ಸಾರಾಂಶ
ಹೊಳೆನರಸೀಪುರ: ಒಂದೆರಡು ಸಾಲುಗಳು ಮನಸ್ಸಿಗೆ ಉಲ್ಲಾಸ ಜತೆಗೆ ಮುದ ನೀಡುವಂತಿದ್ದರೆ ಅದು ಚುಟುಕು ಸಾಹಿತ್ಯ ಎನಿಸುತ್ತದೆ. ಓದಿ ಓದಿ ಕನ್ನಡ ಕವನ, ನಾ ಕೊಂಡುಕೊಂಡೆ ಕನ್ನಡಕವನ್ನ, ಇಂತಹ ಚುಟುಕುಗಳಿಂದ ನಮ್ಮ ಅನೇಕ ಕವಿಗಳು ರಾಜ್ಯ, ರಾಷ್ಟ್ರಮಟ್ಟದ ಗಮನ ಸೆಳೆದಿದ್ದಾರೆ. ಆದ್ದರಿಂದ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಇಂತಹ ಕಾರ್ಯಕ್ರಮಗಳನ್ನು ಮೇಲಿಂದ ಮೇಲೆ ಆಯೋಜಿಸಿ ಚುಟುಕು ಸಾಹಿತ್ಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ಪ್ರಯತ್ನಿಸುತ್ತಿದೆ ಎಂದು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರೇಮಾ ಮಂಜುನಾಥ್ ತಿಳಿಸಿದರು. ಪಟ್ಟಣದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ನಲ್ಲಿ ಆಯೋಜಿಸಿದ್ದ ಸಂಕ್ರಾತಿ ಸಂಭ್ರಮ ಚುಟುಕು ಸಾಹಿತ್ಯ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಚುಟುಕು ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿದ್ದರೆ ನುರಿತ ಚುಟುಕು ಸಾಹಿತಿಗಳಿಂದ ತರಬೇತಿ ಕೊಡಿಸುತ್ತೇವೆ ಎಂದರು. ಪ್ರಾಂಶುಪಾಲ ಕೆ.ಎಂ.ಶ್ರೀಧರ್, ಸಾಹಿತ್ಯದ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ. ಕನ್ನಡ ಸಾಹಿತ್ಯ ನಮಗೆ ಅತ್ಯುತ್ತಮ ಮಾರ್ಗದರ್ಶನ ನೀಡುವುದರ ಜೊತೆಗೆ ಮನಸ್ಸಿಗೆ ಮುದ ನೀಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದೆ ಹಾಗೂ ಅದರಲ್ಲೇ ಚುಟುಕು ಸಾಹಿತ್ಯ ಬಗ್ಗೆ ಹುಡುಕಿ ಕಲಿಯಿರಿ ಎಂದರು. ಸಂಕ್ರಾಂತಿ ಸಂಭ್ರಮ ಚುಟುಕು ಸಾಹಿತ್ಯ ರಚನೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪ್ರಾಧ್ಯಾಪಕ ಎನ್.ಆರ್.ಶಿವರಾಂ, ಅರಕಲಗೂಡು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಉಡುವಾರೆ ಸುಂದರೇಶ್ ಬಹುಮಾನ ವಿತರಿಸಿದರು. ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಸದಸ್ಯರಾದ ಕಲಾವಿದ ಎಚ್.ಎಸ್.ವಿಜಯಕುಮಾರ್, ಪೋಟೋ ನರಸಿಂಹ, ಮುರಳೀಧರ ಗುಪ್ತಾ, ಇತರರು ಭಾಗವಹಿಸಿದ್ದರು.
------