ಚಿತ್ರದುರ್ಗದ ನಗರದ ಎಸ್‌ಜೆಎಂ ಔಷಧ ಮಹಾವಿದ್ಯಾಲಯದಲ್ಲಿ ನಡೆದ ಐ-ಕ್ಲಾಪ್ ಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನು ಡಾ.ಬಸವಕುಮಾರ ಸ್ವಾಮೀಜಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಔಷಧಿ ತಜ್ಞರ ಸಹಾಯದಿಂದಲೇ ದೇಶದಲ್ಲಿ ಕರೋನಾವನ್ನು ಸಮರ್ಥವಾಗಿ ನಿರ್ವಹಣೆ ಮಾಡಲು ಸಾಧ್ಯವಾಯಿತೆಂದು ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.

ನಗರದ ಎಸ್‌ಜೆಎಂ ಔಷಧ ಮಹಾವಿದ್ಯಾಲಯದಲ್ಲಿ ನಡೆದ ಐ-ಕ್ಲಾಪ್ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ ಅವರು, ಹಿಂದಿನ ಕಾಲದಲ್ಲಿ ಹಿರಿಯರು ಅಡುಗೆ ಮನೆಯನ್ನೆ ಔಷಧಾಲಯವನ್ನಾಗಿ ಮಾಡಿಕೊಂಡಿದ್ದರು. ಯಾವುದೇ ತೊಂದರೆಗೆ ಮನೆ ಮದ್ದನ್ನೇ ಅವಲಂಬಿಸಿದ್ದರು. ಮುರುಘಾ ಪರಂಪರೆಯ ಸ್ವಾಮಿಗಳು ಮೈಸೂರು ರಾಣಿಗೆ ಅನಾರೋಗ್ಯದ ಸ್ಥಿತಿಯಲ್ಲಿ ಯಾರು ಗುಣಪಡಿಸದ ಕಾಯಿಲೆಯನ್ನು ಔಷಧೋಪಚಾರ ಮಾಡಿ ನಿವಾರಿಸಿದ್ದರೆಂದರು.

ಚಿತ್ರದುರ್ಗ ಮೆಡಿಕಲ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಯುವರಾಜ್‌ ಮಾತನಾಡಿ, ಮುಂಬರುವ ದಿನಗಳಲ್ಲಿ ನ್ಯಾನೋ ಪ್ಲಾಸ್ಟಿಕ್ ಮತ್ತು ಮಾದಕ ದ್ರವ್ಯಗಳು ಜನರನ್ನು ಅನಾರೋಗ್ಯದ ಕಡೆಗೆ ಒಯ್ಯುತ್ತವೆ. ಯುವಕರು ಏಕಾಂತದಲ್ಲಿ ಮೊಬೈಲ್‌ನಲ್ಲಿ ಸಮಯ ಕಳೆಯುವುದನ್ನು ನಿಲ್ಲಿಸಿ ಕ್ರೀಡೆ ಹಾಗೂ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಸಲಹೆ ಮಾಡಿದರು.

ಎಸ್‌ಜೆಎಂ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಬಿ.ಗುಡಸಿ ಮಾತನಾಡಿ, ಹಿಂದಿನ ಕಾಲದಲ್ಲಿ ಔಷಧೀಯ ಸಂಶೋಧನೆಗೆ ವರ್ಷಗಳೇ ಕಳೆಯುತ್ತಿದ್ದವು. ಈಗ ಎಐ ತಂತ್ರಜ್ಞಾನ ಬಂದು ಕೆಲವೇ ದಿನಗಳಲ್ಲಿ ಔಷಧಿಯನ್ನು ಕಂಡುಹಿಡಿಯಲಾಗುತ್ತಿದೆ. ಇಂತಹ ಹೊಸ ವಿಚಾರಗಳ ವಿನಿಮಯ ಸಂಕಿರಣದಲ್ಲಿ ವಿದ್ಯಾರ್ಥಿಗಳಿಗೆ ಆಗಲಿದೆ. ಅದರ ಉಪಯೋಗ ಪಡೆದುಕೊಳ್ಳದಿದ್ದರೆ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಕಷ್ಟ ಇದೆ. ಔಷಧಿ ಬಳಕೆ ವ್ಯಕ್ತಿಯಿಂದ ವ್ಯಕ್ತಿಗೆ ಪ್ರಮಾಣ ಹೆಚ್ಚು ಕಡಿಮೆ ಇರುತ್ತದೆ. ಈ ಬಗ್ಗೆ ಜಾಗೃತಿ ಮೂಡಿಸುವುದು ಮುಖ್ಯ ಎಂದರು.

ಸಹಾಯಕ ಔಷಧ ನಿಯಂತ್ರಕ ಗಿರೀಶ್ ಮಾತನಾಡಿ, ಔಷಧ ತಂತ್ರಜ್ಞಾನ ಮತ್ತು ತಯಾರಿಕೆ ಅತ್ಯವಶ್ಯಕ ಹಾಗೂ ಅತಿ ವೇಗದಲ್ಲಿ ಬೆಳೆಯುತ್ತಿರುವ ಕ್ಷೇತ್ರವಾಗಿದೆ. ವಿಶ್ವಕ್ಕೆ ಬೇಕಾಗುವ ಔಷಧಿಗಳನ್ನು ಭಾರತವು ತಯಾರು ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ನಿಮ್ಮ ಪಾತ್ರ ದೊಡ್ಡದಿದೆ ಎಂದು ತಿಳಿಸಿದರು.

ಎಸ್‌ಜೆಎಂ ವಿಶ್ವವಿದ್ಯಾಲಯದ ಕುಲಸಚಿವ ಡಾ.ಗಣಾಚಾರಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣ ಮುಗಿಸಿದ ನಂತರ ಮುಂದೆ ಏನು ಎಂಬ ಚಿಂತೆ ಬಹಳ ಕಾಡುತ್ತದೆ. ಅದಕ್ಕಾಗಿ ಅವರು ಕೌಶಲ್ಯತೆಯನ್ನು ತಂತ್ರಜ್ಞಾನದೊಂದಿಗೆ ಹೊಂದಿಸಿಕೊಂಡು ಮಾರುಕಟ್ಟೆಯ ಅನುಗುಣವಾಗಿ ತಮ್ಮ ಬಯೋಡೇಟಾವನ್ನು ವಿಭಿನ್ನ ರೀತಿಯಲ್ಲಿ ಗುರುತಿಸಿಕೊಳ್ಳಬೇಕೆಂದರು.

ಸಮ್ಮೇಳನದಲ್ಲಿ ರಾಜ್ಯ ಹಾಗೂ ಹೊರ ರಾಜ್ಯದ 450 ಕ್ಕೂ ಹೆಚ್ಚು ಔಷಧಿ ತಜ್ಞರು ಭಾಗವಹಿಸಿದ್ದರು. ಎರಡು ದಿನದ ಕಾರ್ಯಕ್ರಮದಲ್ಲಿ ಏಳು ನುರಿತ ಅಂತಾರಾಷ್ಟ್ರೀಯ (ಮಲೇಶಿಯಾ ಹಾಗೂ ಐರ್ಲ್ಯಾಂಡ್) ಔಷಧ ತಜ್ಞರು ಹೊರರಾಜ್ಯದ (ಹೈದರಾಬಾದ್ ಹಾಗೂ ಆಂಧ್ರಪ್ರದೇಶ) ಔಷಧ ತಜ್ಞರು ಹಾಗೂ ಬೆಂಗಳೂರಿನ ಸಂಶೋಧಕರು ಔಷಧಿಯ ಉಪಚಾರ ಮತ್ತು ಬಳಕೆಯಲ್ಲಿ ಗಮನಿಸಬೇಕಾದ ವಿಚಾರಗಳು, ಆಧುನಿಕ ಔಷಧೀಯ ಚಿಕಿತ್ಸಾ ಪದ್ಧತಿಯ ಅಧ್ಯಯನ ಮತ್ತು ಸಂಶೋಧನೆ ವಿಚಾರಗಳನ್ನು ಹಾಗೂ ಫಾರ್ಮಸಿ ವಿಭಾಗದ ಸುಮಾರು 60 ಔಷಧೀಯ ಸಂಶೋಧನಾಕಾರರು ವಿಷಯ ಮಂಡನೆ ಮಾಡಿದರು. ಕಾಲೇಜಿನ ಪ್ರಾಚಾರ್ಯ ಡಾ.ಟಿ.ಎಸ್ ನಾಗರಾಜ ಸ್ವಾಗತಿಸಿದರು.