ಕನ್ನಡಪ್ರಭ ವಾರ್ತೆ ಕುಮಟಾ
ಸೀನಿಯರ್ ಛೇಂಬರ್‌ನ್ನು ಹೆಚ್ಚು ಕ್ರಿಯಾಶೀಲ ಹಾಗೂ ಜನಮುಖಿಯಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಹೊಸ ಯೋಜನೆ-ಯೋಚನೆ ಅನುಷ್ಠಾನಗೊಳಿಸಿ ಸಂಘಟನೆಗೆ ಹೊಸ ಚೈತನ್ಯ ತುಂಬುವುದಕ್ಕೆ ಎಲ್ಲ ಸದಸ್ಯರ ಸಹಕಾರ ಮತ್ತು ಮಾರ್ಗದರ್ಶನ ಸದಾ ಅಪೇಕ್ಷಿತ ಎಂದು ಸೀನಿಯರ್ ಛೇಂಬರ್ ಅಧ್ಯಕ್ಷ ವಸಂತರಾವ್ ಹೇಳಿದರು.ಪಟ್ಟಣದ ವಿವೇಕನಗರದಲ್ಲಿ ಇತ್ತೀಚೆಗೆ ಸೀನಿಯರ್ ಛೇಂಬರ್ ಲೆಜಿನ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು. ನಿರ್ಗಮಿತ ಅಧ್ಯಕ್ಷ ಆರ್.ಜಿ. ಭಟ್ ಪ್ರಮಾಣ ವಚನ ಬೋಧಿಸಿ, ಪಿನ್ ತೊಡಿಸಿ ಕಂಠಪಟ್ಟಿ ಧಾರಣೆಗೈದು ಅಧಿಕಾರ ಹಸ್ತಾಂತರಿಸಿದರು. ವಸಂತ ರಾವ್ ಪದಾಧಿಕಾರಿಗಳಿಗೆ ಜವಾಬ್ದಾರಿ ಹಂಚಿದರು.
ನಿಕಟಪೂರ್ವ ಅಧ್ಯಕ್ಷ ಆರ್.ಜಿ. ಭಟ್, ತಮ್ಮ ಅಧಿಕಾರಾವಧಿಯಲ್ಲಿ ಹಮ್ಮಿಕೊಂಡ ಚಟುವಟಿಕೆ ವಿವರಿಸಿದರು. ಹಲವು ಕಾರ್ಯಾಗಾರ, ತರಬೇತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಉತ್ತಮ ತರಬೇತುದಾರನಾಗಿ ಆಯ್ಕೆಯಾಗಿದ್ದನ್ನು ಸ್ಮರಿಸಿದರು.ಮುಖ್ಯ ಅತಿಥಿಯಾಗಿ ರೋಟರಿ ಅಧ್ಯಕ್ಷ ಕಿರಣ ನಾಯಕ ಮಾತನಾಡಿ, ವ್ಯಕ್ತಿಯ ಸಮರ್ಪಣಾ ಮನೋಭಾವವೇ ಸಂಸ್ಥೆಯ ಬೆಳವಣಿಗೆಯ ಬೆನ್ನೆಲುಬು. ನೂತನ ಪದಾಧಿಕಾರಿಗಳು ಉತ್ಸಾಹ, ಬದ್ಧತೆ ಮತ್ತು ತಂಡದ ಮನೋಭಾವದೊಂದಿಗೆ ಕಾರ್ಯನಿರ್ವಹಿಸಿ ಸಂಸ್ಥೆ ಉನ್ನತಿಗೇರಲಿ ಎಂದರು.
ಪದಗ್ರಹಣ ಅಧಿಕಾರಿಯಾಗಿ ಕುಮಾರ ಕೂರ್ಸೆ ಪಾಲ್ಗೊಂಡು, ಕಾರ್ಯದರ್ಶಿ ಎನ್.ಆರ್. ಗಜು, ಸಹ ಕಾರ್ಯದರ್ಶಿ ಸುರೇಶ್ ಭಟ್, ಕೋಶಾಧಿಕಾರಿ ಆಶಾ ಭಟ್, ಉಪಾಧ್ಯಕ್ಷ ಸುನಿಲ್ ಭಟ್ ಹಾಗೂ ಜಿ.ಎಂ. ಭಟ್, ನಿರ್ದೇಶಕ ಎಸ್.ವಿ. ಹೆಗಡೆ, ಗಣೇಶ ಭಟ್ ಮತ್ತು ಶ್ರೀಕಾಂತ ಭಟ್ ಪದಗ್ರಹಣ ಮಾಡಿದರು.
ನೂತನ ಸದಸ್ಯರಾದ ಆರ್.ಜಿ. ಗುನಗಿ, ಜಯಂತಿ ಹೆಗಡೆ, ಸುಧಾ ಭಟ್, ಲತಾ ಭಟ್, ವಿಜಯಲಕ್ಷ್ಮಿ ನಾಯ್ಕಗೆ ಪ್ರಮಾಣ ವಚನ ಬೋಧಿಸಿದರು.
ಆಶಾ ಭಟ್ ಪ್ರಾರ್ಥಿಸಿದರು. ಜಯದೇವ ಬಳಗಂಡಿ ಧ್ಯೇಯವಾಕ್ಯ ಓದಿದರು. ಎಸ್.ವಿ. ಹೆಗಡೆ ಸ್ವಾಗತಿಸಿದರು. ಶ್ರೀಕಾಂತ ಭಟ್, ಸುರೇಶ್ ಭಟ್ ನಿರೂಪಿಸಿದರು.