ವಿವಿ ಸಾಗರ ಜಲಾಶಯದ ಕೋಡಿ ತಗ್ಗಿಸುವ ಹುನ್ನಾರ ಫಲಿಸದು

| Published : Oct 11 2024, 11:50 PM IST

ಸಾರಾಂಶ

ಹಿರಿಯೂರು: ವಿವಿ ಸಾಗರ ಕೋಡಿ ತಗ್ಗಿಸುವ ಹುನ್ನಾರಕ್ಕೆ ಧಿಕ್ಕಾರ ಎಂದು ವಿವಿಸಾಗರ ಹಾಗೂ ಭದ್ರಾ ಮೇಲ್ದಂಡೆ ಅಚ್ಚುಕಟ್ಟುದಾರರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಕಸವನಹಳ್ಳಿ ರಮೇಶ್ ಹೇಳಿದರು.

ಹಿರಿಯೂರು: ವಿವಿ ಸಾಗರ ಕೋಡಿ ತಗ್ಗಿಸುವ ಹುನ್ನಾರಕ್ಕೆ ಧಿಕ್ಕಾರ ಎಂದು ವಿವಿಸಾಗರ ಹಾಗೂ ಭದ್ರಾ ಮೇಲ್ದಂಡೆ ಅಚ್ಚುಕಟ್ಟುದಾರರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಕಸವನಹಳ್ಳಿ ರಮೇಶ್ ಹೇಳಿದರು.

ತಾಲೂಕಿನ ವಿವಿ ಸಾಗರ ಜಲಾಶಯದ ಕೋಡಿ ವೀಕ್ಷಣೆ ಮಾಡಿದ ರೈತ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಮಹಾರಾಜರ ದೂರ ದೃಷ್ಟಿ, ಇಂಗ್ಲೆಂಡಿನ ತಜ್ಞ ಇಂಜಿನಿಯರ್‌ಗಳ ತಂತ್ರಜ್ಞಾನವನ್ನು ಬಳಕೆ ಮಾಡಿ ಅತ್ಯಂತ ಗುಣಮಟ್ಟ ಹಾಗೂ ದೀರ್ಘಾವಧಿ ಬಾಳಿಕೆಯ ವಿವಿಸಾಗರ ಜಲಾಶಯದ ಕೋಡಿಯನ್ನು ನಿರ್ಮಿಸಲಾಗಿದೆ. ಇದೀಗ 130 ಅಡಿಗಳಿಂದ 5-6 ಕೆಳಗೆ ಇಳಿಸುವ 120 ಕೋಟಿ ಯೋಜನೆಯ ಪ್ರಸ್ತಾವನೆಯನ್ನು ವೋಟ್ ಬ್ಯಾಂಕ್ ರಾಜಕಾರಣಿಯ ಷಡ್ಯಂತ್ರದಂತೆ, ತಾಳಕ್ಕೆ ತಕ್ಕ ಹಾಗೆ ಕುಣಿಯುವ ಇಂಜಿನಿಯರ್‌ಗಳು ಸಲ್ಲಿಸಿದ್ದು, ಇದು ಯಾವುದೇ ಕಾರಣಕ್ಕೂ ನಡೆಯಲು ಬಿಡುವುದಿಲ್ಲ ಎಂದರು.

ವಿವಿಸಾಗರ ಜಲಾಶಯವನ್ನು ನಂಬಿಕೊಂಡು ಬಹುಪಯೋಗಿ ನೀರಿನ ಬಳಕೆಯ ಸರ್ಕಾರಿ ಯೋಜನೆಗಳು ಜಾರಿಯಲ್ಲಿವೆ. 120 ವರ್ಷಗಳಿಗೂ ಹೆಚ್ಚು ಕಾಲ ಯಾವುದೇ ತೊಂದರೆ ಇಲ್ಲದೆ ನಿರಾತಂಕವಾಗಿ, ಶಾಂತಿಯುತವಾಗಿ ಜನತೆಗೆ ನೀರುಣಿಸಿದ ಜಲಾಶಯಕ್ಕೆ ಕಂಟಕವಾಗುವ ಇಂತಹ ಯೋಜನೆಗಳನ್ನು ಪ್ರಾರಂಭದಲ್ಲಿಯೇ ಚಿವುಟಿ ಹಾಕಬೇಕು. ನಿರ್ಮಾಣವಾದ ಕಾಲದಿಂದಲೂ ಇಲ್ಲಿಯವರೆಗೆ ಒಂದು ರೂಪಾಯಿ ನಿರ್ವಹಣಾ ವೆಚ್ಚವನ್ನು ಖರ್ಚು ಮಾಡದೆ, ಸುರಕ್ಷತೆಯಿಂದ ಗಟ್ಟಿ ಮುಟ್ಟಾಗಿರುವ ಕೋಡಿಯನ್ನು ತಗ್ಗಿಸುವ ಹುನ್ನಾರ ಸಲ್ಲದು ಎಂದರು.

ಒಂದು ವೇಳೆ ಕೋಡಿ ಇಳಿಸುವ ಅವೈಜ್ಞಾನಿಕ ಹಾಗೂ ಜನವಿರೋಧಿ ಕಾಮಗಾರಿಯನ್ನು ಕೈಗೊಂಡರೆ ಜನಾಂದೋಲನದ ಮೂಲಕ ಆ ಕಾರ್ಯವನ್ನು ನಿಲ್ಲಿಸಲಾಗುವುದು. ಅಲ್ಲದೆ ನ್ಯಾಯಾಲಯದಲ್ಲಿ ಈ ಬಗ್ಗೆ ದಾವೆ ಹೂಡಿ ಕಾನೂನಾತ್ಮಕ ಹೋರಾಟ ನಡೆಸಿ ರಕ್ಷಣೆ ಪಡೆಯಲಾಗುವುದು ಎಂದು ತಿಳಿಸಿದರು. ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ಜಲಾಶಯದ ಕೋಡಿ ತಗ್ಗಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ರಕ್ತ ಕೊಟ್ಟಾದರೂ ಸರಿ ಕೋಡಿ ರಕ್ಷಿಸಿಕೊಳ್ಳುತ್ತೇವೆ ಎಂದರು.

ಈ ಸಂದರ್ಭದಲ್ಲಿ ರೈತ ಸಂಘದ ಕಾರ್ಯದರ್ಶಿ ಸಿದ್ದರಾಮಣ್ಣ, ಆರ್.ಕೆ.ಗೌಡ್ರು, ಮೈಸೂರು ಶಿವಣ್ಣ, ಕುರುಬರಹಳ್ಳಿ ಮಂಜುನಾಥ್, ಭಾರತೀಯ ಕಿಸಾನ್ ಸಂಘದ ಮಹೇಶ್, ವಿವಿಪುರ ಮಂಜನಾಯ್ಕ್ ಮುಂತಾದವರು ಹಾಜರಿದ್ದರು.