ದೇಶಕಟ್ಟುವಲ್ಲಿ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ದೊಡ್ಡದು

| Published : Oct 07 2025, 01:02 AM IST

ಸಾರಾಂಶ

ದೇಶಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವ ಮಹತ್ತರ ಜವಾಬ್ದಾರಿ ಶಿಕ್ಷಣ ಸಂಸ್ಥೆಯದ್ದಾಗಿದೆ ಎಂದು ಸುವರ್ಣಮುಖಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆರ್.ಕೆ.ಧೃವಕುಮಾರ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಮಧುಗಿರಿ

ದೇಶಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವ ಮಹತ್ತರ ಜವಾಬ್ದಾರಿ ಶಿಕ್ಷಣ ಸಂಸ್ಥೆಯದ್ದಾಗಿದೆ ಎಂದು ಸುವರ್ಣಮುಖಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆರ್.ಕೆ.ಧೃವಕುಮಾರ್ ಅಭಿಪ್ರಾಯಪಟ್ಟರು.

ಇಲ್ಲಿನ ಕನ್ನಡಭವನದಲ್ಲಿ ಸಂಸ್ಥೆಯ 1998ನೇ ಸಾಲಿನ ಎಸ್‌ಎಸ್‌ಎಲ್ಸಿ ಹಳೇ ವಿದ್ಯಾರ್ಥಿಗಳಿಂದ ನಡೆದ ಗುರುವಂದನಾ ಹಾಗೂ ಸ್ನೇಹಿತರ ಸಂತೋಷ ಕೂಟ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ನಿಮ್ಮಂತೆಯೇ ನಾನೂ ಕೂಡ ಅದೃಷ್ಟವಂತ. ಒಂದು ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿ ಉಳಿಸಲು ನಿಮ್ಮಂತಹ ಶಿಕ್ಷಕರ, ವಿದ್ಯಾರ್ಥಿಗಳ ಕೊಡುಗೆ ಅಪಾರವಾದುದು. ಈಗ ಈ ಸಂಸ್ಥೆಯಲ್ಲಿ ಕಲಿತವರು ಸಮಾಜದಲ್ಲಿ ಉನ್ನತ ವ್ಯಕ್ತಿಯಾಗಿ ಉನ್ನತ ಹುದ್ದೆಗಳನ್ನು ಪಡೆದು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಂಸ್ಥೆಗೆ ಕೀರ್ತಿ ತಂದಿದ್ದೀರಾ. ನೀವು ಶಿಕ್ಷಣ ಪಡೆಯುವಾಗ ಓದಿದ ಸಂಸ್ಥೆ ಮತ್ತು ಶಿಕ್ಷಕರನ್ನು ಅಷ್ಟಾಗಿ ಗಮನಿಸಿರುವುದಿಲ್ಲ. ಆದರೂ ಸಮಾಜದಲ್ಲಿ ಗೌರವ ಸ್ಥಾನಗಳನ್ನು ಹೊಂದಿದಾಗ ಎಲ್ಲವೂ ನಿಮ್ಮ ಗಮನಕ್ಕೆ ಬರುತ್ತದೆ. ನಿಮ್ಮನ್ನು ಸರಿಯಾಗಿ ನೋಡಿದ್ದಿಲ್ಲ. ಆದರೂ ತಾವುಗಳು ಸಂತೋಷದಿಂದ ಈ ಗುರುವಂದನೆ ಕಾರ್ಯಕ್ರಮ ನಡೆಸಿ ನಮಗೆ ಗೌರವಿಸಿರುವುದು ನಿಜಕ್ಕೂ ಸಂತಸ ತಂದಿದೆ. ತಾವು ಸಂಸ್ಥೆಯ ಕುಡಿಗಳು ನಿಮ್ಮ ಬದುಕಲ್ಲೂ ಸಾರ್ಥಕ ಭಾವ ಬರುವಂತೆ ನಡೆದುಕೊಂಡಿದ್ದೀರಿ. ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ. ತಮ್ಮ ಮಕ್ಕಳನ್ನು ಈ ಸಮಾಜಕ್ಕೆ ಆಸ್ತಿಯನ್ನಾಗಿ ಮಾಡಿ ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗುವಂತೆ ಮಾಡಬೇಡಿ ಎಂದರು.

ಉಪನ್ಯಾಸಕ ಪುಟ್ಟರಂಗಪ್ಪ ಮಾತನಾಡಿ, ಎಲ್ಲ ಹಳೇಯ ವಿದ್ಯಾರ್ಥಿಗಳು ಕೂಡಿರುವ ಈ ಸಮಾರಂಭ ಕೂಡಲ ಸಂಗಮದಂತೆ ಭಾಸವಾಗುತ್ತಿದೆ. ಹಳೇಯ ವಿದ್ಯಾರ್ಥಿಗಳು ನಿಮ್ಮ ಹಳೆಯ ನೆನಪಲ್ಲಿ ವಿದ್ಯಾಭ್ಯಾಸ ಮಾಡಿದ ಶಾಲೆಯ ಶಿಕ್ಷಕರು ಹಾಗೂ ಸ್ನೇಹಿತರನ್ನು ನೆನೆಯುತ್ತಾ ಅದೇ ಸಮಯದಲ್ಲಿ ಶಿಕ್ಷಣ ಕಲಿಸಿದ ಗುರುಗಳಿಗೆ ಗೌರವ ಸಲ್ಲಿಸುವ ನಿಮ್ಮ ಶ್ರದ್ದೆಗೆ ಅಭಿನಂದನೆಗಳು. ಈ ಸುವರ್ಣ ಮುಖಿ ಸಂಸ್ಥೆಯಲ್ಲಿ ಉಪನ್ಯಾಸಕನಾಗಿ ದುಡಿದು ನಿಮ್ಮತಂಹ ಶಿಷ್ಯರನ್ನು ಗಳಿಸಿದ್ದು ನನಗೂ ಖುಷಿ ತಂದಿದೆ. ಸಮಾಜ ನಿರ್ಮಿಸುವಲ್ಲಿ ನಿಮ್ಮ ಕೊಡುಗೆ ಅಪಾರ, ಈಗ ನಿಮ್ಮ ಮಕ್ಕಳ ಸರದಿಯಾಗಿದ್ದು ಗುರುಕುಲ ಕಾಲದ ಶಿಕ್ಷಣ ಹಾಗೂ ಶಿಕ್ಷಕರಿಗೆ ನೀಡುವ ಗೌರವ ನೀಡುವಂತೆ ನಿಮ್ಮ ಮಕ್ಕಳಿಗೂ ತಿಳಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಮಂಜುನಾಥ್‌,ಶಿಕ್ಷಕ ಶಿವಕುಮಾರ್, ಶೇಖರಪ್ಪ, ರಾಮಯ್ಯ, ಆದಿನಾರಾಯಣ್, ಸೈಯದ್ ಗೌಸ್ , ಸಹ ಶಿಕ್ಷಕ ಮಂಜುನಾಥ್‌, ನಾಗೇಂದ್ರ, ನಂದನ್‌, ನರ್ಮದಾ , ರಂಗಸ್ವಾಮಿ, ನರಸಿಂಹಮೂರ್ತಿ, ಪವಿತ್ರ, ಧನಲಕ್ಷ್ಮೀ, ಯಶೋಧಾ, ಮಮತ, ಗಂಗಾಧರ್, ನಾಗೇಂದ್ರ ಇದ್ದರು.