ಸಾಮಾನ್ಯವಾಗಿ ಬೇಸಿಗೆಯ ಏಪ್ರಿಲ್ ನಿಂದ ಜೂನ್ ತಿಂಗಳಲ್ಲಿ ಟೊಮೆಟೋ ಬೆಲೆ ಏರುತ್ತದೆ. ಕಳೆದ ಎರಡು ವಾರಗಳ ಹಿಂದೆ 14 ಕೆಜಿ ಬಾಕ್ಸ್‌ನ ಸಗಟು ದರವೇ 400 ರು. ಇತ್ತು. ಮಳೆ ಮತ್ತು ಮೋಡ ಕವಿದ ವಾತಾವರಣ ಮತ್ತು ಚಳಿಗಾಲದಿಂದ ಈಗ ಬೆಳೆ ಹಾಳಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಹೆಚ್ಚುವ ಸಾಧ್ಯತೆಯೂ ಇದೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ದಿತ್ವಾ ಚಂಡಮಾರುತದ ಪರಿಣಾಮ ಕಳೆದ ವಾರದಿಂದ ಬೀಸಿದ ಚಳಿಗಾಳಿ ಮತ್ತು ಸುರಿದ ಜಿಟಿ ಜಿಟಿ ಮಳೆಯಿಂದಾಗಿ ಇದೀಗ ಅಗತ್ಯ ತರಕಾರಿಗಳ ಬೆಲೆ ಮೇಲೆ ಪರಿಣಾಮ ಬೀರಿದೆ. ಜಿಟಿ ಜಿಟಿ ಮಳೆಯಿಂದಾಗಿ ಟೊಮೆಟೋ ಬೆಳೆ ಮತ್ತು ಸ್ಥಳೀಯವಾಗಿ ಬೆಳೆಯುವ ತರಕಾರಿ, ಸೊಪ್ಪುಗಳ ಗುಣಮಟ್ಟ ಹಾನಿಯಾಗಿದ್ದರೂ, ಬೆಲೆ ಮಾತ್ರ ಏರಿಕೆಯಾಗಿದೆ.ನಗರದ ಎಪಿಎಂಸಿ ಮಾರುಕಟ್ಟೆಗೆ ತರಕಾರಿ ಪೂರೈಕೆ ಕಡಿಮೆಯಾಗಿದೆ. ಪರಿಣಾಮ, ನುಗ್ಗೆಕಾಯಿ ದರ 700 ರು., ಟೊಮೆಟೋ ದರ ನೂರರ ಗಡಿ ಸಮೀಪಿಸಿದ್ದರೆ ಬಹುತೇಕ ಎಲ್ಲ ತರಕಾರಿಗಳ ಬೆಲೆಯೂ ಗಗನಕ್ಕೇರಿದೆ. ಇದರಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಕೆಜಿಗೆ 15- 20 ಇದ್ದ ಈರುಳ್ಳಿ ಬೆಲೆ 30- 40 ರುಪಾಯಿಗೆ, ಕೆಜಿಗೆ 50 ಇದ್ದ ಟೊಮೆಟೋ ಬೆಲೆ 90 ರುಪಾಯಿಗೆ ಏರಿದೆ.
ಟೊಮೆಟೊ ದರ ಕೆಜಿಗೆ ₹90ಬೆಳ್ಳುಳ್ಳಿಯ ಬೆಲೆ ಒಂದು ಕೆಜಿಗೆ 50- 150 ರು. ಮತ್ತು ಅಗತ್ಯ ಕೊತ್ತಂಬರಿ ಮತ್ತು ಕರಿಬೇವಿನ ಸೊಪ್ಪು ಕ್ರಮವಾಗಿ 40- 100 ರು. ಮತ್ತು 10 ರಿಂದ 25 ರು.ಗಳಿಗೆ ಏರಿಕೆಯಾಗಿದೆ. ಉತ್ತಮ ಗುಣಮಟ್ಟದ ಪ್ರಥಮ ದರ್ಜೆ ಟೊಮೆಟೋ 14 ಕೆಜಿಗಳ ಬಾಕ್ಸ್ ಒಂದಕ್ಕೆ 1300 ರು. ವರೆಗೂ ಮಾರಾಟವಾಗಿದೆ. ಹಾಪ್ ಕಾಮ್ಸ್‌ನಲ್ಲಿ ಟೊಮೆಟೋ ಕೆಜಿಗೆ 90ಕ್ಕೆ ಮಾರಾಟವಾಗಿದ್ದರೆ, ದಿತ್ವಾ ಚಂಡಮಾರುತದ ಪರಿಣಾಮ ಜಿಲ್ಲೆಯ ರೈತರಿಂದ ತರಕಾರಿ ಕಡಿಮೆ ಪೂರೈಕೆಯಾಗುತ್ತಿದೆ.
ಸಾಮಾನ್ಯವಾಗಿ ಬೇಸಿಗೆಯ ಏಪ್ರಿಲ್ ನಿಂದ ಜೂನ್ ತಿಂಗಳಲ್ಲಿ ಟೊಮೆಟೋ ಬೆಲೆ ಏರುತ್ತದೆ. ಕಳೆದ ಎರಡು ವಾರಗಳ ಹಿಂದೆ 14 ಕೆಜಿ ಬಾಕ್ಸ್‌ನ ಸಗಟು ದರವೇ 400 ರು. ಇತ್ತು. ಮಳೆ ಮತ್ತು ಮೋಡ ಕವಿದ ವಾತಾವರಣ ಮತ್ತು ಚಳಿಗಾಲದಿಂದ ಈಗ ಬೆಳೆ ಹಾಳಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಹೆಚ್ಚುವ ಸಾಧ್ಯತೆಯೂ ಇದೆ ಎಂದು ಸಗಟು ವ್ಯಾಪಾರಿಗಳು ತಿಳಿಸಿದ್ದಾರೆ. ಸೀಸನ್ ಆರಂಭದಿಂದ ಎಪಿಎಂಸಿಗೆ ಈರುಳ್ಳಿ ಕಡಿಮೆಯೇ ಬರುತ್ತಿದೆ. ಈ ವಾರದ ಮಳೆಯ ಪರಿಣಾಮ ಈರುಳ್ಳಿಯ ಗುಣಮಟ್ಟ ಹಾಳಾಗಿದೆ. 5ಂ ಕೆಜಿ ಈರುಳ್ಳಿಯ ಸಗಟು ಬೆಲೆಯೇ 950 - 1400 ರು.ಗಳು ಆಗಿದೆ.ಅವರೆಯಲ್ಲಿ ಸೊಗಡಿನ ಕೊರತೆ
ಇನ್ನು ಚಳಿಗಾಲದ ನೆಚ್ಚಿನ ಸೊಗಡವರೆ ಬೆಳೆ ಮಾರುಕಟ್ಟೆಗೆ ಇನ್ನೂ ಬಂದಿಲ್ಲ. ತೋಟದ ಅವರೆ ಕಡಿಮೆ ಪ್ರಮಾಣದಲ್ಲಿ ಬಂದಿದ್ದರೂ ಸೊಗಡು ಇರದ ಕಾರಣಕ್ಕೆ ಹೆಚ್ಚಿನ ಗ್ರಾಹಕರು ಇಷ್ಟಪಡುತ್ತಿಲ್ಲ, ಈ ಕಾರಣದಿಂದ ಬೆಲೆ ಹೆಚ್ಚಳಗೊಂಡಿದ್ದು, ಸದ್ಯದ ದರ ಪ್ರತಿ ಕೆಜಿಗೆ 80- 90 ರು. ಗಳಾಗಿವೆ. ಡಿಸೆಂಬರ್ ಅಂತ್ಯ, ಸಂಕ್ರಾಂತಿ ವೇಳೆಗೆ ಸ್ಥಳೀಯ ಹೊಲದ ಅವರೆ ಬರಲಿದ್ದು, ಆಗಿನ ಬೆಲೆ ಕಾದುನೋಡಬೇಕು ಎಂದು ಅವರೆ ವ್ಯಾಪಾರಿ ರಾಮಕೃಷ್ಣಪ್ಪ ಹೇಳುತ್ತಾರೆ.