ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಟೈಮ್ಸ್ ಪಿಯು ಕಾಲೇಜು ಇಲ್ಲಿನ ಗ್ರಾಮೀಣ ಮಕ್ಕಳಿಗೆ ಉತ್ತಮ ಸೌಲಭ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳನ್ನು ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು. ನಗರದ ಸೀತಾರಾಮಯ್ಯ ಕಲ್ಯಾಣ ಮಂಟಪದಲ್ಲಿ ಟೈಮ್ಸ್ ಪಿಯು ಕಾಲೇಜು ವತಿಯಿಂದ ಏರ್ಪಡಿಸಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ತಿಪಟೂರು ತಾಲೂಕನ್ನು ಜಿಲ್ಲೆಯಲ್ಲಿಯೇ ಅಭಿವೃದ್ಧಿ ಹೊಂದಿದ ಕ್ಷೇತ್ರವೆಂದು ನಂಜುಂಡಪ್ಪ ವರದಿಯಲ್ಲಿ ಕೈಬಿಡಲಾಗಿತ್ತು. ಮತ್ತೆ ಪರಿಶೀಲಿಸಿ ತಿಪಟೂರನ್ನು ಸೇರಿಸಲಾಗಿದೆ. ನಾನು ಮೂರು ಬಾರಿ ಶಾಸಕನಾಗಿದ್ದಾಗಲೂ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುತ್ತಾ ಬಂದಿದ್ದೇನೆ ಈ ಸಂಸ್ಥೆ ಮುಂದೆ ಹೆಮ್ಮರವಾಗಿ ಬೆಳೆದು ಕಲ್ಪತರು ನಾಡಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಂತಾಗಲಿ ಎಂದು ಶುಭ ಹಾರೈಸಿದರು. ನಿವೃತ್ತ ಎಸಿಪಿ, ಸಮಾಜ ಸೇವಕ, ಬಿಜೆಪಿ ಮುಖಂಡರಾದ ಲೋಕೇಶ್ವರ ಮಾತನಾಡಿ, ಪೋಷಕರ ಪಾತ್ರವೂ ಬಹುಮುಖ್ಯವಾಗಿದೆ. ಹಾಗಾಗಿ ಈ ಹಂತದಲ್ಲಿ ಒಂದು ಕ್ಷಣವನ್ನೂ ಹಾಳು ಮಾಡಿಕೊಳ್ಳದೆ ಮೊಬೈಲ್, ಟಿವಿ ಗಳಿಂದ ದೂರವಿದ್ದು ಪಠ್ಯಗಳತ್ತ ಗಮನ ಹರಿಸಬೇಕು ಎಂದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ. ಪುರುಷೋತ್ತಮ್ ಮಾತನಾಡಿ, ಮಕ್ಕಳು ಕೇವಲ ಅಂಕಗಳಿಗೆ ಸೀಮಿತವಾಗುತ್ತಿದ್ದು ಸಾಮಾಜಿಕ ಚಿಂತನೆ, ಕುಟುಂಬದ ಒಡನಾಟ, ಸಂಬಂಧಗಳಿಂದ ದೂರವಾಗುತ್ತಿದ್ದಾರೆ. ಶಿಕ್ಷಣ ಕೇವಲ ಉದ್ಯೋಗವಾಗದೆ ಮಾನವೀಯ ಮೌಲ್ಯ, ಸಾಮಾಜಿಕ ಕಳಕಳಿಯನ್ನು ಕಲಿಸಿಕೊಡುವಂತಾಗಬೇಕು ಎಂದರು.ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಟೈಮ್ಸ್ ಸಮೂಹ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಬಿ.ಕೆ. ಗಂಗಾಧರ್, ನಗರಸಭಾ ಸದಸ್ಯ ಎಂ.ಎಸ್. ಯೋಗೀಶ್, ನಗರಸಭೆ ಮಾಜಿ ಅಧ್ಯಕ್ಷ ಟಿ.ಎನ್. ಪ್ರಕಾಶ್, ಪ್ರಾಂಶುಪಾಲ ಪ್ರದೀಪ್, ಆಡಳಿತಾಧಿಕಾರಿ ಅನೂಪ್, ಉಪನ್ಯಾಸಕರುಗಳಾದ ಯೋಗೀಶ್ ಇತರರಿದ್ದರು.