ರಾಜ್ಯದಲ್ಲಿ ಕ್ಯಾನ್ಸರ್ ರೋಗದ ಚಿಕಿತ್ಸೆಗೆ ನೀಡುವ ಹೈ ಡೋಸ್ ಕಿಮೋ ಥೆರಪಿಯ ವೆಚ್ಚವನ್ನೂ ಆಯುಷ್ಮಾನ್ ಭಾರತ್ - ಪಿಎಂ ಜನ್ ಆರೋಗ್ಯ ಯೋಜನೆ (ಎಬಿ-ಪಿಎಂಜೆಎವೈ) ಯಡಿ ಭರಿಸಲು ಸಾಧ್ಯವಾಗುವಂತೆ ತಾನು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡುವುದಾಗಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಹೇಳಿದ್ದಾರೆ.
ಉಡುಪಿ : ರಾಜ್ಯದಲ್ಲಿ ಕ್ಯಾನ್ಸರ್ ರೋಗದ ಚಿಕಿತ್ಸೆಗೆ ನೀಡುವ ಹೈ ಡೋಸ್ ಕಿಮೋ ಥೆರಪಿಯ ವೆಚ್ಚವನ್ನೂ ಆಯುಷ್ಮಾನ್ ಭಾರತ್ - ಪಿಎಂ ಜನ್ ಆರೋಗ್ಯ ಯೋಜನೆ (ಎಬಿ-ಪಿಎಂಜೆಎವೈ) ಯಡಿ ಭರಿಸಲು ಸಾಧ್ಯವಾಗುವಂತೆ ತಾನು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡುವುದಾಗಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಹೇಳಿದ್ದಾರೆ.
ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಸ್ತನದ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಹಿಳೆಯೊಬ್ಬರು ಕಣ್ಣೀರು ಸುರಿಸುತ್ತಾ ತಮ್ಮ ಚಿಕಿತ್ಸೆಗೆ ಸಹಾಯ ಮಾಡುವಂತೆ ಸಚಿವರಲ್ಲಿ ಮನವಿ ಮಾಡಿದರು.ಈ ಸಂದರ್ಭದಲ್ಲಿ ಆಯುಷ್ಮಾನ್ ಭಾರತ್ ಪಿಎಂ ಜನಾರೋಗ್ಯ ಯೋಜನೆಯಡಿ ಗುರುತಿಸಲ್ಪಟ್ಟಿರುವ ಉಡುಪಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಕ್ಯಾನ್ಸರ್ ರೋಗಿಗಳಿಗೆ ಈ ಯೋಜನಯಡಿ ಉಚಿತ ಚಿಕಿತ್ಸೆ ನೀಡುತ್ತಿಲ್ಲ ಎಂಬ ವಿಷಯ ಬಹಿರಂಗವಾಯಿತು.ಈ ಯೋಜನೆಯಡಿ ಕ್ಯಾನ್ಸರ್ ರೋಗಿಗಳಿಗೆ ಗರಿಷ್ಟ 5 ಲಕ್ಷ ರು.ಗಳ ಒಳಗೆ ಕಡಿಮೆ ಡೋಸ್‌ನ ಕಿಮೋ ಥೆರಪಿ ನೀಡುವುದಕ್ಕೆ ಮಾತ್ರ ಸಾಧ್ಯವಿದೆ. ಆದರೇ ಕಡಿಮೆ ಡೋಸ್ ನಿಂದ ಕ್ಯಾನ್ಸರ್ ಗುಣಪಡಿಸುವುದು ಸಾಧ್ಯವಾಗುವುದಿಲ್ಲ, ಆದ್ದರಿಂದ ಹೈ ಡೋಸ್ ನೀಡಬೇಕಾಗುತ್ತದೆ, ಆದರೇ ಅದರ ವೆಚ್ಚ 5 ಲಕ್ಷ ರು. ಮೀರುತ್ತದೆ, ಕಡಿಮೆ ಡೋಸ್ ನೀಡಿ, ಚಿಕಿತ್ಸೆ ಫಲಕಾರಿಯಾಗದಿದ್ದರೇ ತಾನು ಜವಾಬ್ದಾರರಲ್ಲ ಎಂದು ಆಸ್ಪತ್ರೆಯವರು ಈ ಯೋಜನೆಯಡಿ ಚಿಕಿತ್ಸೆ ನಿರಾಕರಿಸುತ್ತಿದ್ದಾರೆ ಎಂಬ ದೂರು ಕೂಡ ಕೇಳಿ ಬಂತು.
ಆದ್ದರಿಂದ ಈ ಯೋಜನೆಯ 5 ಲಕ್ಷ ರು. ಪರಿಹಾರದೊಳಗೆ ಹೈ ಡೋಸ್ ಕಿಮೋ ನೀಡಲು ಉಡುಪಿಯ ಆಸ್ಪತ್ರೆಗಳಿಗೆ ಸರ್ಕಾರದಿಂದ ಆದೇಶಿಸಬೇಕು ಎಂದು ಸಭೆಯಲ್ಲಿ ಉಪಸ್ಥಿತರಿದ್ದವರು ಸಚಿವರನ್ನು ಆಗ್ರಹಿಸಿದರು.ಸಚಿವರಲ್ಲಿ ಮಾತನಾಡುತ್ತೇನೆ: ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ವಿಚಾರಿಸಿದ ಸಚಿವರು, ಕ್ಯಾನ್ಸರ್ ರೋಗಿಗಳಿಗೆ ಆಯುಷ್ಮಾನ್ ಭಾರತ್ ಪಿಎಂ ಜನಾರೋಗ್ಯ ಯೋಜನೆಯಡಿ ಉಡುಪಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಬಗ್ಗೆ ವರದಿ ನೀಡುವಂತೆ ಸೂಚಿಸಿದರು, ಈ ಸಮಸ್ಯೆ ಬಗ್ಗೆ ಪ್ರತ್ಯೇಕ ಸಭೆ ನಡೆಸುವ ಬಗ್ಗೆ ಆರೋಗ್ಯ ಸಚಿವರಲ್ಲಿ ಮಾತನಾಡುತ್ತೇನೆ, ಈ ಯೋಜನೆಯಡಿ ಬಡ ಕ್ಯಾನ್ಸರ್ ರೋಗಿಗಳಿಗೆ ಹೈ ಡೋಸ್ ಕಿಮೋ ಚಿಕಿತ್ಸೆ ದೊರೆಯುವಂತೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತೇನೆ, ಈ ಬಗ್ಗೆ ಪ್ರಸ್ತಾಪ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಅಸಹಾಯಕ ಸ್ಥಿತಿಯಲ್ಲಿ ಅಹವಾಲು ನೀಡಿದ ಮಹಿಳಾ ರೋಗಿಗೆ ತಾನು ವೈಯುಕ್ತಿಕ ನೆಲೆಯಲ್ಲಿ ಸಹಾಯ ಮಾಡುವುದಾಗಿಯೂ ಸಚಿವರು ಭರವಸೆ ನೀಡಿದರು.