ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ದೇಶದಲ್ಲಿ 18 ರಿಂದ 40 ವರ್ಷ ವಯಸ್ಸಿನ ಶೇ40ರಷ್ಟು ಯುವಜನರಿದ್ದು, ಇವರ ಸಬಲೀಕರಣಕ್ಕಾಗಿ ಕೇಂದ್ರದಲ್ಲಿ ನೆಹರು ಯುವಕೇಂದ್ರ, ರಾಜ್ಯದಲ್ಲಿ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದು, ಯುವಜನರು ಇವುಗಳ ಸದುಪಯೋಗ ಪಡೆದುಕೊಂಡು ಒಳ್ಳೆಯ ನಾಯಕರಾಗಿ ಹೊರಹೊಮ್ಮುವಂತೆ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ತಿಳಿಸಿದ್ದಾರೆ.ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವಕೇಂದ್ರ ಸೇರಿದಂತೆ ಹಲವು ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಅಂಕಗಳಿಕೆಯಲ್ಲಿ ತಲ್ಲೀನರಾಗಿರುವ ಯುವಜನರು ತಮಗಾಗಿ ದುಡಿಯುತ್ತಿರುವ ಸಂಸ್ಥೆಗಳ ಕಡೆಗೆ ತಿರುಗಿ ನೋಡದಂತಹ ಸ್ಥಿತಿಯಲ್ಲಿರುವುದು ವಿಪರ್ಯಾಸ. ಇಂದು ನಾನು ನಿಮ್ಮಗಳ ಮುಂದೆ ಮಾತನಾಡುವಂತಹ ಅವಕಾಶ ಒದಗಿಸಿದ್ದು,ಯುವ ಸಬಲೀಕರಣ ಇಲಾಖೆ, ಕ್ರಿಕೆಟ್ ಗಣಪತಿ ಉತ್ಸವ, ಕನ್ನಡ ರಾಜ್ಯೋತ್ಸವಗಳಿಗೆ ಸೀಮತವಾಗಿರುವ ಯುವ ಸಮುದಾಯ, ತಮ್ಮ ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿಕೊಡುವ ಇಲಾಖೆಗಳ ಕಡೆಗೂ ಗಮನಹರಿಸಬೇಕು ಎಂದರು.ಯುವಕರು ಪಠ್ಯದ ಜೊತೆಗೆ, ಇಂತಹ ಕಾರ್ಯಕ್ರಮಗಳಲ್ಲಿಯೂ ತಮ್ಮನ್ನು ತೊಡಗಿಕೊಂಡು,ದೇಶದ ಒಳ್ಳೆಯ ಪ್ರಜೆಯಾಗಿ, ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು. ಕೌಶಲ್ಯಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ, ಸರಕಾರಿ ಶಾಲಾ, ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳು ದೊರೆಯಬೇಕೆಂದರೆ, ಅಲ್ಲಿನ ವಿದ್ಯಾರ್ಥಿಗಳು ಜನಪ್ರತಿನಿಧಿಗಳಾದ ಸಂಸದರು, ಶಾಸಕರು, ಮಂತ್ರಿಗಳನ್ನು ತಮ್ಮ ಕಾಲೇಜಿನ ಕಾರ್ಯಕ್ರಮಗಳಿಗೆ ಆಹ್ವಾನಿಸಿ, ಬೇಡಿಕೆಯ ಪಟ್ಟಿಯನ್ನು ಇಡಬೇಕು ಎಂದರು.
ಖಂಡಿತವಾಗಿ ಸಾವಿರಾರು ಯುವಜನರು ಮನವಿ ಮಾಡಿದರೆ ಇಲ್ಲ ಎನ್ನಲು ಸಾಧ್ಯವೇ ಇಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಕೇಂದ್ರದ ಮಂತ್ರಿಯಾದ ವಿ.ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್,ಉನ್ನತ ಶಿಕ್ಷಣ ಮಂತ್ರಿಗಳನ್ನು ತಮ್ಮ ಕಾಲೇಜಿಗೆ ಅಹ್ವಾನಿಸಿ ಸರಕಾರದ ಅನುದಾನ ಪಡೆಯಲು ಮುಂದಾಗುವಂತೆ ಸಲಹೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಸಂತ ಮಾತನಾಡಿ, ಯುವಶಕ್ತಿಯನ್ನು ಉದ್ದೀಪನಗೊಳಿಸುವ ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚಾಗಿ ನಮ್ಮ ಕಾಲೇಜಿನಲ್ಲಿ ಆಯೋಜಿಸಲಾಗುತ್ತಿದೆ. ಮೊಬೈಲ್ ಬಳಕೆ, ಅದರಲ್ಲಿಯೂ ಸೊಷಿಯಲ್ ಮೀಡಿಯಾ ಬಳಕೆಯ ಬಗ್ಗೆ ಮೂಗು ಮುರಿಯುವುದು ಸಹಜ.ಆದರೆ ನಮ್ಮ ಯುವಜನತೆ ಸಾಮಾಜಿಕ ಜಾಲತಾಣವನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ವಿಫಲವಾಗಿವೆ. ಬೇಡದ್ದರ ಕಡೆಗೆ ಗಮನಹರಿಸುವ ಬದಲು, ನಮ್ಮ ಓದಿಗೆ, ಜೀವನ ರೂಪಿಸಿಕೊಳ್ಳಲು ಪೂರಕವಾದ ಕಾರ್ಯಕ್ರಮಗಳತ್ತ ಗಮನಹರಿಸಬೇಕೆಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕ್ರೀಡೆ ಮತ್ತು ಯುವಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ರೋಹಿತ್ ಗಂಗಾಧರ್, ಮಕ್ಕಳಲ್ಲಿ ರಾಷ್ಟ್ರಪ್ರೇಮ, ದೇಶಭಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರ ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಾ ಬಂದಿದೆ. ಇದೇ ಮೊದಲ ಬಾರಿಗೆ ಯುವಜನೋತ್ಸವದಲ್ಲಿ ವಿಜ್ಞಾನ ಪ್ರಾತಕ್ಷಿಕೆಗಳಿಗೆ, ಕವನ, ನಾಟಕ ರಚನೆಗೆ ಅವಕಾಶ ಕಲ್ಪಿಸಿದೆ. ಜಾನಪದ ಗೀತೆಗಳ ಗಾಯನ, ನೃತ್ಯ ಸೇರಿದಂತೆ 11 ವಿವಿಧ ಸ್ಪರ್ಧೆಗಳಿದ್ದು,ಇಲ್ಲಿ ಬಹುಮಾನ ಪಡೆದವರನ್ನು ರಾಜ್ಯ ಮಟ್ಟಕ್ಕೆ, ರಾಜ್ಯದಿಂದ ಆಯ್ಕೆಯಾದವರನ್ನು ರಾಷ್ಟ್ರಮಟ್ಟಕ್ಕೆ ಕಳುಹಿಸಲಾಗುವುದು ಎಂದರು.ವೇದಿಕೆಯಲ್ಲಿ ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ಸುಹಾಸ್,ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ರವೀಂದ್ರ, ವಿಜಯಲಲಕ್ಷ್ಮೀ, ಹೇಮಲತ, ರಾಕ್‌ಲೈನ್ ರವಿ, ತೀರ್ಪುಗಾರರಾದ ರವೀಶ್, ಇಸ್ಮಾಯಿಲ್, ಪ್ರೊ.ತಿಪ್ಪೇಸ್ವಾಮಿ, ಗುರುಪ್ರಸಾದ್, ಅರುಣ್‌ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.