ಭಾರೀ ಬಿಸಿಲಿನ ಎಫೆಕ್ಟ್: ಹಂಪಿಯತ್ತ ಸುಳಿಯದ ಪ್ರವಾಸಿಗರು

| Published : Apr 06 2024, 12:51 AM IST

ಭಾರೀ ಬಿಸಿಲಿನ ಎಫೆಕ್ಟ್: ಹಂಪಿಯತ್ತ ಸುಳಿಯದ ಪ್ರವಾಸಿಗರು
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಖರ ಬಿಸಿಲಿಗೆ ಹೆದರಿ ಪ್ರವಾಸಿಗರು ಹಂಪಿ ಪ್ರವಾಸದಿಂದ ಹಿಂದೆ ಸರಿದಿದ್ದು, ಪ್ರವಾಸೋದ್ಯಮಕ್ಕೆ ಆರ್ಥಿಕ ಹಿನ್ನೆಡೆಯಾಗಿದೆ.

ಕೃಷ್ಣ ಎನ್. ಲಮಾಣಿ

ಹೊಸಪೇಟೆ: ಬೇಸಿಗೆಯ ಸುಡು ಬಿಸಿಲಿನಿಂದಾಗಿ ವಿಶ್ವವಿಖ್ಯಾತ ಹಂಪಿ ಪ್ರವಾಸಿಗರಿಲ್ಲದೇ ಭಣಗುಡುತ್ತಿದೆ. ಹಂಪಿ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ. ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಾಲಯದ ರಥಬೀದಿಯೂ ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿದೆ. ದೇಶ-ವಿದೇಶಿ ಪ್ರವಾಸಿಗರಿಂದ ಕಳೆಗಟ್ಟುತ್ತಿದ್ದ ಹಂಪಿ ಸ್ಮಾರಕಗಳು ಈಗ ಭಣಗುಡುತ್ತಿವೆ.

ಪ್ರಖರ ಬಿಸಿಲಿಗೆ ಹೆದರಿ ಪ್ರವಾಸಿಗರು ಹಂಪಿ ಪ್ರವಾಸದಿಂದ ಹಿಂದೆ ಸರಿದಿದ್ದು, ಪ್ರವಾಸೋದ್ಯಮಕ್ಕೆ ಆರ್ಥಿಕ ಹಿನ್ನೆಡೆಯಾಗಿದೆ. ಹಂಪಿಯಲ್ಲೀಗ ಶೇ.90ರಷ್ಟು ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. 2023ರಲ್ಲಿ ಭಾರೀ ಪ್ರಮಾಣದಲ್ಲಿ ಹಂಪಿಗೆ ಪ್ರವಾಸಿಗರು ಭೇಟಿ ನೀಡಿದ್ದಾರೆ.

ಇನ್ನು ಫೆಬ್ರವರಿಯಲ್ಲಿ ನಡೆದ ಹಂಪಿ ಉತ್ಸವಕ್ಕೂ ಭಾರಿ ಪ್ರಮಾಣದಲ್ಲಿ ಜನ ಸೇರಿದ್ದರು. ಜಿ-20 ಶೃಂಗಸಭೆ ಹಿನ್ನೆಲೆಯಲ್ಲಿ ದೇಶ, ವಿದೇಶಿ ಪ್ರವಾಸಿಗರು ಕೂಡ ಹಂಪಿಯತ್ತ ಧಾವಿಸಿದ್ದರು. ಅಲ್ಲದೇ ಅಂಜನಾದ್ರಿ ಪರ್ವತದ ವೀಕ್ಷಣೆಗೆ ಬರುವ ಪ್ರವಾಸಿಗರು ಕೂಡ ಹಂಪಿಯತ್ತ ಧಾವಿಸಿದ್ದರಿಂದ ಹಂಪಿಗೆ ಈ ಹಿಂದಿನ ಪ್ರವಾಸಿಗರ ಸಂಖ್ಯೆಗೆ ಹೋಲಿಕೆ ಮಾಡಿದರೆ ಶೇ.30ರಷ್ಟು ಪ್ರವಾಸಿಗರು ಹೆಚ್ಚಳವಾಗಿದ್ದಾರೆ. ಆದರೆ, ಈಗ ಬಿಸಿಲಿನ ಹೊಡೆತಕ್ಕೆ ಪ್ರವಾಸಿಗರು ಹಿಂದೇಟು ಹಾಕುತ್ತಿರುವುದರಿಂದ ಹಂಪಿ ಪ್ರವಾಸೋದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿದೆ.

ಭಣಗುಡುತ್ತಿರುವ ಸ್ಮಾರಕಗಳು:

ಶ್ರೀವಿರೂಪಾಕ್ಷೇಶ್ವರ ದೇವಾಲಯ, ಸಾಸಿವೆಕಾಳು ಗಣಪತಿ, ಕಡಲೆಕಾಳು ಗಣಪತಿ, ಹೇಮಕೂಟ ಪರ್ವತ, ಶ್ರೀಕೃಷ್ಣ ದೇಗುಲ, ಕೃಷ್ಣ ಬಜಾರ್, ಬಡವಿಲಿಂಗ, ಉಗ್ರ ನರಸಿಂಹ, ಉದ್ದಾನ ವೀರಭದ್ರ ದೇವಾಲಯ, ನೆಲಸ್ತರದ ಶಿವಾಲಯ, ಹಜಾರರಾಮ ದೇವಾಲಯ, ಮಹಾನವಮಿ ದಿಬ್ಬ, ಪುಷ್ಕರಣಿ, ರಾಣಿ ಸ್ನಾನ ಗೃಹ, ವಿಜಯವಿಠಲ ದೇವಾಲಯ, ಗೆಜ್ಜಲ ಮಂಟಪ, ಕಲ್ಲಿನ ತೇರು, ಕಮಲ ಮಹಲ್, ಯಂತ್ರೋದ್ಧಾರಕ ಆಂಜನೇಯ, ಕೋದಂಡರಾಮ, ತುಂಗಭದ್ರಾ ನದಿ ತೀರ ಸೇರಿದಂತೆ ಪ್ರಮುಖ ಸ್ಥಳ ಹಾಗೂ ಸ್ಮಾರಕಗಳ ಬಳಿ ಪ್ರವಾಸಿಗರು ಇಲ್ಲದೇ ಭಣಗುಡುತ್ತಿದೆ.

ಕಳೆದ ವರ್ಷಗಿಂತಲೂ ಈ ವರ್ಷ ಬಿಸಿಲಿನ ತಾಪ ಹೆಚ್ಚಾಗಿದ್ದು, ಜನರನ್ನು ಹೈರಾಣ ಮಾಡಿದೆ. ಮನೆಯಿಂದ ಹೊರ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಶನಿವಾರ ಹಾಗೂ ಭಾನುವಾರದ ವೀಕೆಂಡ್ ದಿನಗಳಲ್ಲಿಯೂ ಹಂಪಿಯಲ್ಲಿ ಪ್ರವಾಸಿಗರು ಕಂಡು ಬರುತ್ತಿಲ್ಲ.

ಬ್ಯಾಟರಿ ವಾಹನಗಳಿಗಿಲ್ಲ ಬೇಡಿಕೆ:

ವಿಜಯವಿಠಲ ದೇವಾಲಯ ವೀಕ್ಷಣೆಗೆ ಹಂಪಿಯ ಗೆಜ್ಜಲ ಮಂಟಪದಿಂದ ಪ್ರವಾಸಿಗರನ್ನು ಹೊತ್ತು ಸಾಗುವ ಬ್ಯಾಟರಿ ಚಾಲಿತ ವಾಹನಗಳಿಗೆ ಪ್ರವಾಸಿಗರಿಲ್ಲದೇ ಬೇಡಿಕೆ ಇಲ್ಲದಂತಾಗಿದೆ. ಸದಾ ಜನರಿಂದ ತುಂಬಿಕೊಳ್ಳುತ್ತಿದ್ದ ವಾಹನಗಳು ಖಾಲಿಯಾಗಿ ನಿಂತಿದ್ದು, ವಾಹನ ಚಾಲಕರು ಪ್ರವಾಸಿಗರನ್ನು ಕಾಯುವಂತಾಗಿದೆ.

ವ್ಯಾಪಾರಿಗಳಿಗೆ ಸಂಕಷ್ಟ:

ಹಂಪಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗುತ್ತಿದ್ದಂತೆ ಇತ್ತ ಹಂಪಿ ಪ್ರವಾಸೋದ್ಯಮ ನೆಚ್ಚಿಕೊಂಡು ಬದುಕು ಕಟ್ಟಿಕೊಂಡಿದ್ದ ಸಣ್ಣ,ಪುಟ್ಟ ವ್ಯಾಪಾರಸ್ಥರು, ಗೈಡ್‌ಗಳು ಹಾಗೂ ಆಟೋ ಚಾಲಕರಿಗೆ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.

ಹಂಪಿಯ ಕೆಲ ಸ್ಮಾರಕಗಳ ಬಳಿ ಗೂಂಡಗಂಡಿಗಳು, ಟೀ ಸ್ಟಾಲ್, ಏಳನೀರು, ತಂಪು ಪಾನೀಯಗಳು, ಹೂ-ಹಣ್ಣು ವ್ಯಾಪಾರಸ್ಥರು ಪ್ರವಾಸಿಗರನ್ನು ಎದುರು ನೋಡುವಂತಾಗಿದೆ. ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಸಣ್ಣ-ಪುಟ್ಟ ವ್ಯಾಪಾರಸ್ಥರಿಗೆ ತೊಂದರೆಯಾಗಿದೆ.

ಸುಡು ಬಿಸಿಲಿಗೆ ಹಂಪಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ. ಇದರಿಂದ ಹಂಪಿಯಲ್ಲಿ ಸಣ್ಣ-ಪುಟ್ಟ ವ್ಯಾಪಾರಸ್ಥರು, ಆಟೋಚಾಲಕರು ಹಾಗೂ ಗೈಡ್‌ಗಳು ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಎನ್ನುತ್ತಾರೆ ಹಂಪಿ ಗೈಡ್ ವಿರೂಪಾಕ್ಷಿ.