ನೇಕಾರ ಅಭಿವೃದ್ಧಿ ನಿಗಮ ಸ್ಥಾಪನೆ, ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ನೇಕಾರ ಸಮಾಜದವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಬೇಡಿಕೆಯನ್ನು ನೇಕಾರ ಸಮಾಜದವರ ಪರವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಇದುವರೆಗೆ ನೇಕಾರ ಸಮಾಜಕ್ಕೆ ₹95 ಲಕ್ಷ ಅನುದಾನ ನೀಡಲಾಗಿದೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾದಾಮಿ

ನೇಕಾರ ಅಭಿವೃದ್ಧಿ ನಿಗಮ ಸ್ಥಾಪನೆ, ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ನೇಕಾರ ಸಮಾಜದವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಬೇಡಿಕೆಯನ್ನು ನೇಕಾರ ಸಮಾಜದವರ ಪರವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಇದುವರೆಗೆ ನೇಕಾರ ಸಮಾಜಕ್ಕೆ ₹95 ಲಕ್ಷ ಅನುದಾನ ನೀಡಲಾಗಿದೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಸಮೀಪದ ಬನಶಂಕರಿಯಲ್ಲಿ ಶುಕ್ರವಾರ ಅಖಿಲ ಭಾರತ ದೇವಾಂಗ (ನೇಕಾರ) ಜಾಗೃತಿ ಸಮಾವೇಶ-2026, ದಯಾನಂದ ಪುರಿ ಸ್ವಾಮೀಜಿಗಳ 36ನೇ ವರ್ಷದ ಪಟ್ಟಾಭಿಷೇಕ ಹಾಗೂ ತುಲಾಭಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ನೇಕಾರ ಸಮಾಜದ ವಿವಿದ ಯೋಜನೆಗಳಿಗೆ ₹95 ಲಕ್ಷ ಅನುದಾನ ನೀಡಲಾಗಿದೆ. ಇನ್ನೂ ₹10 ಲಕ್ಷ ಅನುದಾನ ನೀಡಲಾಗುವುದು. ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸತ್ಪ್ರಜೆಗಳಾಗಿ ರೂಪಿಸಬೇಕು. ನೇಕಾರ ಸಮಾಜಕ್ಕೆ ನನ್ನ ಕೈಲಾದಷ್ಟು ಕೆಲಸ ಮಾಡುತ್ತೇನೆ. ನಿಮ್ಮ ಸಮಾಜದ ಯಾವುದೇ ಕೆಲಸಗಳಿದ್ದರೆ ತಿಳಿಸಿ, ನಾನು ಪ್ರಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಅಖಿಲ ಭಾರತ ದೇವಾಂಗ (ನೇಕಾರ) ಜಾಗೃತಿ ಸಮಾವೇಶ ಸಮಿತಿಯ ಅಧ್ಯಕ್ಷ ರವೀಂದ್ರ ಕಲಬುರ್ಗಿ ಮಾತನಾಡಿ, ರಾಜ್ಯಸಭಾ ಸದಸ್ಯ ಕೆ.ನಾರಾಯಣ ಅವರು ನೇಕಾರ ಸಮಾಜದ ಯಾವುದೇ ಪಂಗಡಗಳಿದ್ದರೂ ಕನಿಷ್ಟ ₹20 ಲಕ್ಷ ಅನುದಾನ ನೀಡಿದ್ದಾರೆ. ಕೆ.ನಾರಾಯಣ, ಪ್ರೀತಿ ಕಾಮಕರ, ಉಮಾಶ್ರೀ ಹೊರತುಪಡಿಸಿದರೆ ನೇಕಾರ ಸಮಾಜ ರಾಜಕೀಯವಾಗಿ ಹಿಂದುಳಿದಿದೆ. ಸಮಾಜ ಜಾಗೃತರಾಗಬೇಕಿದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಮುಂದುವರೆಯಬೇಕಾಗಿದೆ. ಇದಕ್ಕಾಗಿ ಸಮಾಜ ಸಂಘಟಿತರಾಗಬೇಕಿದೆ. ಕೈಮಗ್ಗ ನಿಗಮ, ಪವರಲೂಮ್ ನಿಗಮಕ್ಕೆ ನೇಕಾರರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.

ವಚನಕಾರ ದೇವರದಾಸಿಮಯ್ಯನವರ ಇಂಗ್ಲಿಷ್ ವಚನಗಳ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಮಾತನಾಡಿ, ನೇಕಾರ ಸಮಾಜದ ಯಾವುದೇ ಕೆಲಸಗಳಿದ್ದರೆ ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಮಾಡಿಕೊಡಲಾಗುವುದು. ಸಮಾಜದವರು ಸಂಘಟಿತರಾಗಿ, ಜಾಗೃತರಾಗಬೇಕು. ನಾವು ಪಕ್ಷಾತೀತವಾಗಿ ಕೆಲಸ ಮಾಡುತ್ತೇವೆ. ನೇಕಾರ ಸಮಾಜದವರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಿ. ನಾನು ಆರ್ಥಿಕ ಸಹಕಾರ ನೀಡುತ್ತೇನೆ ಎಂದು ಹೇಳಿದರು.

ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ನೇಕಾರ ಸಮಾಜದವರು ಇಂದು ಬಹಳ ಸಂಕಷ್ಟದಲ್ಲಿದ್ದಾರೆ. ಬಟ್ಟೆ ನೇಯ್ಗೆಯಿಂದ ಜೀವನ ನಡೆಸದೇ ಬೇರೆ ಉದ್ಯೋಗ ಮಾಡುತ್ತಿದ್ದಾರೆ. ನಾನು ಸಹ ಸಮಾಜದ ಕಷ್ಟಗಳನ್ನು ಅರಿತಿದ್ದೇನೆ. ನಾನು ನಿಮ್ಮ ಸಮಾಜದ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.ಹಂಪಿ ಹೇಮಕೂಟದ ದಯಾನಂದ ಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಅಶೀರ್ವಚನ ನೀಡಿದರು.

ವೇದಿಕೆಯ ಮೇಲೆ ನೇಕಾರ ಸಮಾಜದ ಹಿರಿಯರಾದ ಬಿ.ಆರ್.ಗಿರಿಯಪ್ಪ, ಎಸ್.ಆರ್.ಸಿದ್ದಲಿಂಗನ್ನವರ, ಗೋವಿಂದಪ್ಪ, ಗಣೇಶ, ಎಂ.ಪಿ.ಉಮಾಶಂಕರ, ಬಿ.ಪಿ.ವಿನಾಯಕ ಕಾಮಕರ, ಬಿ.ಎಸ್.ಸೋಮಶೇಖರ, ಎಲ್ಲ ಜಿಲ್ಲೆಯ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಹಾಜರಿದ್ದರು. ಸಂಕಣ್ಣ ಕರಡಿಗುಡ್ಡ ಸ್ವಾಗತಿಸಿದರು. ಟಿ.ರಾಜೇಶ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಮ್ಮ ಸಮಾಜದವರು ಒಬ್ಬನೇ ಒಬ್ಬ ಐಎಎಸ್, ಕೆಎಎಸ್ ಅಧಿಕಾರಿಗಳು ಇಲ್ಲ. ರಾಜಕೀಯ ಪ್ರಾತಿನಿಧ್ಯ ಇಲ್ಲ. ಹೀಗಾದರೆ ಸಮ್ಮ ಸಮಾಜದ ಗತಿ ಏನು?. ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉತ್ತಮ ಅಧಿಕಾರಿಗಳನ್ನಾಗಿ ಮಾಡಲು ಪಣ ತೊಡಬೇಕು.

- ಕೆ.ನಾರಾಯಣ್ ರಾಜ್ಯಸಭಾ ಸದಸ್ಯ

ಇಂದು ಸಿಎಂ, ಡಿಸಿಎಂ ಭಾಗಿ

ಶನಿವಾರ ಬೆಳಗ್ಗೆ 10.30 ಗಂಟೆಗೆ ದಯಾನಂದ ಪುರಿ ಶ್ರೀಗಳು ತುಲಾಭಾರ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಆದಿಚಿಂಚನಗಿರಿಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಇತರೆ ಶ್ರೀಗಳು ಸಾನ್ನಿಧ್ಯ ವಹಿಸುವರು. ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಬನಶಂಕರಿ ಐಟಿಐ ಕಾಲೇಜು ಆವರಣದಲ್ಲಿ ಮತ್ತು ಬನಶಂಕರಿ ಶಾಖಾಮಠದ ಆವರಣದಲ್ಲಿ ಕಾನೂನು ಸಚಿವ ಎಚ್.ಕೆ.ಪಾಟೀಲ ಅತಿಥಿ ಗೃಹಗಳ ಶಂಕುಸ್ಥಾಪನೆ ನೆರವೇರಿಸುವರು. ಸಚಿವರಾದ ಸತೀಶ ಜಾರಕಿಹೊಳಿ ಮತ್ತು ಮಧು ಬಂಗಾರಪ್ಪ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಸಕ್ಕರೆ ಸಚಿವ ಶಿವಾನಂದ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ವಸ್ತುಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ದಾನಿಗಳಿಗೆ ಸನ್ಮಾನಿಸುವರು.