಂದ್ರಶೇಖರ್, ಶಾಲೆ ಮುಖ್ಯ ಶಿಕ್ಷಕರಾದ ನಿರಂಜನ್, ಬಿ.ಟಿ.ರಾಮಲಿಂಗಯ್ಯ, ಸಹ ಶಿಕ್ಷಕರಾದ ರಮೇಶ್, ಮಹೇಂದ್ರ ಇದ್ದರು.