ಕಡೂರುಕ್ಷೇತ್ರದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮಟ್ಟದಲ್ಲಿ ಹಾಗೂ ವೈಯಕ್ತಿಕವಾಗಿ ನಿರಂತರ ಪ್ರಯತ್ನ ನಡೆಸುತ್ತಿದ್ದೇನೆ ಎಂದು ಶಾಸಕ ಕೆ.ಎಸ್.ಆನಂದ್ ಭರವಸೆ ನೀಡಿದರು.
ಕನ್ನಡಪ್ರಭ ವಾರ್ತೆ ಕಡೂರು
ಕ್ಷೇತ್ರದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮಟ್ಟದಲ್ಲಿ ಹಾಗೂ ವೈಯಕ್ತಿಕವಾಗಿ ನಿರಂತರ ಪ್ರಯತ್ನ ನಡೆಸುತ್ತಿದ್ದೇನೆ ಎಂದು ಶಾಸಕ ಕೆ.ಎಸ್.ಆನಂದ್ ಭರವಸೆ ನೀಡಿದರು.ಪಟ್ಟಣದ ಶ್ರೀ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ಕಡೂರು ತಾಲೂಕು ಸಮಿತಿಯಿಂದ ಐಸಿಡಿಎಸ್ ಯೋಜನೆ 50ನೇ ವರ್ಷದ ಸುವರ್ಣ ಮಹೋತ್ಸವ ಅಂಗ ವಾಗಿ ಆಯೋಜಿಸಿದ್ದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ವೇತನವನ್ನು ₹3 ಸಾವಿರ ಹೆಚ್ಚಿಸಲಾಗಿದೆ. ಕಾರ್ಯಕರ್ತೆಯರಿಗೆ ₹15 ಸಾವಿರ ವೇತನ ನೀಡಬೇಕೆಂಬ ಬೇಡಿಕೆಯಿದ್ದು, ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿ ಬೇಡಿಕೆ ಈಡೇರಿಕೆಗೆ ಪ್ರಯತ್ನಿಸುವುದಾಗಿ ತಿಳಿಸಿದರು.ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ದೂರದೃಷ್ಟಿಯಿಂದ ಜಾರಿಗೊಂಡ ಸಮಗ್ರ ಶಿಶು ಅಭಿವೃದ್ಧಿ ಸೇವೆ (ಐಸಿಡಿಎಸ್) ಯೋಜನೆ 5 ದಶಕಗಳನ್ನು ಪೂರೈಸಿರುವುದು ಮಹತ್ವದ ಸಾಧನೆ. ಮಕ್ಕಳ ಅಪೌಷ್ಟಿಕತೆ ನಿವಾರಣೆ, ಗರ್ಭಿಣಿಯರು ಮತ್ತು ಬಾಣಂತಿಯರ ಆರೋಗ್ಯ ರಕ್ಷಣೆ ಹಾಗೂ ಪೌಷ್ಟಿಕ ಆಹಾರ ವಿತರಣೆಯಲ್ಲಿ ಈ ಯೋಜನೆ ಪ್ರಮುಖ ಪಾತ್ರ ವಹಿಸಿದೆ. ಶಾಸಕ ರಾದ ಬಳಿಕ ಕ್ಷೇತ್ರದಲ್ಲಿ ಅಂಗನವಾಡಿ ಕಟ್ಟಡ ಹಾಗೂ ನಿವೇಶನಗಳ ನಿರ್ಮಾಣಕ್ಕೆ ಆದ್ಯತೆ ನೀಡಿದ್ದು, ಮೂರು ಬಾರಿ ಖಾಲಿ ಹುದ್ದೆಗಳ ಭರ್ತಿಗೆ ಪಾರದರ್ಶಕವಾಗಿ ಸಹಕರಿಸಿದ್ದೇನೆ ಎಂದರು.ವಿಶೇಷ ಆಹ್ವಾನಿತರಾಗಿದ್ದ ಭಾರತೀಯ ಸೇನಾಧಿಕಾರಿ ಭವ್ಯ ನರಸಿಂಹಮೂರ್ತಿ ಮಾತನಾಡಿ, ಅಂಗನವಾಡಿ ಕಾರ್ಯ ಕರ್ತೆಯರ ಸೇವೆ ದೇಶಸೇವೆಗೆ ಸಮಾನವಾಗಿದೆ. ತಾಯ್ತನ, ಶಿಕ್ಷಕಿಯ ಹಾಗೂ ಆರೋಗ್ಯ ಕಾರ್ಯಕರ್ತೆಯರ ಜವಾಬ್ದಾರಿಗಳನ್ನು ಅವರು ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.ಫೆಡರೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಜಯಮ್ಮ ಮಾತನಾಡಿ ಕಳೆದ 15 ವರ್ಷಗಳಿಂದ ಕೇಂದ್ರ ಸರ್ಕಾರ ಅಂಗನ ವಾಡಿ ನೌಕರರಿಗೆ ಅಗತ್ಯ ನೆರವು ನೀಡಿಲ್ಲ ಎಂದು ಆರೋಪಿಸಿದರು. ಕಾರ್ಯಕರ್ತೆಯರ ವೇತನ ₹15 ಸಾವಿರಕ್ಕೆ ಹೆಚ್ಚಿಸುವುದರೊಂದಿಗೆ ಸಹಾಯಕಿಯರ ವೇತನ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.ಫೆಡರೇಷನ್ ರಾಜ್ಯಾಧ್ಯಕ್ಷ ಬಿ. ಅಮ್ಜದ್, ತಾಲೂಕು ಅಧ್ಯಕ್ಷೆ ಯು.ಆರ್. ಪಾರ್ವತಮ್ಮ, ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಧಾ ಸುಂದರೇಶ್, ಆಸಂದಿ ಕಲ್ಲೇಶ್, ಗುಮ್ಮನಹಳ್ಳಿ ಅಶೋಕ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಿ.ಎಚ್. ಕೃಷ್ಣಪ್ಪ ಮಾತನಾಡಿದರು. ಸಿಡಿಪಿಒ ಎನ್.ಎಸ್. ದೇವರಾಜ್ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಫೆಡರೇಷನ್ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.