ಸಾರಾಂಶ
ಚಿಕ್ಕಮಗಳೂರು ಜಿಲ್ಲಾ ಐದನೇ ಜಾನಪದ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಎಲ್ಲಾ ಕಲೆಗಳು ಮುಂದಿನ ಪೀಳಿಗೆಗೆ ಮುಂದುವರಿಸಲು ಕರ್ನಾಟಕ ಜಾನಪದ ಪರಿಷತ್ತು ಹಾಗೂ ಎಲ್ಲ ಸಂಘ ಸಂಸ್ಥೆಗಳು ಕ್ರಿಯಾಶೀಲ ವಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.ಸೋಮವಾರ ಪಟ್ಟಣದಲ್ಲಿ ನಡೆದ ಕರ್ನಾಟಕ ಜಾನಪದ ಪರಿಷತ್ತು ಚಿಕ್ಕಮಗಳೂರು ಜಿಲ್ಲಾ ಘಟಕದಿಂದ ಜಾನಪದ ಕೋಗಿಲೆ ಕೆ.ಆರ್. ಲಿಂಗಪ್ಪ ಸ್ಮರಣಾರ್ಥ ಅವರ ಜನ್ಮಸ್ಥಳ ಅಜ್ಜಂಪುರ ತಾಲೂಕಿನ ಶಿವನಿ ಹೋಬಳಿ ಕಲ್ಲೇನ ಹಳ್ಳಿಯಲ್ಲಿ ಅ.13 ರಂದು ಭಾನುವಾರ ವಿಜೃಂಭಣೆಯಿಂದ ನಡೆಯಲಿರುವ ಜಾನಪದ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಈ ನಾಡಿನ ಶ್ರೇಷ್ಠ ಜಾನಪದ ತಜ್ಞರು ಮತ್ತು ಜಾನಪದ ಕೋಗಿಲೆ ಕೆ.ಆರ್. ಲಿಂಗಪ್ಪನವರ ಜನ್ಮಸ್ಥಳದಲ್ಲಿ ಜಿಲ್ಲಾ ಜಾನಪದ ಸಮ್ಮೇಳನ ಹಮ್ಮಿಕೊಂಡಿರುವುದು ಈ ನಾಡು, ಅವರ ಕಲಾ ಸೇವೆಗೆ ಕೊಟ್ಟ ಗೌರವ. ಈ ಜಿಲ್ಲಾ ಸಮ್ಮೇಳನ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಕೋರಿದ ಅವರು ಅಜ್ಜಂಪುರ ತಾಲೂಕು ಜನಪದ ಕಲೆಗಳ ತವರೂರು. ಬಹಳಷ್ಟು ಜನಪದ ಕಲೆ ಅಜ್ಜಂಪುರ ತರೀಕೆರೆ ತಾಲೂಕಿನಲ್ಲಿ ಬೆಳೆದು ಬಂದಿವೆ. ಎಂದು ತಿಳಿಸಿದರು. ಕರ್ನಾಟಕ ಜಾನಪದ ಪರಿಷತ್ತು ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಜಿ. ಬಿ. ಸುರೇಶ್ ಮಾತನಾಡಿ. ಈ ಸಮ್ಮೇಳನದಲ್ಲಿ ಚಿಕ್ಕಮಗಳೂರು- ಉಡುಪಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಜಿ.ಎಚ್.ಶ್ರೀನಿವಾಸ್, ನಾಡಿನ ಜಾನಪದ ತಜ್ಞ ಗೊ.ರು.ಚನ್ನಬಸಪ್ಪ, ಜಾನಪದ ಲೋಕದ ಅಧ್ಯಕ್ಷ ಪ್ರೊಫೆಸರ್ ಹೀ, ಚಿ ಬೋರಲಿಂಗಯ್ಯ ರವರನ್ನು ಆಹ್ವಾನಿಸಲಾಗಿದೆ. ಜಾನಪದ ವಿದ್ವಾಂಸ ಚಟ್ನಹಳ್ಳಿ ಮಹೇಶ್, ಡಾ. ಬಸವರಾಜ ನಲಿಸರ , ಗೌರವಾಧ್ಯಕ್ಷ ಡಾ. ಜೆ.ಪಿ ಕೃಷ್ಣೆಗೌಡ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡಲಿದ್ದು ಆ ದಿನ ಜಿಲ್ಲೆಯ ಎಲ್ಲ ಜಾನಪದ ಕಲಾವಿದರು ಜಾನಪದ ಕಲಾಪೋಷಕರು, ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು. ಎಲ್ಲರಿಗೂ ಮಧ್ಯಾಹ್ನದ ಭೋಜನ,ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ, ಪಟ ಕುಣಿತ, ಕೋಲಾಟ, ಜಾನಪದ ನೃತ್ಯ ಸೋಮನ ಕುಣಿತ, ಗಾರುಡಿ ಗೊಂಬೆ, ಚಿಟ್ಟಿ ಮೇಳ ಅಸಾದಿ ಕುಣಿತ, ಸುಗ್ಗಿ ಕುಣಿತ, ಕೀಲು ಕುದುರೆ ಭಾಗವಹಿಸಲಿದ್ದು ಈ ಸಮ್ಮೇಳನಕ್ಕೆ ರಂಗು ತರಲಿವೆ ಎಂದು ಹೇಳಿದರು. ಪ್ರಮುಖ ಬೀದಿಗಳಲ್ಲಿ ರಂಗೋಲಿ, ತಳಿರು ತೋರಣ ಬಂಟಿಂಗ್ಸ್, ಫ್ಲೆಕ್ಸ್ ಗಳನ್ನು ಹಾಕಿ ಅಲಂಕಾರಿಕ ವಿದ್ಯುತ್ ದ್ವೀಪಗಳು, ಸ್ವಾಗತ ಕಮಾನುಗಳಿಂದ ಕಲ್ಲೇನಹಳ್ಳಿಯನ್ನು ಸಿಂಗರಿಸಲಾಗುವುದು. ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ಕಲಾವಿದರನ್ನು ಗೌರವಿಸಲಾಗುವುದು. ಜನಪದ ಹಾಡುಗಾರರಿಗೆ ಒಗಟು, ಗಾದೆ ಹೇಳುವವರಿಗೆ, ಜಾನಪದ ನಾಟಕಗಳು ಮುಂತಾದ ಕಲಾ ಪ್ರದರ್ಶನಕ್ಕೆ ವೇದಿಕೆ ಕೊಡಲಾಗುವುದು. ಸಮ್ಮೇಳನ ಅಧ್ಯಕ್ಷರನ್ನು ಕಲಾತಂಡಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಕರೆತರಲಾಗುವುದು ಎಂದು ವಿವರಿಸಿದರು. ಜಾನಪದ ಕಲಾವಿದ ಮತ್ತು ತರೀಕೆರೆ ತಾಲೂಕು ಕಜಾಪ ಅಧ್ಯಕ್ಷ ಆರ್ . ನಾಗೇಶ್ ಮಾತನಾಡಿ, ಸಮ್ಮೇಳನದ ದಿನದಂದು ಜಿಲ್ಲೆಯ ಎಲ್ಲಾ ಕಲಾವಿದರು ಬೆಳಿಗ್ಗೆ 9ಕ್ಕೆ ನಡೆಯುವ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕು. ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಉಪಸ್ಥಿತರಿರಬೇಕೆಂದು ಮನವಿ ಮಾಡಿದರು. ಜಾನಪದ ಪ್ರಶಸ್ತಿ ಪುರಸ್ಕೃತರಾದ ಡಾ. ಮಾಳೇನಹಳ್ಲಿ ಬಸಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನದ ಅಧ್ಯಕ್ಷ ಕರಿಬಸಪ್ಪ, ಸಂಚಾಲಕ ಅಣ್ಣಯ್ಯ, ಸ್ವಾಗತ ಸಮಿತಿ ಸದಸ್ಯರಾದ ಶಿವನಿ ಹೋಬಳಿ ಕ.ಜಾ.ಪ.ಅಧ್ಯಕ್ಷ ಕಾರೆಹಳ್ಳಿ ಬಸಪ್ಪ, ಕಾಂತರಾಜು, ಗ್ರಾಮ ಪಂಚಾಯತಿ ಅಧ್ಯಕ್ಷ ತಿಪ್ಪೇಶ, ಸದಸ್ಯೆ ಭಕ್ತನಕಟ್ಟೆ ಪುಷ್ಪ, ಶಿಕ್ಷಕ ಬಸವರಾಜಪ್ಪ, ಕಲಾವಿದರಾದ ಗಂಗಣ್ಣ, ಗಂಗಾಧರಪ್ಪ ಹಾಗೂ ಇತರೆ ಕಲಾವಿದರು ಗ್ರಾಮಸ್ಥರು ಉಪಸ್ಥಿತರಿದ್ದರು.
16ಕೆಟಿಆರ್.ಕೆ.10ಃತರೀಕೆರೆಯಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಚಿಕ್ಕಮಗಳೂರು ಜಿಲ್ಲಾ ಐದನೇ ಜಾನಪದ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಕರ್ನಾಟಕ ಜಾನಪದ ಪರಿಷತ್ತು ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಜಿ ಬಿ ಸುರೇಶ್, ಜಾನಪದ ಪ್ರಶಸ್ತಿ ಪುರಸ್ಕೃತರಾದ ಡಾ.ಮಾಳೇನಹಳ್ಳಿ ಬಸಪ್ಪ. ತರೀಕೆರೆ ತಾಲೂಕು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಆರ್ ನಾಗೇಶ್,ಮತ್ತಿತರರು ಇದ್ದರು.