ಮಕ್ಕಳಿಗೆ ಪ್ರಶ್ನೆ ಮಾಡುವ ಹಾಗೂ ಶೈಕ್ಷಣಿಕ ಮನೋಭಾವ ವೃದ್ಧಿಯಾಗುವುದರ ಜೊತೆಗೆ ಮಕ್ಕಳಲ್ಲಿ ಭಾವೈಕ್ಯತೆ ಮೂಡಿಸುವ ಉದ್ದೇಶದಿಂದ ಕಲಿಕಾ ಹಬ್ಬ ಆಯೋಜಿಸಿರುವುದು ಸಂತೋಷದ ಸಂಗತಿ ಎಂದು ಹಿರಿಯ ಸಾಹಿತಿ ಡಾ.ಸಿದ್ದು ದಿವಾನ್ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಮಕ್ಕಳಿಗೆ ಪ್ರಶ್ನೆ ಮಾಡುವ ಹಾಗೂ ಶೈಕ್ಷಣಿಕ ಮನೋಭಾವ ವೃದ್ಧಿಯಾಗುವುದರ ಜೊತೆಗೆ ಮಕ್ಕಳಲ್ಲಿ ಭಾವೈಕ್ಯತೆ ಮೂಡಿಸುವ ಉದ್ದೇಶದಿಂದ ಕಲಿಕಾ ಹಬ್ಬ ಆಯೋಜಿಸಿರುವುದು ಸಂತೋಷದ ಸಂಗತಿ ಎಂದು ಹಿರಿಯ ಸಾಹಿತಿ ಡಾ.ಸಿದ್ದು ದಿವಾನ್ ಹೇಳಿದರು.

ಸಮೀಪದ ಮೆಟಗುಡ್ಡ ಗ್ರಾಮದ ಇಟ್ಟನ್ನವರ ತೋಟದ ನಮ್ಮೂರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮುಧೋಳ, ಸಮೂಹ ಸಂಪನ್ಮೂಲ ಕೇಂದ್ರ ಚಿಂಚಖಂಡಿ ಕೆಡಿ ಇವರ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ ೨೦೨೫-೨೬ನೇ ಸಾಲಿನ ಚಿಂಚಖಂಡಿ ಕೆಡಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ವಿಭಾಗದ (ಎಫ್‌ಎಲ್‌ಎನ್) ೧ ರಿಂದ ೫ನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ಹಬ್ಬದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಿಕ್ಷಣದ ಜೊತೆಗೆ ಇನ್ನಿತರ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಿರಂತರವಾಗಿ ಕಲಿಯುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಕಲಿಕಾ ಹಬ್ಬವು ಮಕ್ಕಳಲ್ಲಿ ಹೊಸ ಉತ್ಸಾಹ ಮೂಡಿಸುತ್ತದೆ. ಮಕ್ಕಳು ಮತ್ತು ಶಿಕ್ಷಕರು ಕಲಿಕಾ ಹಬ್ಬದಲ್ಲಿ ಭಾಗವಹಿಸಬೇಕು ಎಂದರು.

ಬಿಆರ್‌ಪಿ ಸಂಗಮೇಶ ನಿಲಗುಂದ ಮಾತನಾಡಿ, ಕಲಿಕಾ ಹಬ್ಬದಲ್ಲಿ ಮಕ್ಕಳು ಆಟ, ಹಾಡು, ನಾಟಕ ಮತ್ತು ಇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಸಂತೋಷದಿಂದ ಕಲಿಯುತ್ತಾರೆ. ಸರ್ಕಾರ ಜಾರಿಗೊಳಿಸಿರುವ ಕಲಿಕಾ ಹಬ್ಬದಿಂದಾಗಿ ಮಕ್ಕಳಿಗೆ ಸ್ಫೂರ್ತಿ ಬರಲಿದ್ದು, ಕಥೆ, ಸಾಹಿತ್ಯ, ಓದು, ಕ್ರೀಡೆ ಮತ್ತು ನಲಿಕಲಿ ಹಮ್ಮಿಕೊಂಡು ಪೂರಕ ವಾತಾವರಣ ಸೃಷ್ಠಿಸುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕರ ಕರ್ತವ್ಯವಾಗಿದೆ ಎಂದರು.

ಸಿಆರ್‌ಪಿ ಹಾಗೂ ಕಸಾಪ ತಾಲೂಕಾಧ್ಯಕ್ಷ ಆನಂದ ಪೂಜಾರಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆಯನ್ನು ಉತ್ತೇಜಿಸಲು ಆಯೋಜಿಸಲಾಗುವ ಒಂದು ಶಾಲಾ-ಮಟ್ಟದ, ಕ್ಲಸ್ಟರ್-ಮಟ್ಟದ ಕಾರ್ಯಕ್ರಮವಾಗಿದ್ದು, ಇದರಲ್ಲಿ ಕಥೆ ಹೇಳುವುದು, ಗಣಿತದ ಆಟಗಳು, ಛದ್ಮವೇಷ, ಚಿತ್ರ ಕಲಾ ಸ್ಪರ್ಧೆಗಳು, ಕೈ ಬರಹ ದಂತಹ ಚಟುವಟಿಕೆಗಳ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅವಕಾಶ ನೀಡಲಾಗುತ್ತದೆ ಎಂದು ಹೇಳಿದರು.

ಈ ವೇಳೆ ಬಿಆರ್‌ಪಿ ಸಂಗಮೇಶ ನಿಲಗುಂದ ಎಸ್.ಡಿ.ಎಂ.ಸಿ ಅಧ್ಯಕ್ಷ ವೆಂಕಪ್ಪ ಯಾದವಾಡ, ಶಾಲೆ ಭೂದಾನಿಗಳಾದ ರಂಗಪ್ಪ ಇಟ್ಟನ್ನವರ ಮುಖ್ಯಶಿಕ್ಷಕ ಕೆ.ಎಲ್. ಬುದ್ನಿ, ವಿ.ಎಂ. ಗಾಣಿಗೇರ, ರಮೇಶ ನಿಡೋಣಿ, ಸುರೇಶ ಪುರವಾರ, ಜ್ಯೋತಿ ಶೇಡಬಾಳ, ಪಿ.ಬಿ. ಹಿರೇಮಠ, ಸಂಜು ಕಂಬಾರ, ರಸೂಲ ಹೊಸಕೋಟಿ, ಮುತ್ತು ತುಂಗಳ, ಸುರೇಶ ರಾಜಮಾನೆ, ಮೆಟಗುಡ್ಡ ಗ್ರಾಮದ ಹಿರಿಯರು, ಎಸ್‌ಡಿಎಂಸಿ ಸರ್ವ ಸದಸ್ಯರು, ಗಜಾನನ ಯುವಕ ಮಂಡಳಿ ಪದಾಧಿಕಾರಿಗಳು, ಪಾಲಕರು, ಯುವಕರು, ಮಹಿಳೆಯರು, ಗ್ರಾಮಸ್ಥರು, ಎಲ್ಲ ಶಾಲೆಯ ಶಿಕ್ಷಕವೃಂದ, ಮಕ್ಕಳು ಇದ್ದರು.