ಸಿಸಿ ಟಿವಿ ನಿಗಾ ಪರಿಣಾಮ: ಕಳವು ಯತ್ನದಲ್ಲೇ ಆರೋಪಿ ‘ಲಾಕ್’!

| Published : Jun 23 2024, 02:11 AM IST

ಸಿಸಿ ಟಿವಿ ನಿಗಾ ಪರಿಣಾಮ: ಕಳವು ಯತ್ನದಲ್ಲೇ ಆರೋಪಿ ‘ಲಾಕ್’!
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಹಕರಲ್ಲದೆ ತಮ್ಮ ವ್ಯಾಪ್ತಿಯೊಳಗೆ ಬರುವ ಸಾರ್ವಜನಿಕ ಸ್ಥಳಗಳಲ್ಲಿಯೂ ಈ ರೀತಿಯ ಪ್ರಯತ್ನ ಹಾಗೂ ಘಟನೆಗಳು ಕಂಡು ಬಂದಲ್ಲಿ ಸೆಕ್ಯುರಿಟಿ ಸಂಸ್ಥೆ ಸಂಬಂಧಿಸಿದವರನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ಕುಂದಾಪುರ ಸಿಸಿ ಟಿವಿ ಮಾನಿಟರಿಂಗ್‌ ತಂಡದ ಸಮಯಪ್ರಜ್ಞೆಯಿಂದಾಗಿ ಮುಳ್ಳಿಕಟ್ಟೆಯ ಸೊಸೈಟಿಯೊಂದರ ಕಿಟಕಿಯ‌ ಸರಳು‌ ಮುರಿದು ಒಳ ನುಗ್ಗಿದ ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಸೆರೆ ಹಿಡಿಯುವಲ್ಲಿ ಗಂಗೊಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.ಕೇರಳದ ಕೊಲ್ಲಂ ಜಿಲ್ಲೆಯ ನಿವಾಸಿ ಪ್ರಕಾಶ್ ಬಾಬು (44) ಬಂಧಿತ ಆರೋಪಿ. ಬಂಧಿತ ಆರೋಪಿಯಿಂದ 2,000 ನಗದು, ಕೃತ್ಯಕ್ಕೆ ಬಳಸಿದ ಕಬ್ಬಿಣದ ಸಲಕರಣೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಶುಕ್ರವಾರ ತಡರಾತ್ರಿ 1.44 ರ ಸುಮಾರಿಗೆ ಮುಳ್ಳಿಕಟ್ಟೆಯಲ್ಲಿ ಕಾರ್ಯಾಚರಿಸುತ್ತಿರುವ ಪಂಚಗಂಗಾ ವ್ಯವಸಾಯ ಸೇವಾ ಸಹಕಾರಿ‌ ಸಂಘದ ಹೊಸಾಡು ಶಾಖಾ ಕಟ್ಟಡದ ಕಿಟಕಿಯ ಸರಳು ಮುರಿದು ಒಳ ಪ್ರವೇಶಿಸಿದ ಪ್ರಕಾಶ್ ಬಾಬು ಎಂಬಾತ ಸೊಸೈಟಿಯಲ್ಲಿ ಸಿಬ್ಬಂದಿ ಕುಳಿತುಕೊಳ್ಳುವ ಮೇಜಿನ ಡ್ರಾವರ್ ಇನ್ನಿತರ ಕಡೆಗಳಲ್ಲಿ ತಡಕಾಡಿದ್ದಾನೆ. ಕಳ್ಳ ಒಳ ನುಗ್ಗಿದ ಕೂಡಲೇ ಎಚ್ಚೆತ್ತುಕೊಂಡ ಸೈನ್ ಇನ್‌ ಸೆಕ್ಯೂರಿಟಿಯ ಲೈವ್ ಮಾನಿಟರಿಂಗ್ ಸಿಬ್ಬಂದಿ ಬೀಟ್ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಗಂಗೊಳ್ಳಿ ಪೊಲೀಸ್ ಠಾಣೆಯ ಕ್ರೈಂ ಪಿಎಸ್ಐ ಬಸವರಾಜ್ ಹಾಗೂ ಸಿಬ್ಬಂದಿ 10 ನಿಮಿಷದೊಳಗೆ ಸ್ಥಳಕ್ಕಾಗಮಿಸಿ ಕಳ್ಳನನ್ನು ಸೆರೆ ಹಿಡಿದಿದ್ದಾರೆ.

ಹೊಡೆಯಬೇಡಿ ನಾನೇ ಬರುತ್ತೇನೆ ಸರ್!: ಗಂಗೊಳ್ಳಿ ಕ್ರೈಂ ಪಿಎಸ್ಐ ಬಸವರಾಜ್ ಸಿಬ್ಬಂದಿ ಜೊತೆ ಸ್ಥಳಕ್ಕಾಗಮಿಸಿ ಕಿಟಕಿಯ ಮೂಲಕ ಲಾಠಿಯಿಂದ‌ ಬಡಿಯುತ್ತಿರುವಾಗ ಆರೋಪಿ ಪ್ರಕಾಶ್ ಬಾಬು ’ಹೊಡೆಯಬೇಡಿ ಸರ್.. ನಾನೇ ಹೊರಗಡೆ ಬರುತ್ತೇನೆ .. ಹೊಡೆಯಬೇಡಿ’ ಎಂದು ಗೋಗರೆಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನಟೋರಿಯಸ್ ಕಳ್ಳ!: ಬಂಧಿತ ಆರೋಪಿ ಪ್ರಕಾಶ್ ಬಾಬು ನಟೋರಿಯಸ್ ಕಳ್ಳನಾಗಿದ್ದು, ಕೇರಳ, ಕರ್ನಾಟಕ ರಾಜ್ಯಗಳಲ್ಲಿ ಅಲ್ಲಲ್ಲಿ ಕಳ್ಳತನ ನಡೆಸಿದ ಬಗ್ಗೆ ಪ್ರಕರಣ ದಾಖಲಾಗಿದ್ದು, ಹಲವು ಪ್ರಕರಣಗಳಲ್ಲಿ ಶಿಕ್ಷೆಯೂ ಅನುಭವಿಸಿದ್ದಾನೆ. ಬೆಂಗಳೂರಿನಲ್ಲೇ ಜಾಸ್ತಿ ವಾಸವಾಗಿದ್ದ ಈತ ಕನ್ನಡ ಭಾಷೆಯೂ ಸೇರಿದಂತೆ ಹಲವು ಭಾಷೆಗಳನ್ನು ಬಲ್ಲವನಾಗಿದ್ದಾನೆ. 2008 ರಲ್ಲಿ‌ ಕುಂದಾಪುರ ಪೊಲೀಸ್‌ ಠಾಣೆಯಲ್ಲೂ ಈತನ‌ ವಿರುದ್ಧ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸ್ ವಿಚಾರಣೆಯಲ್ಲಿ ಬಯಲಿಗೆ ಬಂದಿದೆ.

ಏನಿದು ಸೈನ್ ಇನ್ ಸೆಕ್ಯೂರಿಟಿ?: ದಿನದ 24 ಗಂಟೆಯೂ ತಾವು ಅಳವಡಿಸಿರುವ ಸಿಸಿ ಟಿವಿ ದೃಶ್ಯಾವಳಿಯ ಮೇಲೆ ಕಣ್ಗಾವಲಿಡುವ ಸೈನ್‌ ಇನ್ ಸೆಕ್ಯೂರಿಟಿ ಸಂಸ್ಥೆಯು ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಹೆಚ್ಚಿನ ಧಾರ್ಮಿಕ ಸಂಸ್ಥೆಗಳು, ಕಾರ್ಖಾನೆಗಳು, ಉದ್ಯಮಗಳು ಹಾಗೂ ಸಾರ್ವಜನಿಕ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಗ್ರಾಹಕರಲ್ಲದೆ ತಮ್ಮ ವ್ಯಾಪ್ತಿಯೊಳಗೆ ಬರುವ ಸಾರ್ವಜನಿಕ ಸ್ಥಳಗಳಲ್ಲಿಯೂ ಈ ರೀತಿಯ ಪ್ರಯತ್ನ ಹಾಗೂ ಘಟನೆಗಳು ಕಂಡು ಬಂದಲ್ಲಿ ಸೆಕ್ಯುರಿಟಿ ಸಂಸ್ಥೆ ಸಂಬಂಧಿಸಿದವರನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಿದೆ.ಗಂಗೊಳ್ಳಿ ಠಾಣಾಧಿಕಾರಿ ಹರೀಶ್. ಆರ್ ನಾಯ್ಕ್, ಕ್ರೈಂ ಪಿಎಸ್ಐ ಬಸವರಾಜ್, ಸಿಬ್ಬಂದಿಗಳಾದ ಮೋಹನ್, ನಾಗರಾಜ್, ಸಂದೀಪ್, ಸತೀಶ್, ರಾಘವೇಂದ್ರ, ರಮೇಶ್, ನಿತಿನ್, ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ದಿನೇಶ್ ಮತ್ತು ನಿತಿನ್ ಕಾರ್ಯಾಚರಣೆಯಲ್ಲಿದ್ದರು‌.ಕಳ್ಳರೇ ಹುಷಾರ್.. ಸೈನ್ ಇನ್ ಕಣ್ಗಾವಲಿದೆ!ಇತ್ತೀಚೆಗೆ ಕಮಲಶಿಲೆ ಗೋಶಾಲೆಯಲ್ಲಿ ದುಷ್ಕರ್ಮಿಗಳು ಗೋ‌ ಕಳವಿಗೆ ಯತ್ನಿಸಿದ ಕೂಡಲೇ ದೇವಸ್ಥಾನದ ಭದ್ರತಾ ಸಿಬ್ಬಂದಿ‌ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ ಸೈನ್ ಇನ್‌ ಸೆಕ್ಯೂರಿಟಿ‌ ತಂಡ ಸಂಭಾವ್ಯ ಕಳ್ಳತನವನ್ನು ವಿಫಲಗೊಳಿಸಿತ್ತು. ಈ ಘಟನೆಯ ಬೆನ್ನಲ್ಲೇ ಇದೀಗ ಸೊಸೈಟಿ ಕಳ್ಳತನಕ್ಕೆ ಯತ್ನಿಸಿದ ಕಳ್ಳನನ್ನು ಪೊಲೀಸರಿಗೆ ಒಪ್ಪಿಸುವ ಮೂಲಕ ಕೃಷ್ಣ ಪೂಜಾರಿಯವರ ಮಾಲಕತ್ವದ ಸೈನ್‌ ಇನ್ ಸೆಕ್ಯೂರಿಟಿ ಸಂಸ್ಥೆಯು ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.