ಸಾರಾಂಶ
ಜಿಲ್ಲೆಯ ಪಿಡಿಒಗಳು ಬಿ-ಗ್ರೇಡ್ ಉನ್ನತೀಕರಣಕ್ಕಾಗಿ ಸಂಘಟಿತರಾಗುವುದು ಇಂದಿನ ಅಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಬಿ-ಗ್ರೇಡ್) ಹುದ್ದೆ ಉನ್ನತೀಕರಣ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲೆಯ ಪಿಡಿಒಗಳು ಬಿ-ಗ್ರೇಡ್ ಉನ್ನತೀಕರಣಕ್ಕಾಗಿ ಸಂಘಟಿತರಾಗುವುದು ಇಂದಿನ ಅಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಬಿ-ಗ್ರೇಡ್) ಹುದ್ದೆ ಉನ್ನತೀಕರಣ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಸಲಹೆ ನೀಡಿದರು.ನಗರದ ನ್ಯಾಯಾಲಯ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಜಿಲ್ಲಾಘಟಕದ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಬಿ ಗ್ರೇಡ್) ಹುದ್ದೆ ಉನ್ನತೀಕರಣ ಸಂಘದಿಂದ ಶನಿವಾರ ಆಯೋಜಿಸಿದ್ದ ೨೦೨೫-೨೬ನೇ ಸಾಲಿನ ಜಿಲ್ಲಾ ಮಟ್ಟದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಪಿಡಿಒಗಳು ಸಂಘಟನೆ ದೃಷ್ಟಿಯಲ್ಲಿ ಹಿಂದುಳಿದಿರುವ ಕಾರಣ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈವರೆಗೂ ೧೬೦ ಪಿಡಿಒಗಳು ಮೃತಪಟ್ಟಿದ್ದು, ಕಳೆದ ವರ್ಷದಲ್ಲಿ ೨೨ ಪಿಡಿಒಗಳು ಸಾವಿಗೀಡಾಗಿದ್ದಾರೆ.ಇದರಲ್ಲಿ ೯ ಜನರು ಹೃದಯಾಘಾತದಿಂದಲೇ ಮೃತಪಟ್ಟಿದ್ದಾರೆ. ಪಿಡಿಒಗಳ ಮೇಲೆ ಇರುವ ಒತ್ತಡದ ಕೆಲಸ ಹಾಗೂ ವಿವಿಧ ಜವಾಬ್ದಾರಿಗಳಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿವರ್ಷ ೧೨ ಜನ ಪಿಡಿಒ ಅನಾರೋಗ್ಯದಿಂದ ಸಾಯುತ್ತಿದ್ದು, ೧೦ ಜನರ ಮೇಲೆ ಹಲ್ಲೆಯಾಗುತ್ತಿದೆ. ಪಿಡಿಒಗಳಿಗೆ ಬಡ್ತಿ ನೀಡದ ಹಿನ್ನೆಲೆಯಲ್ಲಿ ಪಿಡಿಒ ಹುದ್ದೆಯನ್ನು ಬಿ-ಗ್ರೇಡ್ ಗೆ ಉನ್ನತೀಕರಣ ಮಾಡುವ ಹೋರಾಟ ಶುರು ಮಾಡಲಾಯಿತು. ಪಿಡಿಒ ಹುದ್ದೆಗಳನ್ನು ಬಿ-ಗ್ರೇಡ್ ಗೆ ಉನ್ನತೀಕರಣ ಮಾಡುವುದು ನಮ್ಮ ಹಕ್ಕಾಗಿದೆ ಎಂಬುದನ್ನು ಪ್ರತಿಯೊಬ್ಬರು ಅರ್ಥಮಾಡಿಕೊಂಡು ಮತ್ತಷ್ಟು ಸಂಘಟಿತರಾಗಬೇಕಿದೆ ಎಂದರು.ರಾಜ್ಯದಲ್ಲಿ ಪಿಡಿಒಗಳ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸಲು ಸಂಘ ನಿರಂತರವಾಗಿ ಪ್ರಯತ್ನ ಮಾಡುತ್ತಿದೆ. ಈ ನಿಟ್ಟಿನಲ್ಲಿ ತಾಲೂಕು ಸಂಘಗಳು ರಚನೆಯಾಗಬೇಕು. ನಮ್ಮ ವೃತ್ತಿ ಹಾಗೂ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಎಲ್ಲರೂ ಒಗ್ಗೂಡಬೇಕಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ರಮೇಶ್, ಜಿಲ್ಲಾಧ್ಯಕ್ಷ ವಿ.ಸಿದ್ದರಾಜು, ರಾಜ್ಯ ನಿರ್ದೇಶಕ ರವಿ, ಗಿರೀಶ್, ಮಹಿಳಾ ಪದಾಧಿಕಾರಿ ಜ್ಯೋತಿ, ಶೋಭಾ, ಮಾದಪ್ಪ, ಮಹದೇವಸ್ವಾಮಿ, ಸಿದ್ದರಾಜು, ಶಾಂತಿ ಮಲ್ಲಪ್ಪ, ಮಮತಾ, ಶೃತಿ, ಶ್ವೇತಾ ಹಾಗೂ ಇತರರು ಹಾಜರಿದ್ದರು.