ನೆಲಮಂಗಲ: ತಾಲೂಕಿನಲ್ಲಿ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ತಾಲೂಕು ಆಡಳಿತ ಸಜ್ಜಾಗಿದ್ದು, ಜವಾಬ್ದಾರಿಗಳಿಂದ ನುಣುಚಿಕೊಳ್ಳುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಎಚ್ಚರಿಕೆ ನೀಡಿದರು

ನೆಲಮಂಗಲ: ತಾಲೂಕಿನಲ್ಲಿ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ತಾಲೂಕು ಆಡಳಿತ ಸಜ್ಜಾಗಿದ್ದು, ಜವಾಬ್ದಾರಿಗಳಿಂದ ನುಣುಚಿಕೊಳ್ಳುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಎಚ್ಚರಿಕೆ ನೀಡಿದರು. ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನವೆಂಬರ್ 1ರಂದು ಭಾನುವಾರದ ರಜೆಯಿದ್ದರೂ ಪ್ರತಿಯೊಂದು ಇಲಾಖೆಯ ಮುಖ್ಯಸ್ಥರು ಮತ್ತು ಸಿಬ್ಬಂದಿ ಹಾಜರಿರುವುದು ಕಡ್ಡಾಯ. ಸಭೆಗಳಿಗೆ ತಾವೇ ಸ್ವತಃ ಬಾರದೆ ಸಿಬ್ಬಂದಿಯನ್ನು ಕಳುಹಿಸುವ ಅಧಿಕಾರಿಗಳಿಗೆ ಇನ್ನು ಮುಂದೆ ನೋಟಿಸ್ ನೀಡಲಾಗುವುದು ಎಂದೂ ಹೇಳಿದರು.

ನ.1ರಂದು ಬೆಳಿಗ್ಗೆ ಪರಿವೀಕ್ಷಣ ಮಂದಿರದಿಂದ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳೊಂದಿಗೆ ಕನ್ನಡಾಂಬೆಯ ಮೆರವಣಿಗೆ ಆರಂಭವಾಗಲಿದೆ. ನಂತರ ತಾಲೂಕು ಕಚೇರಿ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಹಾಗೂ ಮಕ್ಕಳ ಸಾಂಸ್ಕೃತಿಕ ಕಲಾಪ್ರದರ್ಶನಗಳು ನೆರವೇರಲಿವೆ. ಹಬ್ಬದ ಅಂಗವಾಗಿ ಎಲ್ಲಾ ಇಲಾಖೆಗಳ ಕಚೇರಿಗಳನ್ನು ದೀಪಾಲಂಕಾರದಿಂದ ಕಂಗೊಳಿಸುವಂತೆ ಮಾಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಉಪತಹಸೀಲ್ದಾರ್ ಶಶಿಧರ್, ಕಸಾಪ ತಾಲೂಕು ಅಧ್ಯಕ್ಷ ವೀರಸಾಗರ ಭಾನುಪ್ರಕಾಶ್, ಮಾಜಿ ಅಧ್ಯಕ್ಷ ಕೇಶವಮೂರ್ತಿ, ಕನ್ನಡಪರ ಸಂಘಟನೆಗಳ ಮುಖಂಡರಾದ ಸಿದ್ದರಾಜು, ನರಸಿಂಹಯ್ಯ, ಮಂಜೇಗೌಡ, ಸಿದ್ದಯ್ಯ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಾಣಿ, ಶಿರಸ್ತೇದಾರ್ ಪುಷ್ಪಾ, ನಗರಸಭೆ ಮ್ಯಾನೇಜರ್ ಮಮ್ತಾಜ್ ಹಾಗೂ ಇಲಾಖೆಯ ಇತರೆ ಸಿಬ್ಬಂದಿ ಹಾಜರಿದ್ದರು.

ಪೋಟೋ 3 :

ನೆಲಮಂಗಲ ತಾಲೂಕು ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಪ್ರಯುಕ್ತ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಹಾಗೂ ಕನ್ನಡಪರ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.