ಸಾರಾಂಶ
ಹಳಿಯಾಳ: ತಾಲೂಕಾಡಳಿತ ಮತ್ತು ವಿವಿಧ ಇಲಾಖೆಗಳು, ಸಂಘ- ಸಂಸ್ಥೆಗಳು ಮತ್ತು ಶಾಲಾ- ಕಾಲೇಜುಗಳ ಸಹಯೋಗದಲ್ಲಿ ಭಾನುವಾರ ಗಡಿ ತಾಲೂಕಾಗಿರುವ ಹಳಿಯಾಳದಾದ್ಯಂತ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಧಾರವಾಡ ಗಡಿ ಮಾವಿನಕೊಪ್ಪದಿಂದ ಯಲ್ಲಾಪುರ ಗಡಿಗ್ರಾಮ ಕಣ್ಣಿಗೇರಿಯವರೆಗೂ ಅರಣ್ಯ ಪ್ರದೇಶ ಹೊರತುಪಡಿಸಿ ರಸ್ತೆಯುದ್ದಕ್ಕೂ ಸಾರ್ವಜನಿಕರು ಶಾಲಾ- ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ನಿರ್ಮಿಸಿದ ಮಾನವ ಸರಪಳಿ ಹಾಗೂ ಮುಗಿಲು ಮುಟ್ಟುವ ಜೈ ಹಿಂದ್, ಜೈ ಕರ್ನಾಟಕ ಘೋಷಣೆಯು ಪ್ರಜಾಪ್ರಭುತ್ವ ದಿನಾಚರಣೆಗೆ ಕಳೆತಂದಿತು. ಬುಡಕಟ್ಟು ಸಿದ್ದಿ ಸಮುದಾಯದವರ ಸಾಂಪ್ರದಾಯಿಕ ನರ್ತನವು ಹಬ್ಬದ ವಾತಾವರಣ ನಿರ್ಮಿಸಿತು.
ಗಡಿಯಲ್ಲಿ ಸ್ವಾಗತ: ಧಾರವಾಡ ಮತ್ತು ಉತ್ತರಕನ್ನಡ ಜಿಲ್ಲಾ ಗಡಿಗ್ರಾಮವಾಗಿರುವ ಮಾವಿನಕೊಪ್ಪ ಕ್ರಾಸ್ ಬಳಿ ನಡೆದ ಅದ್ಧೂರಿ ಸಮಾರಂಭದಲ್ಲಿ ಧಾರವಾಡ ಜಿಲ್ಲಾಡಳಿತದ ಪರವಾಗಿ ಬಂದ ಅಧಿಕಾರಿಗಳ ನಿಯೋಗವು ಧ್ವಜವನ್ನು ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರಿಗೆ ಹಸ್ತಾಂತರಿಸಿತು. ಪ್ರಜಾಪ್ರಭುತ್ವವನ್ನು ಬಲಪಡಿಸೋಣ: ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ ಅವರು, ಜಗತ್ತಿನಲ್ಲಿಯೇ ನಮ್ಮ ದೇಶವು ಮಾದರಿ ಪ್ರಜಾಪ್ರಭುತ್ವವನ್ನು ಹೊಂದಿದೆ. ಪ್ರಜಾಪ್ರಭುತ್ವವನ್ನು ಬಲಪಡಿಸುವ, ನ್ಯಾಯ, ನೀತಿ, ಸತ್ಯ, ಶಾಂತಿಯ ಸಾಮರಸ್ಯತೆಯ ಭವ್ಯ ದೇಶವನ್ನು ಕಟ್ಟೋಣ. ಸಂವಿಧಾನದ ಆಶಯವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸೋಣ ಎಂದರು.ನಂತರ ಅವರು ಸಂವಿಧಾನದ ಪ್ರಸ್ತಾವನೆಯನ್ನು ಓದಿದರು. ಕಾರ್ಯಕ್ರಮದ ಕೊನೆಯಲ್ಲಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಪ್ರಜಾಪ್ರಭುತ್ವದ ದಿನದ ಸವಿನೆನಪಿಗಾಗಿ ಸಸಿಯನ್ನು ನಡೆಲಾಯಿತು.ದಾಂಡೇಲಿ ತಹಸೀಲ್ದಾರ್ ಶೈಲೇಶ್ ಪರಮಾನಂದ, ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಕಂಡಿ, ಹಳಿಯಾಳ ಸಿಪಿಐ ಜಯಪಾಲ ಪಾಟೀಲ, ಹಳಿಯಾಳ ಉಪವಿಭಾಗದ ಎಸಿಎಫ್ ಮಾಜಿ ಬೀರಪ್ಪ, ದಾಂಡೇಲಿ ಉಪವಿಭಾಗದ ಎಸಿಎಫ್ ಡಾ. ಸಂತೋಷ ಚವ್ಹಾಣ, ಸಮಾಜ ಕಲ್ಯಾಣಾಧಿಕಾರಿ ವಿವಿಧ ಇಲಾಖೆಗಳ ಅಧಿಕಾರಿಗಳ ಇದ್ದರು. ಮುರ್ಕವಾಡ ಕ್ರಾಸನಿಂದ ಶಿವಾಜಿ ವೃತ್ತ, ಕೆಸರೊಳ್ಳಿಯವರೆಗೆ, ಕೆಸರೊಳ್ಳಿಯಿಂದ ಹಾಗೂ ಸಾಂಬ್ರಾಣಿ ಮತ್ತು ಭಾಗವತಿಯಿಂದ ಕಣ್ಣಿಗೇರಿ ಕ್ರಾಸ್‌ವರೆಗೆ ಮಾನವ ಸರಪಳಿ ನಿರ್ಮಿಸಿ ಪ್ರಜಾಪ್ರಭುತ್ವ ಬಲಪಡಿಸುವ ವಾಗ್ದಾನವನ್ನು ಸಾರ್ವಜನಿಕರು ಮಾಡಿದರು.