ಸಾರಾಂಶ
ಮುಂಡಗೋಡ: ಕೆರೆಗಳು ಸುಭದ್ರವಾಗಿದ್ದರೆ ಮಾತ್ರ ರೈತರ ಬದುಕು ಹಸನಾಗಲು ಸಾಧ್ಯ ಎಂದು ಬೈಪ್ ಸಂಸ್ಥೆ ರಾಜ್ಯ ಮುಖ್ಯಸ್ಥ ಎಂ.ಎನ್. ಕುಲಕರ್ಣಿ ತಿಳಿಸಿದರು.
ತಾಲೂಕಿನ ಕಾತೂರ ಗ್ರಾಮದ ಮಾರಿಕಾಂಬಾ ಪ್ರಾಂಗಣದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಬೈಪ್ ಸಂಸ್ಥೆಯ ಸಹಯೋಗದೊಂದಿಗೆ ಎಚ್‌ಆರ್‌ಡಿಪಿ(ಸಮಗ್ರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ) ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಹೂಳು ತುಂಬಿಕೊಂಡಿರುವ ಕೆರೆಗಳನ್ನು ನಬಾರ್ಡ್ ಸಹಕಾರದಿಂದ ಅಭಿವೃದ್ಧಿಪಡಿಸುವ ಉದ್ದೇಶವಿದ್ದು, ರೈತರು ಇದಕ್ಕೆ ಸಹಕರಿಸಬೇಕು ಎಂದರು.
ಎಚ್‌ಡಿಎಫ್‌ಸಿ ಬ್ಯಾಂಕ್ ಕ್ಲಸ್ಟರ್ ಹೆಡ್ ಗಣಪತಿ ಭಟ್ ಮಾತನಾಡಿ, ದೇಶ ಮತ್ತು ಸಮಾಜ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣ ಅತಿ ಮುಖ್ಯ. ಮಕ್ಕಳ ಶಿಕ್ಷಣ ಗುಣಮಟ್ಟ ಹೆಚ್ಚಬೇಕಾದರೆ ಪ್ರೋತ್ಸಾವ ಯೋಜನೆಗಳು ಅತ್ಯಗತ್ಯ. ಸ್ಮಾರ್ಟ್ ಕ್ಲಾಸ್‌ನಿಂದ ಶಿಕ್ಷಣ ಗುಣಮಟ್ಟ ಹೆಚ್ಚುತ್ತದೆ. ಹಾಗಾಗಿ ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಬೈಪ್ ಸಂಸ್ಥೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿವೆ ಎಂದ ಅವರು, ಬ್ಯಾಂಕ್‌ನಿಂದ ರೈತರಿಗೆ ಅಗತ್ಯವಿರುವ ಸಾಲ ಸವಲತ್ತುಗಳನ್ನು ನೀಡಲಾಗುತ್ತದೆ.
ಇದರ ಪ್ರಯೋಜನ ಪಡೆದುಕೊಂಡು ಸಬಲರಾಗಬೇಕು ಎಂದರು.ಬೈಪ್ ಸಂಸ್ಥೆಯ ಮುಖ್ಯಸ್ಥೆ ಸುನಿತಾ ಕುಸುಗಲ್ ಮಾತನಾಡಿ, ಮಣ್ಣು ಮತ್ತು ನೀರಿನ ಸಂರಕ್ಷಣೆಗೂ ಸಂಸ್ಥೆ ಮಾಡುತ್ತಿದ್ದು, ರೈತರಿಗೆ ಸಮಗ್ರ ಕೃಷಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಪ್ರತಿಯೊಬ್ಬರೂ ಇದರ ಸದುಪಯೋಗಪಡೆದುಕೊಳ್ಳುವಂತೆ ಕೋರಿದರು.
ಕಾತೂರ ಗ್ರಾಪಂ ಅಧ್ಯಕ್ಷೆ ಪ್ರೇಮಾ ಹರಿಜನ ಉದ್ಘಾಟಿಸಿದರು. ಎಚ್‌ಡಿಎಫ್‌ಸಿ ಬ್ಯಾಂಕ್ ವ್ಯವಸ್ಥಾಪಕ ಜಾರ್ಜ್ ವಿಲ್ಸನ್, ಮುಂಡಗೋಡ ಸಹಾಯಕ ಕೃಷಿ ನಿರ್ದೇಶಕ ಕೃಷ್ಣಪ್ಪ ಮಹಾರೆಡ್ಡಿ, ಕಾತೂರ ಸಹಕಾರಿ ಸಂಘದ ಅಧ್ಯಕ್ಷ ಶಿವಾಜಿ ಶಿಂದೆ, ತಾಲೂಕು ಅಭಿವೃದ್ದಿ ಆಕಾಂಕ್ಷಿ ಯೋಜನೆ ಅಧಿಕಾರಿ ನಖಲು ಕೋಕ್ರೆ ಬಿಆರ್‌ಸಿ ಮಲ್ಲಿಕಾರ್ಜುನ ಬಡಿಗೇರ, ನಾರಾಯಣ ನಾಗನೂರ, ಅರ್ಪಿತ ಜನ್ನು, ಕಿರಣ ಶೇಟ್, ನಾಗನೂರ ಗ್ರಾಪಂ ಅಧ್ಯಕ್ಷೆ ಯಶೋದಾ ಪಾಟೀಲ, ನವಾಂಗ್ ಖೇನ್ರಾಪ್ ಮುಂತಾದವರು ಉಪಸ್ಥಿತರಿದ್ದರು. ವೀರಣ್ಣ ಸ್ವಾಗತಿಸಿ ನಿರೂಪಿಸಿದರು.
ಹನೇಹಳ್ಳಿ ಗ್ರಾಪಂಗೆ ಅವಿರೋಧ ಆಯ್ಕೆ
ಗೋಕರ್ಣ: ಹನೇಹಳ್ಳಿ ಗ್ರಾಮ ಪಂಚಾಯಿತಿ ಹನೇಹಳ್ಳಿ ವಾರ್ಡಿನ ಉಪಚುನಾವಣೆಯಲ್ಲಿ ನಾರಾಯಣ ತುಕಾರಾಂ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಚುನಾವಣೆಯ ಪ್ರಕ್ರಿಯೆಯಲ್ಲಿ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಶುಕ್ರವಾರ ಎದುರು ಅಭ್ಯರ್ಥಿ ಪ್ರಶಾಂತ ನಾಯ್ಕ ಚುನಾವಣಾ ಕಣದಿಂದ ಹಿಂದೆ ಸರಿದರು.
ಇದರಿಂದ ನಾರಾಯಣ ಆಯ್ಕೆಯಾದರು. ಈ ವೇಳೆ ಗ್ರಾಪಂ ಅಧ್ಯಕ್ಷ ಸಣ್ಣು ಗೌಡ, ಉಪಾಧ್ಯಕ್ಷೆ ಭಾರತಿ ನಾಯ್ಕ, ಮಾಜಿ ಅಧ್ಯಕ್ಷೆ ಭಾರತಿ ಗೌಡ, ಬಿಜೆಪಿ ಪ್ರಮುಖರಾದ ಮಹೇಶ ಶೆಟ್ಟಿ, ಚಂದ್ರಕಾಂತ ಶೆಟ್ಟಿ, ಜೆಡಿಎಸ್‌ನ ಗಣಪತಿ ಎನ್. ನಾಯ್ಕ ಉಪಸ್ಥಿತರಿದ್ದರು.