ಸಾರಾಂಶ
ಹೊಸಪೇಟೆ: ಜನಾರ್ದನ ರೆಡ್ಡಿ ಅವರನ್ನು ಬಿಜೆಪಿಗೆ ಕರೆತರುವ ಪ್ರಯತ್ನ ನಡೆಯುತ್ತಿದೆ ಎಂದು ವಿಪ ಸಚೇತಕ ಎನ್. ರವಿಕುಮಾರ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಜನಾರ್ದನ ರೆಡ್ಡಿ ಯಾವತ್ತಿದ್ರೂ ಬಿಜೆಪಿ ಪರ ಇದ್ದಾರೆ. ಅಖಂಡ ಜಿಲ್ಲೆ ಅಭಿವೃದ್ಧಿ ಮಾಡಿದ್ದಾರೆ, ಜನಾರ್ದನ ರೆಡ್ಡಿ ಪಕ್ಷದ ಹಿತೈಷಿ. ಅಮಿತ್ ಶಾ, ಜೆ.ಪಿ. ನಡ್ಡಾ ಕರೆದು ಮಾತಾಡಿದ್ದಾರೆ. ಅವರು ಬಿಜೆಪಿಗೆ ಬಂದ್ರೆ ಬೆಂಬಲ ಸಿಗುತ್ತದೆ.ಕೆ.ಎಸ್. ಈಶ್ವರಪ್ಪ ಮನವೊಲಿಸುವ ಪ್ರಯತ್ನ ಮಾಡಲಾಗುವುದು. ಈಗಾಗಲೇ ಮಾಜಿ ಸಚಿವ ಮಾಧುಸ್ವಾಮಿ ಮತ್ತು ಸಂಸದ ಕರಡಿ ಸಂಗಣ್ಣ ಅವರ ಮನವೊಲಿಸಲಾಗಿದೆ. ಸ್ವತಃ ಬಿ.ಎಸ್. ಯಡಿಯೂರಪ್ಪ ಮಾಧುಸ್ವಾಮಿ ಮನೆಗೆ ತೆರಳಿ ಮನವೊಲಿಸಿದ್ದಾರೆ. ಈಶ್ವರಪ್ಪ ಅವರದ್ದೇ ನಮಗೆ ಕಗ್ಗಂಟಾಗಿದೆ. ಅವರನ್ನೂ ಮನವೊಲಿಸುವ ಪ್ರಯತ್ನ ಮಾಡುತ್ತೇವೆ. ಸಂಧಾನದ ಬಳಿಕ, ಮಾಧುಸ್ವಾಮಿ, ಕರಡಿ ಸಂಗಣ್ಣ ಬಿಜೆಪಿಗೆ ಸಪೋರ್ಟ್ ಮಾಡುತ್ತೇವೆ ಎಂದು ಹೇಳಿದ್ದಾರೆ. ಕರಡಿ ಸಂಗಣ್ಣ ಮನೆಗೆ ನಾನೇ ಖುದ್ದು ಹೋಗಿದ್ದೆ, ಅಸಮಾಧಾನ ಸರಿಪಡಿಸಿ ಬಂದಿದ್ದೇವೆ. ಬಿಜೆಪಿ ಅಭ್ಯರ್ಥಿ ಗೆಲ್ಲಿಸೋದಕ್ಕೆ ಕೆಲಸ ಮಾಡುತ್ತೇವೆ ಅಂತ ಒಪ್ಪಿಕೊಂಡಿದ್ದಾರೆ. ಉಳಿದ ಕ್ಷೇತ್ರಗಳಿಗೆ ಇವತ್ತು ಅಥವಾ ನಾಳೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಲಿದೆ ಎಂದರು.ಗುಬ್ಬಿ ಶಾಸಕ ಶ್ರೀನಿವಾಸ್ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಸಿಎಂ ಸ್ಥಾನ ಕಳೆದುಕೊಳ್ತಾರೆ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದುಕೊಳ್ತಾರೆಂಬ ಚರ್ಚೆ ನಡೀತಿದೆ. 136 ಸೀಟು ಗೆದ್ದಾಗಿನಿಂದ ಕಾಂಗ್ರೆಸ್‌ನಲ್ಲಿ ಗೊಂದಲ ಸೃಷ್ಟಿ ಆಗಿದೆ. ಕಾಂಗ್ರೆಸ್ ಗೆದ್ದಾಗಲೇ ಸಿಎಂ ಯಾರಾಗಬೇಕು ಎನ್ನುವುದರ ಬಗ್ಗೆಯೇ ಮೂರ್ನಾಲ್ಕು ದಿನ ಚರ್ಚೆ ನಡೆಯಿತು. ಇದನ್ನೆಲ್ಲ ಗಮನಿಸಿದರೆ ಕಾಂಗ್ರೆಸ್‌ನಲ್ಲಿ ಗೊಂದಲ ಇದೆ ಎಂದರು.
ಮುಖಂಡರಾದ ಕಿಚಿಡಿ ಕೊಟ್ರೇಶ್, ಮಧುರಚನ್ನಶಾಸ್ತ್ರಿ ಮತ್ತಿತರರಿದ್ದರು.