ಹಲವು ಶಾಲಾ ಕಾಲೇಜುಗಳು ರಾಜಕಾರಣಿಗಳಿಗೆ ಸೇರಿವೆ. ಇದರಿಂದ ಬಡವರು ಶಿಕ್ಷಣ ಪಡೆಯುವುದೇ ಕಷ್ಟವಾಗಿದೆ. ಮೈಸೂರಿನಲ್ಲಿ ಗಿರವಿ ಇಟ್ಟ ಚಿನ್ನ ಬಿಡಿಸಿಕೊಳ್ಳಲು ಕಷ್ಟ ಪಡುವ ಸ್ಥಿತಿ ನಿರ್ಮಾಣವಾಗಿದೆ. ಬಡ್ಡಿ ಮೇಲೆ ಬಡ್ಡಿ ಕಟ್ಟಿ ಸಾಯುವಂತಾಗಿದೆ. ಮಾದಕ ವಸ್ತುಗಳ ಬಗ್ಗೆ ಕೇಳುವವರೆ ಇಲ್ಲವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ರಾಜ್ಯದಲ್ಲಿ ಎಲ್ಲೆಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಸಾಮಾನ್ಯ ಜನರು ತುತ್ತು ಅನ್ನಕ್ಕಾಗಿ ಕಣ್ಣೀರು ಹಾಕುತ್ತಿದ್ದಾರೆ ಎಂದು ಆರೋಪಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ನಗರ ಹಾರ್ಡಿಂಜ್ ವೃತ್ತದಲ್ಲಿ ಈಡುಗಾಯಿ ಒಡೆದು ಶನಿವಾರ ಪ್ರತಿಭಟಿಸಿದರು.

ಈ ವೇಳೆ ವಾಟಾಳ್ ನಾಗರಾಜ್ ಮಾತನಾಡಿ, ಶಾಸಕರು ಲಂಚ ಪಡೆಯುತ್ತಿದ್ದಾರೆ. ಅವತ್ತಿನ ಶಾಸನ ಸಭೆ ಬಹಳ ಗಂಭೀರವಾಗಿತ್ತು. ಆದರೆ, ಇಂದು ಆ ವ್ಯವಸ್ಥೆ ಇಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೋಸ ಮಾಡುತ್ತಿದ್ದು, ಆಸ್ಪತ್ರೆ, ಗುತ್ತಿಗೆ ಕೆಲಸ ಸೇರಿದಂತೆ ಎಲ್ಲೆಡೆಯೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಮತ ವ್ಯಾಪಾರವಾಗಿದೆ. ಚುನಾವಣೆ ಆಯೋಗ ಸತ್ತು ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಲವು ಶಾಲಾ ಕಾಲೇಜುಗಳು ರಾಜಕಾರಣಿಗಳಿಗೆ ಸೇರಿವೆ. ಇದರಿಂದ ಬಡವರು ಶಿಕ್ಷಣ ಪಡೆಯುವುದೇ ಕಷ್ಟವಾಗಿದೆ. ಮೈಸೂರಿನಲ್ಲಿ ಗಿರವಿ ಇಟ್ಟ ಚಿನ್ನ ಬಿಡಿಸಿಕೊಳ್ಳಲು ಕಷ್ಟ ಪಡುವ ಸ್ಥಿತಿ ನಿರ್ಮಾಣವಾಗಿದೆ. ಬಡ್ಡಿ ಮೇಲೆ ಬಡ್ಡಿ ಕಟ್ಟಿ ಸಾಯುವಂತಾಗಿದೆ. ಮಾದಕ ವಸ್ತುಗಳ ಬಗ್ಗೆ ಕೇಳುವವರೆ ಇಲ್ಲವಾಗಿದೆ ಎಂದು ಅವರು ಕಿಡಿಕಾರಿದರು.

ಯಡಿಯೂರಪ್ಪ ಅಭಿಮಾನೋತ್ಸವ ಯಡಿಯೂರಪ್ಪ ಮತ್ತು ಮಗನ ಉತ್ಸವವಾಗಿದೆ. ಪುರ ಪ್ರವೇಶ ಮಾಡಲು ಇವರು ಜಗದ್ಗುರುಗಳಾ? ಯಡಿಯೂರಪ್ಪ, ಕುಮಾರಸ್ವಾಮಿ ಈ ರಾಜ್ಯವನ್ನು ಹಾಳು ಮಾಡಿದ್ದಾರೆ. ಎಂಎಲ್‌ಎಗಳನ್ನು ವ್ಯಾಪಾರಕ್ಕೆ ಇಟ್ಟಿದ್ದರು ಎಂದು ಅವರು ಆರೋಪಿಸಿದರು.

ಮೋದಿ ಹಾಗೂ ಬಿಜೆಪಿಯವರು ಮೂಲಭೂತವಾದಿಗಳು. ಮಮತಾ ಬ್ಯಾನರ್ಜಿ ಇಡೀ ದೇಶಕ್ಕೆ ಶಕ್ತಿ. ಮೋಸ ಮಾಡಿ, ಮುಸ್ಲಿಮರ ವೋಟ್ ತೆಗೆದು ಹಾಕಿ, ಓರ್ವ ಮಹಿಳೆಗೆ ಮೋಸ ಮಾಡಿ ಗೆದ್ದಿದ್ದಾರೆ. ಪ್ರಧಾನಿ ಬಂಗಾಳದಲ್ಲಿ ಬೀದಿ ಬೀದಿಗಳಲ್ಲಿ ಬಂದು ಪ್ರಚಾರ ಮಾಡಿದ್ದರು. ಮಮತಾ ಬ್ಯಾನರ್ಜಿಯವರಿಗೆ ನನ್ನ ಬೆಂಬಲ ಇದ್ದು, ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡಪರ ಹೋರಾಟಗಾರರಾದ ಮೂಗೂರು ನಂಜುಂಡಸ್ವಾಮಿ, ಶಿವಶಂಕರ್, ತೇಜೇಶ್ ಲೋಕೇಶ್‌ ಗೌಡ, ಪಾರ್ಥಸಾರಥಿ, ಗಿರೀಶ್ ಗೌಡ, ನಾರಾಯಣಸ್ವಾಮಿ, ನಾಗೇಗೌಡ, ಶಿವಕುಮಾರ್, ರಾಧಾಕೃಷ್ಣ, ದರ್ಶನ್ ಗೌಡ, ಪ್ರದೀಪ್, ರಘು ಅರಸ್, ಬಸವರಾಜು, ಹನುಮಂತಯ್ಯ ಮೊದಲಾದವರು ಇದ್ದರು.