ವೈದ್ಯಕೀಯ ವಿಜ್ಞಾನದ ಪಾರಿಭಾಷಿಕ ಪದಗಳನ್ನು ಕನ್ನಡದ ಜಾಯಮಾನಕ್ಕೆ ಹೊಂದುವಂತೆ ಭಾಷಾಂತರಿಸುವ ಕೆಲಸಗಳು ಆಗಬೇಕು. ಆ ಮೂಲಕ ಕನ್ನಡ ಭಾಷೆಯಲ್ಲೇ ವೈದ್ಯಕೀಯ ಶಿಕ್ಷಣ ನೀಡುವ ಗಂಭೀರ ಪ್ರಯತ್ನಗಳಾಗಬೇಕು. ಜತೆಗೆ ಪ್ರಾಯೋಗಿಕವಾಗಿ ಇದು ಎಷ್ಟು ಉಪಯುಕ್ತ ಎನ್ನುವ ಬಗ್ಗೆಯು ಪರಿಶೀಲನೆ ನಡೆಯಬೇಕು ಎಂದು ಹಿರಿಯ ಸಾಹಿತಿ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವೈದ್ಯಕೀಯ ವಿಜ್ಞಾನದ ಪಾರಿಭಾಷಿಕ ಪದಗಳನ್ನು ಕನ್ನಡದ ಜಾಯಮಾನಕ್ಕೆ ಹೊಂದುವಂತೆ ಭಾಷಾಂತರಿಸುವ ಕೆಲಸಗಳು ಆಗಬೇಕು. ಆ ಮೂಲಕ ಕನ್ನಡ ಭಾಷೆಯಲ್ಲೇ ವೈದ್ಯಕೀಯ ಶಿಕ್ಷಣ ನೀಡುವ ಗಂಭೀರ ಪ್ರಯತ್ನಗಳಾಗಬೇಕು. ಜತೆಗೆ ಪ್ರಾಯೋಗಿಕವಾಗಿ ಇದು ಎಷ್ಟು ಉಪಯುಕ್ತ ಎನ್ನುವ ಬಗ್ಗೆಯು ಪರಿಶೀಲನೆ ನಡೆಯಬೇಕು ಎಂದು ಹಿರಿಯ ಸಾಹಿತಿ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ನಗರದ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿರುವ 2 ದಿನಗಳ ‘ಕನ್ನಡದ ಪ್ರಥಮ ವೈದ್ಯಕೀಯ ಸಾಹಿತ್ಯ ಸಮ್ಮೇಳನ-2026’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯಕೀಯ ಶಿಕ್ಷಣವನ್ನು ಕನ್ನಡದಲ್ಲೇ ನೀಡಲು ಸಾಧ್ಯವೇ ಎಂಬ ಚರ್ಚೆ ನಡೆಯುತ್ತಲೇ ಇರುತ್ತದೆ. ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಪ್ರಯತ್ನ ಮಾಡಬೇಕು. ಅದರ ಪ್ರಾಯೋಗಿಕ ಉಪಯುಕ್ತತೆ ಹೇಗೆ ಎಂಬ ಬಗ್ಗೆಯೂ ಪರಿಶೀಲನೆ ಆಗಬೇಕು. ಇದಕ್ಕಾಗಿ ಮೊದಲು ವೈದ್ಯಕೀಯ ವಿಜ್ಞಾನದ ಪಾರಿಭಾಷಿಕ ಪದಗಳನ್ನು ಕನ್ನಡದ ಜಾಯಮಾನಕ್ಕೆ ಹೋಂದುವಂತೆ ಭಾಷಾಂತರಗೊಳಿಸುವ ಕೆಲಸಗಳು ಹೆಚ್ಚಾಗಿ ಆಗಬೇಕು. ವೈದ್ಯಕೀಯ ಪಾರಿಭಾಷಿಕ ಪದಗಳನ್ನು ಕನ್ನಡಕ್ಕೆ ತರುವುದು ಬಹಳ ಕಷ್ಟ ಎನ್ನುತ್ತಾರೆ.

ಆದರೆ, ಯಾವುದೇ ಪಾರಿಭಾಷಿಕ ಪದಗಳನ್ನು ಸ್ಥಳೀಯ ಭಾಷೆಗೆ ತರುವುದು ಕಷ್ಟವೇ. ಅಂತಹ ವೇಳೆ ಕನ್ನಡದ ಜಾಯಮಾನಕ್ಕೆ ಹೊಂದುವ ಯಾವುದೇ ಭಾಷೆಯ ಪದವನ್ನೂ ನಾವು ಬಳಸಬಹುದು. ಇದನ್ನು ಪ್ರಪಂಚದ ಭಾಷಾ ವಿಜ್ಞಾನಿಗಳು ಒಪ್ಪಿದ್ದಾರೆ. ಹಾಗೆ ಬಳಸದೆ ಹೋದರೆ ಭಾಷೆ ಅಳಿವಿನಂಚಿಗೆ ಹೋಗುತ್ತಿರುತ್ತದೆ. ಕೊಡು, ಕೊಳ್ಳುವಿಕೆಯಿಂದಲೇ ಭಾಷೆ ಉಳಿಯುಂತಹದ್ದು ಎಂದು ಪ್ರತಿಪಾದಿಸಿದರು.

ವೈದ್ಯರಷ್ಟೇ ಮುಖ್ಯ ವೈದ್ಯಕೀಯ ಸಾಹಿತ್ಯ: ಆರೋಗ್ಯ ವಲಯವು ಉದ್ಯಮ ಕ್ಷೇತ್ರಗಳಾಗಿ ಮಾರ್ಪಟ್ಟಿರುವ ಸನ್ನಿವೇಶದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ವೈದ್ಯರಷ್ಟೇ ಮುಖ್ಯವಾದುದು ವೈದ್ಯಕೀಯ ಸಾಹಿತ್ಯ. ಏಕೆಂದರೆ ಬರವಣಿಗೆ ಯಾವಾಗಲೂ ಆತ್ಮಾವಲೋಕನಕ್ಕೆ ಅವಕಾಶ ನೀಡುತ್ತದೆ. ಬೇರೆ ಬೇರೆ ವಲಯಗಳಲ್ಲಿ ಕೃತಿಗಳು ರಚನೆಯಾದಾಗ ಮಾತ್ರ ಆಯಾ ಭಾಷೆಯ ಸಾಹಿತ್ಯ ಮತ್ತು ಭಾಷೆ ಎರಡೂ ವಿಸ್ತರಣೆಯಾಗುತ್ತಿರುತ್ತವೆ. ಆ ನಿಟ್ಟಿನಲ್ಲಿ ಕನ್ನಡದಲ್ಲಿ ಸಾಕಷ್ಟು ವೈದ್ಯರು ಸಾವಿರಾರು ಪುಸ್ತಕಗಳನ್ನು ರಚಿಸಿ ದೊಡ್ಡ ಕೊಡುಗೆ ಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮುಹಸಿನ್, ಆರ್‌ಜಿಯುಎಚ್‌ಎಸ್‌ ಕುಲಪತಿ ಡಾ.ಬಿ.ಸಿ.ಭಗವಾನ್‌, ವಿಶ್ರಾಂತ ಕುಲಪತಿಗಳಾದ ಡಾ. ಚಂದ್ರಶೇಖರ ಶೆಟ್ಟಿ, ಡಾ.ಜಿ.ಕೆ. ವೆಂಕಟೇಶ್, ಡಾ. ಸಚ್ಚಿದಾನಂದ, ವಿವಿಯ ಕುಲಸಚಿವ ಅರ್ಜುನ್ ಒಡೆಯರ್, ಮೌಲ್ಯಮಾಪನ ಕುಲಸಚಿವ ಡಾ. ಸಂದೀಪ್ ವಿ.ಎಚ್., ಹಣಕಾಸು ಅಧಿಕಾರಿ ಗಂಗಾಧರ ಬಿ.ಕೆ., ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಆರ್.ಕೆ. ಸರೋಜ ಇದ್ದರು.

ವೈದ್ಯ ಸಾಹಿತ್ಯ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ:

ಸಮ್ಮೇಳನಾಧ್ಯಕ್ಷ ಡಾ.ಯೋಗಣ್ಣ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ಅವರು ಮಾತನಾಡಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಆರಂಭಿಸಿರುವ ಪ್ರಥಮ ಕನ್ನಡ ಸಮಗ್ರ ವೈದ್ಯಕೀಯ ಸಾಹಿತ್ಯ ಸಮ್ಮೇಳನ ಐತಿಹಾಸಿಕ ಹೆಜ್ಜೆಯಾಗಿದೆ. ವಿವಿಧ ವೈದ್ಯಕೀಯ ಪದ್ಧತಿಗಳ ತಜ್ಞರನ್ನು ಒಂದೇ ವೇದಿಕೆಗೆ ತಂದು ಜ್ಞಾನ ವಿನಿಮಯಕ್ಕೆ ಅವಕಾಶ ಕಲ್ಪಿಸಿರುವುದು ವಿಶೇಷ. ಕನ್ನಡದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಸಾಹಿತ್ಯದ ಬೆಳವಣಿಗೆಗೆ ಈಗ ಸರ್ಕಾರದ ಸಕ್ರಿಯ ಪ್ರೋತ್ಸಾಹ ಹಾಗೂ ನೀತಿಪೂರ್ವಕ ಕ್ರಮಗಳು ಅಗತ್ಯ. ಈ ನಿಟ್ಟಿನಲ್ಲಿ ವೈದ್ಯಕೀಯ ಸಾಹಿತ್ಯ ಅಕಾಡೆಮಿ ಸ್ಥಾಪನೆ, ಕನ್ನಡ ಪಠ್ಯಪುಸ್ತಕಗಳ ರಚನೆ ಸೇರಿ ಹಲವು ಮಹತ್ವದ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಆಗ್ರಹಿಸಿದರು. ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡವನ್ನು ಅನುಷ್ಠಾನಗೊಳಿಸುವ ಕಾರ್ಯದ ಪ್ರಗತಿ ಪರಿಶೀಲನೆಗೆ ಸಮಿತಿಯನ್ನು ರಚಿಸಬೇಕು. ವೈದ್ಯಕೀಯ ಸಾಹಿತ್ಯವನ್ನು ಪ್ರತ್ಯೇಕ ಕ್ಷೇತ್ರವೆಂದು ಪರಿಗಣಿಸಿ, ಪ್ರತಿವರ್ಷ ವೈದ್ಯಕೀಯ ಸಾಹಿತ್ಯ ಕ್ಷೇತ್ರದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿದರು.

ಆರೋಗ್ಯ ವಿಶ್ವಕೋಶ, ಕನ್ನಡ

ವೈದ್ಯ ಪದಕೋಶ ಬಿಡುಗಡೆ

ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಎಸ್‌.ಪಿ. ಯೋಗಣ್ಣ ಅವರು ರಚಿಸಿರುವ ‘ಆರೋಗ್ಯ ವಿಶ್ವಕೋಶ’ (ಮೂರು ಸಂಪುಟಗಳು), ಸುಮಾರು 2500 ಪುಟಗಳ ‘ಕನ್ನಡ ವೈದ್ಯ ಪದಕೋಶ’ ಪುಸ್ತಕಗಳನ್ನು ಬಿಡಗಡೆ ಮಾಡಲಾಯಿತು. ಈ ಬಗೆಗಿನ ಕೃತಿಗಳು ಕನ್ನಡ ಸೇರಿದಂತೆ ಯಾವುದೇ ಪ್ರಾದೇಶಿಕ ಭಾಷೆಯ ವೈದ್ಯಕೀಯ ಕ್ಷೇತ್ರದಲ್ಲೂ ಮೂಡಿಬಂದಿಲ್ಲ ಎಂದು ಮೆಚ್ಚುಗೆ ವ್ಯಕ್ತವಾಯಿತು. ಇದೇ ವೇಳೆ, ಆರ್‌ಜಿಯುಎಚ್‌ಎಸ್‌ನಿಂದ ಪ್ರಕಟವಾಗಿರುವ ನಾಡೋಜ ಡಾ.ಪಿ.ಎಸ್‌.ಶಂಕರ್‌ ಅವರು ರಚಿಸಿರುವ ‘ವೈದ್ಯ ವಿಜ್ಞಾನ ಅಂದು ಇಂದು ಮುಂದು’, ಡಾ.ಸೋಮಶೇಖರ್‌ ಅವರ ಹರೆಯವರಣ, ಡಾ.ಬಿ.ಕೆ. ಮಹಾಬಲರಾಜು ಅವರ ‘ಅನ್ನಬ್ರಹ್ಮನ ಅಂತರಿಕ್ಷಣೆ’ ಮತ್ತು ‘ಹೊಟ್ಟೆಯೊಳಗೆ ಹೊಟ್ಟೆಗಳು’ ಪುಸ್ತಕಗಳನ್ನು ಲೋಪಾರ್ಪಣೆ ಮಾಡಲಾಯಿತು.