ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಕೊಡವ ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಹಾಗೂ ಕೊಡವರಿಗೆ ಭಾಷಾ ಅಲ್ಪಸಂಖ್ಯಾತ ಸ್ಥಾನಮಾನ ಪಡೆಯುವ ಸದುದ್ದೇಶಕ್ಕೆ ಪೂರಕವಾಗಿ ಕೊಡವ ತಕ್ಕ್ ಎಳ್ತ್‌ಕಾರಡ ಕೂಟವು ಕೊಡವ ಭಾಷೆಯ ಪುಸ್ತಕಗಳನ್ನು ಪ್ರಕಟಿಸುವುದರೊಂದಿಗೆ ವಿವಿಧ ಕೊಡವ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಕೊಡವ ತಕ್ಕ್ ಎಳ್ತ್‌ಕಾರಡ ಕೂಟ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಮಾಹಿತಿ ನೀಡಿದ್ದಾರೆ.ಕೊಡವ ತಕ್ಕ್ ಎಳ್ತ್‌ಕಾರಡ ಕೂಟ ಹಾಗೂ ಕಾನೂರು-ಕೋತೂರು ಮಹಿಳಾ ಮಂಡಲದ ಜಂಟಿ ಆಶ್ರಯದಲ್ಲಿ ಮಹಿಳಾ ಮಂಡಲದ ಸಭಾಂಗಣದಲ್ಲಿ ನಡೆದ ವಿಶೇಷ ಕೊಡವ ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಬೇಡಿಕೆಯನ್ನು ಮೊದಲ ಬಾರಿಗೆ ಕೇಂದ್ರ ಸರ್ಕಾರದ ಮುಂದಿಟ್ಟ ಕೊಡವ ತಕ್ಕ್ ಎಳ್ತ್‌ಕಾರಡ ಕೂಟವು ಅಂದಿನಿಂದಲೇ ಇದಕ್ಕೆ ಪೂರಕವಾದ ವಿವಿಧ ಕಾರ್ಯವನ್ನು ನಡೆಸುತ್ತಾ ಬರುತ್ತಿದ್ದು, ಇದರ ಒಂದು ಭಾಗವಾದ ‘ಜನಪ್ರಿಯ ಕೊಡವ ಸಾಹಿತ್ಯ ಮಾಲೆ’ ಯೋಜನೆಯಲ್ಲಿ ಪ್ರತಿ ತಿಂಗಳಿಗೊಂದರಂತೆ ಇದುವರೆಗೆ 195 ಪುಸ್ತಕಗಳನ್ನು ಬಿಡುಗಡೆಗೊಳಿಸಿದ್ದು 200 ಪುಸ್ತಕದ ಗಡಿ ತಲುಪಲು ಇನ್ನು ಕೇವಲ 5 ಪುಸ್ತಕಗಳು ಮಾತ್ರ ಪ್ರಕಟಗೊಳ್ಳಬೇಕಿದೆ. ಈ ಯೋಜನೆಯಲ್ಲಿ ಬೇರೆ ಯಾವುದೇ ಭಾಷೆಗಳಲ್ಲಿ ಪ್ರಕಟವಾಗದ ವಿಭಿನ್ನ ಸಾಹಿತ್ಯ ಪುಸ್ತಕಗಳನ್ನು ಪ್ರಕಟಗೊಳಿಸಲಾಗಿದೆ. ಹಲವು ಯುವ ಲೇಖಕರಿಗೆ ‘ಕೂಟ’ದ ವತಿಯಿಂದ ಸಾಹಿತ್ಯ ರಚಿಸಲು ಪ್ರೇರಣೆ ಹಾಗೂ ಪ್ರೋತ್ಸಾಹ ನೀಡಲಾಗುತ್ತಿದ್ದು, 50ಕ್ಕೂ ಹೆಚ್ಚು ಯುವ ಲೇಖಕರ ಪುಸ್ತಕಗಳು ಕೂಟದ ವತಿಯಿಂದ ಬಿಡುಗಡೆಗೊಂಡಿದೆ. ಅಕ್ಟೋಬರ್‌ನಲ್ಲಿ ಕೊಡವ ಕ್ಯಾಲೆಂಡರ್‌ನ ಕನ್ಯಾರ್ ತಿಂಗಳಿಗೆ ಸಂಬಂಧಿಸಿದಂತೆ ‘ಕನ್ಯಾರ್ ಕವನ’ ಎಂಬ ವಿಶಿಷ್ಟ ಕವಿಗೋಷ್ಠಿಯನ್ನು ನಡೆಸಲಾಗುವುದು ಎಂದು ತಿಳಿಸಿದರು.ಕಾನೂರು-ಕೋತೂರು ಮಹಿಳಾ ಮಂಡಲ ಅಧ್ಯಕ್ಷೆ ಚೊಟ್ಟೆಕ್‌ಮಾಡ ಮಾಯಮ್ಮ ಬೋಪಯ್ಯ ಮಾತನಾಡಿ, ಎಲ್ಲ ಭಾಷೆ ಕಲಿಯಬೇಕು. ಆದರೆ ತಮ್ಮ ಮಾತೃಭಾಷೆಯಾದ ಕೊಡವ ಭಾಷೆಗೆ ಪ್ರಾಧಾನ್ಯತೆ ನೀಡಬೇಕಿದ್ದು, ಇಂಗ್ಲಿಷ್ ಭಾಷೆಯ ಹಾಗೂ ಪಾಶ್ಚಾತ್ಯ ಸಂಸ್ಕೃತಿಯ ಮೇಲಿನ ಅತಿಯಾದ ವ್ಯಾಮೋಹದಿಂದ ಭಾಷೆ ಹಾಗೂ ವಿಶ್ವ ಖ್ಯಾತಿಯ ಕೊಡವ ಸಂಸ್ಕೃತಿಗೆ ನೀಡಬೇಕಾದ ಪ್ರಾಧಾನ್ಯತೆ ಕಡಿಮೆಯಾಗಬಾರದು. ಈ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ನಡೆಸುತ್ತಿರುವ ಕೊಡವ ತಕ್ಕ್ ಎಳ್ತ್‌ಕಾರಡ ಕೂಟಕ್ಕೆ ದಾನಿಗಳು ಸೇರಿದಂತೆ ಎಲ್ಲರ ಸಹಕಾರ ಸಿಗುವಂತಾಗಲಿ ಎಂದರು.ದಾನಿ ಅಜ್ಜಮಾಡ ಲಾಲಿ ಪೊನ್ನಮ್ಮ ಮಾತನಾಡಿ, ಪುಸ್ತಕ ಓದುವ ಹವ್ಯಾಸ ಬಹಳ ಒಳ್ಳೆಯದು. ಇದರಿಂದ ಬಹಳಷ್ಟು ಜ್ಞಾನಾರ್ಜನೆಯಾಗುತ್ತದೆ ಎಂದರು.193ನೇ ಪುಸ್ತಕ ‘ಮುತ್ತ್‌ರಂತ ಸಂಸಾರ’ದ ಲೇಖಕಿ ಚೊಟ್ಟೆಯಾಂಡಮಾಡ ಲಲಿತ ಕಾರ್ಯಪ್ಪ ಮಾತನಾಡಿ, ಸರ್ಕಾರದ ಯಾವುದೇ ಅನುದಾನವಿಲ್ಲದೆ 195 ಪುಸ್ತಕ ಪ್ರಕಟಿಸಿರುವ ಕೂಟದ ಸಾಧನೆ ಶ್ಲಾಘನೀಯ. ನಾನು ಕೂಟದ ಪ್ರೋತ್ಸಾಹದಿಂದಲೇ 18 ಪುಸ್ತಕಗಳನ್ನು ಬರೆದಿದ್ದೇನೆ. ಪೋಷಕರು ತಮ್ಮ ಮಕ್ಕಳಿಗೆ ಕೊಡವ ಭಾಷೆ, ಸಾಹಿತ್ಯ, ಸಂಪ್ರದಾಯ, ಹಬ್ಬ ಹರಿದಿನಗಳಲ್ಲಿ ಭಾಗವಹಿಸುವಂತೆ ಮಾಡಿ ಈ ಶ್ರೀಮಂತ ಸಂಸ್ಕೃತಿಯ ಮೇಲೆ ಅಭಿಮಾನ ಹುಟ್ಚಿಸಬೇಕೆಂದರು.194ನೇ ಪುಸ್ತಕದ ಲೇಖಕ ಕೊಳ್ಳಿಮಾಡ ಕಟ್ಟಿ ಮುತ್ತಣ್ಣ ಮಾತನಾಡಿ, ತನ್ನ ‘ನಾಳ್‌ಕೊರ್ ನಲ್ಲರಿಮೆ’ ಪುಸ್ತಕದಲ್ಲಿ ಚಿಕ್ಕ ಮಕ್ಕಳಿಗೂ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಬದುಕಿನಲ್ಲಿ ಅಳವಡಿಸಿಕೊಳ್ಳಬಹುದಾದ ವಿಚಾರಗಳನ್ನು ಬರೆದಿದ್ದೇನೆ. ಪೋಷಕರು ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಲು ಪ್ರೋತ್ಸಾಹಿಸುವುದರೊಂದಿಗೆ ಎಲ್ಲರೂ ಪುಸ್ತಕ ಖರೀದಿಸಿ ಓದಿ ನಮ್ಮಂತಹ ಯುವ ಲೇಖಕರಿಗೆ ಹಾಗೂ ಕೂಟಕ್ಕೆ ಸಹಕಾರ ನೀಡಿ ಎಂದರು.195ನೇ ಪುಸ್ತಕದ ಲೇಖಕಿ ಬಾದುಮಂಡ ಬೀನ ಕಾಳಯ್ಯ ಮಾತನಾಡಿ, ಕೂಟದ ಪ್ರೋತ್ಸಾಹದಿಂದ ನನ್ನ ಚೊಚ್ಚಲ ಕೃತಿ ‘ಮಾಣಿಕ್ಯ ಮಾಲೆ’ ಹೊರಬಂದಿದ್ದು, ನಿರೀಕ್ಷೆಗೂ ಮೀರಿ ಉತ್ತಮವಾಗಿ ಮೂಡಿಬಂದಿದೆ. ಯುವ ಲೇಖಕರ ಬರಹಗಳನ್ನು ಪುಸ್ತಕ ರೂಪದಲ್ಲಿ ಹೊರತರುವ ಕೂಟದ ಪ್ರಯತ್ನಕ್ಕೆ, ಪುಸ್ತಕ ಪ್ರಕಟಿಸಲು ಧನ ಸಹಾಯ ನೀಡಿದ ದಾನಿಗಳಿಗೆ ಹಾಗೂ ಓದುಗರಿಗೆ ಧನ್ಯವಾದ ಸಮರ್ಪಿಸುವುದರೊಂದಿಗೆ ಎಲ್ಲರೂ ಪುಸ್ತಕ ಓದಿ ಅಭಿಪ್ರಾಯ ತಿಳಿಸಲು ಕೋರಿದರು.194ನೇ ಪುಸ್ತಕದ ದಾನಿ ಕೊಳ್ಳಿಮಾಡ ರಾಕಿ ಕಾವೇರಪ್ಪ, ಪುಸ್ತಕಗಳ ಲೇಖಕರನ್ನು ಅಭಿನಂದಿಸಿ ಶುಭ ಹಾರೈಸಿದರು.ಕೊಡವ ಹಾಡು, ಓದುವುದು ಹಾಗೂ ಹಾಸ್ಯ ಸ್ಪರ್ಧೆ ಏರ್ಪಡಿಸಿದ್ದು, ವಿಜೇತರಿಗೆ ಬಹುಮಾನ ಹಾಗೂ ಪ್ರಶಂಸನಾಪತ್ರ ನೀಡಲಾಯಿತು.
ಕೂಟದ ಸದಸ್ಯೆ ಅಜ್ಜಮಾಡ ಸಾವಿತ್ರಿ ಪ್ರಾರ್ಥಿಸಿದರು. ಮಹಿಳಾ ಮಂಡಲದ ಸದಸ್ಯೆ ಕೋದೇಂಗಡ ಯಮುನ ಸ್ವಾಗತಿಸಿದರು. ಕೂಟ'''''''' ಸದಸ್ಯೆ ಕೋಟ್ರಂಗಡ ಸಜನಿ ಸೋಮಯ್ಯ ಹಾಗೂ ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ದಾನಿಗಳ ಹಾಗೂ ಲೇಖಕರ ಪರಿಚಯ ಓದಿದರು. ನಿರ್ದೇಶಕ ಕಾಳಿಮಾಡ ಮೋಟಯ್ಯ ನಿರೂಪಿಸಿದರು. ಖಜಾಂಚಿ ಬೋಡಂಗಡ ಜಗದೀಶ್ ತಿಮ್ಮಯ್ಯ ವಂದಿಸಿದರು.