ಮಾನವನು ವಿಜ್ಞಾನ, ತಂತ್ರಜ್ಞಾನ ಬಳಕೆ ಮಾಡಿಕೊಂಡು ವಿಮಾನ, ರೈಲು, ಮೋಟಾರು ತಯಾರಿಸಿ ಶರವೇಗದಲ್ಲಿ ಜಗತ್ತನ್ನು ಸುತ್ತುತ್ತಿದ್ದಾನೆ. ಆದರೆ ಮನುಷ್ಯ ಮನುಷ್ಯರನ್ನು ಪ್ರೀತಿಸುವ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವಲ್ಲಿ ವಿಫಲನಾಗಿದ್ದಾನೆ. ಇದರಿಂದ ಸಾಮಾಜಿಕ ಸಂಬಂಧಗಳು ದಿನದಿಂದ ದಿನಕ್ಕೆ ಸಡಿಲಗೊಳ್ಳುತ್ತಿವೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕಾರ್ಯದರ್ಶಿ ಎಂ.ಗುರುಸಿದ್ಧಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

- ಕನಕ ಶಾಲೆಯಲ್ಲಿ ಮಕ್ಕಳ ಕಲಾ ಪ್ರತಿಭೆ ಕಾರ್ಯಕ್ರಮ

- - -

ದಾವಣಗೆರೆ: ಮಾನವನು ವಿಜ್ಞಾನ, ತಂತ್ರಜ್ಞಾನ ಬಳಕೆ ಮಾಡಿಕೊಂಡು ವಿಮಾನ, ರೈಲು, ಮೋಟಾರು ತಯಾರಿಸಿ ಶರವೇಗದಲ್ಲಿ ಜಗತ್ತನ್ನು ಸುತ್ತುತ್ತಿದ್ದಾನೆ. ಆದರೆ ಮನುಷ್ಯ ಮನುಷ್ಯರನ್ನು ಪ್ರೀತಿಸುವ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವಲ್ಲಿ ವಿಫಲನಾಗಿದ್ದಾನೆ. ಇದರಿಂದ ಸಾಮಾಜಿಕ ಸಂಬಂಧಗಳು ದಿನದಿಂದ ದಿನಕ್ಕೆ ಸಡಿಲಗೊಳ್ಳುತ್ತಿವೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕಾರ್ಯದರ್ಶಿ ಎಂ.ಗುರುಸಿದ್ಧಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಬಾಲಭವನ ಸಮಿತಿ ವತಿಯಿಂದ ತಾಲೂಕಿನ ಅಣಬೇರಿನ ಕನಕ ಸೆಂಟ್ರಲ್ ಸ್ಕೂಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ "ಮಕ್ಕಳ ಕಲಾ ಪ್ರತಿಭೆ ಕಾರ್ಯಕ್ರಮ " ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳನ್ನು ನೈತಿಕ ತಳಹದಿಯ ಮೇಲೆ ಬೆಳೆಸುವ ಮತ್ತು ಸತ್ಯದ ದಾರಿಯನ್ನು ಪರಿಚಯಿಸುವ ಕೆಲಸವಾಗಬೇಕು. ಮನೆ, ಶಾಲೆ, ಮತ್ತು ಸಮಾಜ ಸೇರಿ ಮಕ್ಕಳ ಮನಸ್ಸನ್ನು ಅರಳಿಸುವಂಥ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಕೆಲಸ ಮಾಡಬೇಕಿದೆ ಎಂದರು.

ಬಾಲ್ಯದಿಂದಲೇ ಮಕ್ಕಳಿಗೆ ಪಠ್ಯದ ಜೊತೆ ಪಠ್ಯೇತರ ಚಟವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಬೇಕು. ಓದು ಮುಖ್ಯವಾದರೂ ಕ್ರೀಡೆ, ಸಾಂಸ್ಕತಿಕ ಕಾರ್ಯಕ್ರಮ, ಹಿರಿಯ-ಕಿರಿಯರೊಂದಿಗೆ ಬೆರೆಯುವಿಕೆ, ಕೃಷಿ, ಪಶು ಸಂಗೋಪನೆ, ಸಂಗೀತ, ಹಾಡುಗಾರಿಕೆಯಂಥ ಹವ್ಯಾಸಗಳೂ ಮುಖ್ಯ. ಮಕ್ಕಳು ಇಂಥ ವಿಷಯಗಳಲ್ಲಿಯೂ ತೊಡಗಿಸಿಕೊಳ್ಳಲು ಪೋಷಕರು ಅವಕಾಶಗಳ ಕಲ್ಪಿಸಬೇಕು ಎಂದು ಹೇಳಿದರು.

ಜಿಲ್ಲಾ ಬಾಲಭವನ ಕಾರ್ಯಕ್ರಮ ಸಂಯೋಜಕಿ ಎಸ್.ಬಿ.ಶಿಲ್ಪ ಮಾತನಾಡಿ, ಜಿಲ್ಲಾ ಬಾಲಭವನ ಸಮಿತಿ ದಾವಣಗೆರೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ, ಮಕ್ಕಳಿಗೆ ಪದಕ ಬಹುಮಾನಗಳನ್ನು ನೀಡುತ್ತಿದೆ. ವಿಶೇಷವಾಗಿ ಗ್ರಾಮೀಣ ಶಾಲೆಗಳ 6ರಿಂದ 16 ವರ್ಷದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯ ಗುರಿ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದೇವೆ. ಮಕ್ಕಳಲ್ಲಿ ಆತ್ಮಸ್ಥೈರ್ಯ ಮತ್ತು ಜ್ಞಾನದ ವಿಕಾಸಕ್ಕೆ ಬೇಕಾದ ವೇದಿಕೆ ಜಿಲ್ಲಾ ಬಾಲಭವನ ಸಮಿತಿ ನಿರ್ಮಾಣ ಮಾಡುತ್ತಿದೆ ಎಂದರು.

ಕನಕ ಸೆಂಟ್ರಲ್ ಶಾಲೆ ಆಡಳಿತಾಧಿಕಾರಿ ಮಹಮ್ಮದ್ ಇರ್ಫಾನ್ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸದ್ಧಾಂ ಹುಸೇನ್, ಶ್ರೀದೇವಿ, ಶ್ವೇತಾ, ಇತರರು ಇದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

- - -

-19ಕೆಡಿವಿಜಿ31: ಅಣಬೇರಿನ ಕನಕ ಸೆಂಟ್ರಲ್ ಶಾಲೆಯಲ್ಲಿ ನಡೆದ ಮಕ್ಕಳ ಕಲಾ ಪ್ರತಿಭೆ ಕಾರ್ಯಕ್ರಮವನ್ನು ಎಂ.ಗುರುಸಿದ್ಧಸ್ವಾಮಿ ಉದ್ಘಾಟಿಸಿದರು.