ಜಿಲ್ಲೆಯ ಕೃಷಿ ಭೂಮಿಯ ಸಮಸ್ಯೆಯ ಬಗ್ಗೆ ಅಧ್ಯಯನ ಮಾಡಿರುವ ರೈತರು ಮತ್ತು ಜನಪ್ರತಿನಿಧಿಗಳ ನಿಯೋಗ ಲೋಕಾಸಭಾ ಅಧಿವೇಶನದ ಸಂದರ್ಭದಲ್ಲಿ ದೆಹಲಿಗೆ ಬಂದರೆ, ಕೇಂದ್ರ ಅರಣ್ಯ ಸಚಿವರು ಮತ್ತು ಇಲಾಖೆಯ ಮೇಲಾಧಿಕಾರಿಗಳೊಂದಿಗೆ ಸಭೆ ನಡೆಸಿ, ಸಮಸ್ಯೆ ಪರಿಹಾರಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬಹುದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ಸೋಮವಾರಪೇಟೆ : ಜಿಲ್ಲೆಯ ಕೃಷಿ ಭೂಮಿಯ ಸಮಸ್ಯೆಯ ಬಗ್ಗೆ ಅಧ್ಯಯನ ಮಾಡಿರುವ ರೈತರು ಮತ್ತು ಜನಪ್ರತಿನಿಧಿಗಳ ನಿಯೋಗ ಲೋಕಾಸಭಾ ಅಧಿವೇಶನದ ಸಂದರ್ಭದಲ್ಲಿ ದೆಹಲಿಗೆ ಬಂದರೆ, ಕೇಂದ್ರ ಅರಣ್ಯ ಸಚಿವರು ಮತ್ತು ಇಲಾಖೆಯ ಮೇಲಾಧಿಕಾರಿಗಳೊಂದಿಗೆ ಸಭೆ ನಡೆಸಿ, ಸಮಸ್ಯೆ ಪರಿಹಾರಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬಹುದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ಹರಪಳ್ಳಿ ರವೀಂದ್ರ ಅಭಿಮಾನಿಗಳ ಬಳಗ ಹಾಗು ರೈತಹೋರಾಟ ಸಮಿತಿ ವತಿಯಿಂದ ಪಿಎಂಶ್ರೀ ಶಾಲಾ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ರವೀಂದ್ರ ಅವರ ಜೀವನಚರಿತ್ರೆ ಕೃತಿ ಲೋಕಾರ್ಪಣೆ ಹಾಗು ರೈತ ಸಮಾವೇಶವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.ಈ ದೇಶ ರೈತರಿಂದಲೇ ಉಳಿದಿರುವುದು. ಮುಂದೆಯೂ ಈ ದೇಶವನ್ನು ರೈತರೆ ಕಾಪಾಡಬೇಕು. ಹವಾಮಾನ ವೈಪ್ಯರಿತ್ಯದಿಂದ ದೇಶದ ರೈತರು ಸಂಕಷ್ಟದಲ್ಲಿದ್ದಾರೆ. ಮುಂದೊಂದು ದಿನ ರೈತರಿಗೂ ಒಳ್ಳೆಯ ದಿನಗಳು ಬರಲಿವೆ. ಅದಕ್ಕಾಗಿ ನಾವೆಲ್ಲಾ ಕಾಯಲೇಬೇಕು. ಕೃಷಿ ಭೂಮಿಯನ್ನು ಪ್ರತಿಯೊಬ್ಬರು ರಕ್ಷಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. ಕೆಲ ದಶಕಗಳ ಹಿಂದೆ ಕೃಷಿ ಭೂಮಿಯನ್ನು, ಬರಡು ಭೂಮಿ ಎಂದು ದಾಖಲೆ ಸೃಷ್ಟಿ ಮಾಡಿದ ಅಧಿಕಾರಿಗಳಿಂದ ಇವತ್ತು ರೈತರು ಕೃಷಿ ಭೂಮಿಯನ್ನು ಕಳೆದುಕೊಳ್ಳುವಂತೆ ಸ್ಥಿತಿಗೆ ತಲುಪಿದ್ದಾರೆ. ಇವತ್ತು ಕೆಲ ಅಧಿಕಾರಿಗಳ ವರದಿಯಿಂದ ನ್ಯಾಯಾಲಯಗಳಲ್ಲೂ ರೈತರಿಗೆ ಹಿನ್ನೆಡೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಹಳ್ಳಿಯಿಂದ ನಗರ ಪ್ರದೇಶಕ್ಕೆ ಹೋಗಿ ತಿಂಗಳಿಗೆ ೩೦೦ ರೂ.ಸಂಬಳಕ್ಕೆ ಕೆಲಸಕ್ಕೆ ಸೇರಿದ ಉದ್ಯಮಿ ಹರಪಳ್ಳಿ ರವೀಂದ್ರ ಇವತ್ತು ದೊಡ್ಡ ಉದ್ಯಮಿಯಾಗಿ ಬೆಳೆದು, ಸಂಪಾದಿಸಿ ಹಣದಲ್ಲಿ ಒಂದಷ್ಟು ಭಾಗವನ್ನು ಸಮಾಜಸೇವೆ, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ವ್ಯಯ ಮಾಡುತ್ತಿರುವುದು ಶ್ಲಾಘನೀಯ ಅವರ ಜೀವನ ಚರಿತ್ರೆ ಪುಸ್ತಕವನ್ನು ಲೋಕಾರ್ಪಣೆ ಮಾಡಿರುವುದು ನನಗೂ ಹೆಮ್ಮೆಯ ವಿಷಯ ಎಂದು ಹೇಳಿದರು.
ಶಾಸಕ ಡಾ.ಮಂತರ್ಗೌಡ ಮಾತನಾಡಿ, ಜಿಲ್ಲೆಯ ರೈತರ ಭೂಮಿ ಸಮಸ್ಯೆಯನ್ನು ಬಗೆಹರಿಸುವ ಕೆಲಸವನ್ನು ರಾಜಕೀಯ ರಹಿತವಾಗಿ ಮಾಡಬೇಕು. ಕೆಲ ಸೂಕ್ಷ್ಮ ವಿಷಯಗಳನ್ನು ಸ್ವಾರ್ಥದಿಂದ ರಾಜಕೀಯಕ್ಕೆ ಉಪಯೋಗಿಸಿಕೊಳ್ಳುವ ಪ್ರಯತ್ನ ಮಾಡಿದರೆ, ರೈತರಿಗೆ ಸಮಸ್ಯೆಯಾಗಬಹುದು. ಈ ಕಾರಣದಿಂದ ಸಿ ಆ್ಯಂಡ್ ಡಿ ಜಾಗದ ಹೋರಾಟ ರಾಜಕೀಯರಹಿತವಾಗಿರಬೇಕು ಎಂದು ಕಿವಿಮಾತು ಹೇಳಿದರು.ರಾಜ್ಯ ಸರ್ಕಾರ ರೈತರ ಸಂಕಷ್ಟ ಪರಿಹರಿಸಲು ಸರ್ವ ರೀತಿಯಲ್ಲೂ ಪ್ರಯತ್ನ ಮುಂದುವರಿಸಿದೆ. ರೈತರು ಕೃಷಿ ಭೂಮಿ ಉಳಿಸಿಕೊಳ್ಳಲು ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡೋಣ ಎಂದು ಹೇಳಿದರು. ಸಮಾಜಸೇವಕ ಹರಪಳ್ಳಿ ರವೀಂದ್ರ ಮಾತನಾಡಿ, ಬಡವರಾಗಿ ಹುಟ್ಟುವುದು ತಪ್ಪಲ್ಲ ಆದರೆ ಬಡವರಾಗಿಯೇ ಸಾಯುವುದು ತಪ್ಪು. ವಿದ್ಯೆ, ಶಿಸ್ತು, ಸತತ ಪ್ರಯತ್ನ, ಗುರಿ ಇದ್ದರೆ ಸಾಧನೆ ಮಾಡಬಹುದು ಎಂದರು.ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್, ಮಾಜಿ ಸಚಿವ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ಸಿ ಆ್ಯಂಡ್ ಡಿ ಸಮಸ್ಯೆ, ಕಸ್ತೂರಿ ರಂಗನ್ ವರದಿ ಅನುಷ್ಠಾನದ ಬಾಧಕಗಳ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.ಮಾಜಿ ಸಚಿವ ಸಾ.ರಾ.ಮಹೇಶ್, ಮಾಜಿ ಶಾಸಕ ಮಹಾದೇವ್, ಮಾಜಿ ಎಂಎಲ್ಸಿ ಎಸ್.ಜಿ.ಮೇದಪ್ಪ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಘುಗೌಡ, ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಎಚ್.ಎ.ನಾಗರಾಜ್, ರೈತಸಂಘದ ಜಿಲ್ಲಾ ಉಪಾಧ್ಯಕ್ಷ ಜಿ.ಎಂ.ಹೂವಯ್ಯ, ತಾಲೂಕು ಅಧ್ಯಕ್ಷ ಕೆ.ಎಂ.ದಿನೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಸಿ.ಎಸ್.ನಾಗರಾಜ್, ಪ್ರಮುಖರಾದ ಸಂಕೇತ್ ಪೂವಯ್ಯ, ಕೆ.ಎಂ.ಲೋಕೇಶ್, ಎಸ್.ಎಂ.ಚಂಗಪ್ಪ, ಜಿ.ವಿ.ರವಿಕುಮಾರ್ ಮತ್ತಿತರರು ಇದ್ದರು.