ರಾಮಮಂದಿರ ತಡೆಯಲು ಕೊನೇ ಕ್ಷಣದವರೆಗೂ ಕೈ ಪ್ರಯತ್ನ: ಮೋದಿ

| Published : Apr 29 2024, 01:37 AM IST

ಸಾರಾಂಶ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನಿರ್ಧಾರವನ್ನು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಮರುದಿನವೇ ತೆಗೆದುಕೊಳ್ಳಬೇಕಿತ್ತು. ಆದರೆ ಕಾಂಗ್ರೆಸ್‌ ರಾಮಮಂದಿರ ನಿರ್ಮಾಣವಾಗದಂತೆ ತಡೆಯಲು ಕೊನೇ ಕ್ಷಣದವರೆಗೂ ಪ್ರಯತ್ನಿಸಿತು. ರಾಮಲಲ್ಲಾನ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ಆಹ್ವಾನವನ್ನೂ ತಿರಸ್ಕರಿಸಿತು ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನಿರ್ಧಾರವನ್ನು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಮರುದಿನವೇ ತೆಗೆದುಕೊಳ್ಳಬೇಕಿತ್ತು. ಆದರೆ ಕಾಂಗ್ರೆಸ್‌ ರಾಮಮಂದಿರ ನಿರ್ಮಾಣವಾಗದಂತೆ ತಡೆಯಲು ಕೊನೇ ಕ್ಷಣದವರೆಗೂ ಪ್ರಯತ್ನಿಸಿತು. ರಾಮಲಲ್ಲಾನ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ಆಹ್ವಾನವನ್ನೂ ತಿರಸ್ಕರಿಸಿತು ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದರು.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹಾಗೂ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಬೃಹತ್‌ ಸಮಾವೇಶದಲ್ಲಿ ಅಯೋಧ್ಯೆ ರಾಮ ಮಂದಿರದ ವಿಚಾರ ಪ್ರಸ್ತಾಪಿಸಿದ ಅವರು ಅಯೋಧ್ಯೆಯಲ್ಲಿನ ಬಾಲರಾಮನನ್ನು ತಿರಸ್ಕರಿಸಿದವರನ್ನು ಕರ್ನಾಟಕದ ಜನತೆ ಯಾವತ್ತಿಗೂ ಒಪ್ಪಿಕೊಳ್ಳಲಾರರು ಎಂದರು.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನಮ್ಮ ಪೂರ್ವಜರು ಐನೂರು ವರ್ಷಗಳ ಕಾಲ ಹೋರಾಟ ಮಾಡಿದರು. 500 ವರ್ಷ ಎಂಬುದೇನು ಕಡಿಮೆ ಸಮಯ ಅಲ್ಲ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಮರುದಿನವೇ ರಾಮಮಂದಿರ ನಿರ್ಮಾಣ ಮಾಡುವ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಆದರೆ ಕಾಂಗ್ರೆಸ್‌ ಆ ಕೆಲಸ ಮಾಡಲಿಲ್ಲ. ಈ ಕೆಲಸ ಐವತ್ತನಾಲ್ಕು ಇಂಚಿನ ಎದೆಯಿಂದ ಸಾಕಾರವಾಯಿತು ಎಂದರು. ಹೇಳಿದರು.

ಈಗ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿದೆ. ಆದರೂ ಕಾಂಗ್ರೆಸ್‌ನ ತುಷ್ಟೀಕರಣದ ರಾಜಕೀಯ ಮಾತ್ರ ಮುಗಿಲು ಮುಟ್ಟಿದೆ. ಅವರಿಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸಹಿಸಲು ಸಾಧ್ಯವಾಗುತ್ತಿಲ್ಲ. ರಾಮ ಮಂದಿರ ನಿರ್ಮಾಣವಾದರೆ ದೇಶದಲ್ಲಿ ಬೆಂಕಿ ಬೀಳುತ್ತದೆ ಎಂದು ಗುಲ್ಲೆಬ್ಬಿಸಿದರು. ಆದರೆ, ಭವ್ಯ ದಿವ್ಯ ರಾಮಮಂದಿರ ಅಯೋಧ್ಯೆಯಲ್ಲಿ ನಿರ್ಮಾಣವಾಗಿ ಪ್ರಾಣ ಪ್ರತಿಷ್ಠೆಯೂ ನಡೆಯಿತು. ಎಲ್ಲೂ ಬೆಂಕಿ ಬೀಳಲಿಲ್ಲ. ರಾಮಮಂದಿರ ನಿರ್ಮಾಣದಿಂದ ಅವರಿಗೆ ಮಿರ್ಚಿ (ಖಾರ) ಹತ್ತಿತ್ತು ಎಂದು ಮೋದಿ ವ್ಯಂಗ್ಯವಾಡಿದರು.

ರಾಮಮಂದಿರದ ಟ್ರಸ್ಟಿಗಳು ಕಾಂಗ್ರೆಸ್ಸಿಗರ ಮನೆಗೆ ಹೋಗಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದರು. ಆದರೆ ಕಾಂಗ್ರೆಸ್ಸಿಗರು ವೋಟ್‌ ಬ್ಯಾಂಕ್‌ ರಾಜಕೀಯಕ್ಕಾಗಿ ಅದನ್ನು ತಿರಸ್ಕರಿಸಿದರು.

ಒಂದು ಕಡೆ ಇಕ್ಬಾಲ್‌ ಅನ್ಸಾರಿ ಮತ್ತು ಅವರ ಇಡೀ ಕುಟುಂಬದ ಮೂರು ತಲೆಮಾರು ರಾಮಮಂದಿರ ನಿರ್ಮಾಣದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡಿತು. ಆದರೆ ಸುಪ್ರೀಂ ಕೋರ್ಟ್‌ ತೀರ್ಪು ಬಂದ ಬಳಿಕ ಅವರು ಅದನ್ನು ಒಪ್ಪಿಕೊಂಡರು. ಟ್ರಸ್ಟಿಗಳು ಅನ್ಸಾರಿ ಅವರಿಗೂ ರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರು. ಅದರಂತೆ ಅವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು ಎಂದರು.

ರಾಮನ ಪ್ರಾಣಪ್ರತಿಷ್ಠೆಯ ಆಹ್ವಾನವನ್ನು ತಿರಸ್ಕರಿಸಿದ ಪಕ್ಷವನ್ನು ಕರ್ನಾಟಕದ ಜನ ಮತ್ತು ದೇಶದ ಜನ ತಿರಸ್ಕರಿಸಬೇಕು ಎಂದು ಇದೇ ವೇಳೆ ಮೋದಿ ಆಗ್ರಹಿಸಿದರು.

ಬಳ್ಳಾರಿ ಜೀನ್ಸ್‌ಗೆ ಜಾಗತಿಕ ಮಟ್ಟದಲ್ಲಿ ಸ್ಥಾನ: ಮೋದಿ

ಬಳ್ಳಾರಿ ಜೀನ್ಸ್‌ ಜಾಗತಿಕ ಮಟ್ಟದಲ್ಲಿ "ಮೇಡ್‌ ಇನ್‌ ಇಂಡಿಯಾ " ಸ್ಥಾನಮಾನ ಲಭಿಸುವಂತೆ ಮಾಡಲಾಗುವುದು. ಈ ಭಾಗದಲ್ಲಿ ಉದ್ಯೋಗ ಸೃಷ್ಟಿಗಾಗಿ ಜೀನ್ಸ್‌ ಉದ್ಯಮಕ್ಕೆ ಉತ್ತೇಜನ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಭಾನುವಾರ ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶವನ್ನುದ್ದೇಶಿಸಿ ಬಳ್ಳಾರಿ, ರಾಯಚೂರು, ಕೊಪ್ಪಳ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರ ಪ್ರಚಾರ ಭಾಷಣ ಮಾಡಿದ ಅವರು ಈ ಘೋಷಣೆ ಮಾಡಿದರು.ಈ ಭಾಗದಲ್ಲಿ ಜೀನ್ಸ್‌, ಮತ್ತು ಉಕ್ಕು ಉದ್ಯಮ, ಕೃಷಿ ವಲಯದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡಬೇಕಿದೆ. ಇದರಿಂದ ಈ ಭಾಗದಲ್ಲಿ ಯುವಕರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಇದಕ್ಕಾಗಿ ಕ್ರಮ ವಹಿಸಲಾಗುವುದು ಎಂದರು.

ಕೊಪ್ಪಳದ ಆಟಿಕೆ ಜಾಗತಿಕ ಮಟ್ಟಕ್ಕೆ: ಈ ಹಿಂದೆ ಆಟಿಕೆಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಮೋದಿ ಸರ್ಕಾರ ಬಂದ ಬಳಿಕ ಆಟಿಕೆಗಳ ಉದ್ಯಮಕ್ಕೆ ಉತ್ತೇಜನ ನೀಡಲಾಯಿತು. ಕೊಪ್ಪಳದ ಆಟಿಕೆಗಳಿಗೆ ಈಗ ಹೊರ ದೇಶಗಳಲ್ಲೂ ಭಾರೀ ಬೇಡಿಕೆ ಇದೆ. ಇದರಿಂದ ನಮ್ಮ ದೇಶದಲ್ಲಿ ಉತ್ಪಾದನೆ ಆಗುವ ಆಟಿಕೆಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಆಮದು ಮಾಡಿಕೊಳ್ಳುವ ಪ್ರಕ್ರಿಯೆ ತಗ್ಗಿದೆ ಎಂದರು.

ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಳು: ಮೋದಿ

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಗಂಭೀರ ಪರಿಸ್ಥಿತಿ ತಲುಪಿದೆ. ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಮತ್ತು ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹತ್ಯೆ ವಿಚಾರದಲ್ಲೂ ಕಾಂಗ್ರೆಸ್‌ನವರು ತುಷ್ಟೀಕರಣದ, ವೋಟ್‌ ಬ್ಯಾಂಕ್‌ ರಾಜಕೀಯ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಗಂಭೀರ ಆರೋಪ ಮಾಡಿದರು.

ಬೆಳಗಾವಿ, ದಾವಣಗೆರೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಭಾನುವಾರ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಅವರು ಕಾಂಗ್ರೆಸ್‌ ವಿರುದ್ಧ ತೀವ್ರ ಹರಿಹಾಯ್ದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ತುಷ್ಟೀಕರಣದ ರಾಜಕಾರಣ ನಡೆಯುತ್ತಿದೆ. ಕೋಮುಗಲಭೆ, ಬಾಂಬ್ ಸ್ಫೋಟದಂತಹ ಪ್ರಕರಣಗಳು ಹೆಚ್ಚುತ್ತಿವೆ. ಬೆಳಗಾವಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ನಡೆಸಲಾಯಿತು. ಚಿಕ್ಕೋಡಿಯಲ್ಲಿ ಜೈನಮುನಿ ಹತ್ಯೆಯಾಗಿದೆ. ಹುಬ್ಬಳ್ಳಿಯಲ್ಲಿ ಹಾಡಹಗಲೇ ನಡೆದ ವಿದ್ಯಾರ್ಥಿನಿಯೊಬ್ಬಳ ಹತ್ಯೆ ನಡೆಯಿತು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಹೇಳಿದರು.ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಸಂಭಿಸಿತು. ಆದರೆ ಕಾಂಗ್ರೆಸ್ಸಿಗರು ಅಲ್ಲಿ ಸಿಲಿಂಡರ್‌ ಸ್ಫೋಟ ಆಗಿದೆ ಎಂದಿದ್ದರು. ಸ್ಫೋಟದ ಆರೋಪಿಗಳಿಗೆ ನಿಷೇಧಿತ ಪಿಎಫ್‌ಐ ಸಂಘಟನೆ ಜತೆಗೆ ನಂಟಿದೆ. ಆದರೆ, ಕೇರಳದ ವಯನಾಡು (ರಾಹುಲ್‌ ಗಾಂಧಿ ಸ್ಪರ್ಧಿಸುತ್ತಿರುವ ಲೋಕಸಭಾ ಕ್ಷೇತ್ರ)ದಲ್ಲಿ ಇಂಥ ಸಂಘಟನೆಗಳ ಜತೆಗೆ ಕಾಂಗ್ರೆಸ್‌ ಒಪ್ಪಂದ ಮಾಡಿಕೊಂಡಿದೆ ಎಂದು ಕಿಡಿಕಾರಿದರು.

ಕೆಲ ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹತ್ಯೆ ಇಡೀ ದೇಶದಲ್ಲಿ ತಲ್ಲಣ ಮೂಡಿಸಿದೆ. ಕಾಲೇಜು ಕಾಲೇಜು ಕ್ಯಾಂಪಸೊಂದರಲ್ಲಿ ಹಾಡಹಗಲೇ ಈ ಹತ್ಯೆ ನಡೆದಿದೆ. ಈ ರೀತಿ ಹತ್ಯೆ ಮಾಡಲು ಧೈರ್ಯ ತೋರುವವರಿಗೆ ವೋಟ್‌ ಬ್ಯಾಂಕಿನ ಹಿಂದೆ ಬಿದ್ದಿರುವವರು ತಮ್ಮನ್ನು ರಕ್ಷಣೆ ಮಾಡುತ್ತಾರೆಂಬ ಸ್ಪಷ್ಟ ಅರಿವಿದೆ ಎಂದು ಮೋದಿ ಆಕ್ರೋಶ ಹೊರಹಾಕಿದರು.ನೇಹಾ ಹತ್ಯೆಯೇನು ಸಾಮಾನ್ಯ ಪ್ರಕರಣವಲ್ಲ. ಆದರೆ ಕಾಂಗ್ರೆಸ್‌ ಈ ಪ್ರಕರಣದ ಮೂಲಕವೂ ತನ್ನ ವೋಟ್‌ ಬ್ಯಾಂಕ್‌ ಅನ್ನು ಗಟ್ಟಿಗೊಳಿಸಲು ಯತ್ನಿಸಿತು. ನೇಹಾಳ ತಂದೆ ಕಾಂಗ್ರೆಸ್ ಕಾರ್ಯಕರ್ತರು, ಇಂಥ ಪರಿಸ್ಥಿತಿಯಲ್ಲಿ ಅವರ ಬೆಂಬಲಕ್ಕೆ ನಿಲ್ಲಬೇಕಾದ ಕಾಂಗ್ರೆಸ್‌ ಸರ್ಕಾರ, ನೋವು ಕೊಟ್ಟಿತು. ಈ ಘಟನೆ ತಮ್ಮ ಹೆಣ್ಣುಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಬೇಕೋ, ಬೇಡವೋ ಎಂಬ ಚಿಂತೆ ಪಾಲಕರಲ್ಲಿ ಮೂಡಿಸಿದೆ ಎಂದ ಅವರು, ಕಾಂಗ್ರೆಸ್‌ ಆಡಳಿತದಡಿ ಕರ್ನಾಟಕದ ಜನ ಅಸರುಕ್ಷಿತೆಯ ಭಾವ ಎದುರಿಸುತ್ತಿದ್ದಾರೆ. ಸುರಕ್ಷತೆವೊಂದನ್ನು ಹೊರತುಪಡಿಸಿ ಜನರ ಬಳಿ ಹಣ, ಗಾಡಿ ಎಲ್ಲವೂ ಇರಬಹುದು. ಆದರೆ ಮನೆಯಿಂದ ಹೊರಹೋದವರು ಅಷ್ಟೇ ಸುರಕ್ಷಿತವಾಗಿ ವಾಪಸ್‌ ಬರಬಹುದು ಎಂಬ ಗ್ಯಾರಂಟಿ ಮಾತ್ರ ಇಲ್ಲ ಎಂದು ಮೋದಿ ತಿಳಿಸಿದರು.

ರಾಜ್ಯದಲ್ಲಿ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವ ಬದಲು ಕರ್ನಾಟಕವನ್ನು ಹಾಳುಗೆಡುವುದರಲ್ಲಿ ಕಾಂಗ್ರೆಸ್‌ ಸರ್ಕಾರ ಬ್ಯುಸಿಯಾಗಿದೆ. ಕಾಂಗ್ರೆಸ್‌ ಸಮಾಜ ವಿರೋಧಿ, ದೇಶ ವಿರೋಧಿ ಮನಸ್ಥಿತಿಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ಕಿಡಿಕಾರಿದರು.ಇಂದು ಬಾಗಲಕೋಟೆಗೆ

ಪ್ರಧಾನಿ ನರೇಂದ್ರ ಮೋದಿ

ಬಾಗಲಕೋಟೆ: ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಪರ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಆಗಮಿಸಲಿದ್ದಾರೆ. ನವನಗರದ ತೋಟಗಾರಿಕೆ ವಿವಿ ಪಕ್ಕದಲ್ಲಿರುವ ಬೃಹತ್ ಸ್ಥಳದಲ್ಲಿ ವೇದಿಕೆ ಸಿದ್ಧಗೊಂಡಿದ್ದು ಬಾಗಲಕೋಟೆ ಹಾಗೂ ವಿಜಯಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.ಸೋಮವಾರ ಮಧ್ಯಾಹ್ನ 12 ಗಂಟೆಗೆ ನಡೆಯುವ ಬೃಹತ್ ಪ್ರಚಾರ ಸಭೆಯನ್ನು ಯಶಸ್ವಿಗೊಳಿಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಾನುವಾರವೇ ನಗರಕ್ಕೆ ಆಗಮಿಸಿದ್ದು, ಜಿಲ್ಲೆಯ ಬಿಜೆಪಿ ಮುಖಂಡರ ಜೊತೆ ಚರ್ಚೆ ನಡೆಸಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಬಂದೋಬಸ್ತ್‌ಗೆ ಪೊಲೀಸ್ ಸಿಬ್ಬಂದಿ:

ಪ್ರಧಾನಿ ಮೋದಿಯವರ ಪ್ರಚಾರ ಸಭೆಯ ಭದ್ರತೆಗಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದು, 3 ಎಸ್ಪಿ, 4 ಹೆಚ್ಚುವರಿ ಎಸ್ಪಿ, 12 ಡಿವೈಎಸ್ಪಿ, 32 ಸಿಪಿಐ, 88 ಪಿಎಸ್ಐ, 1049 ಪೊಲೀಸ್ ಸಿಬ್ಬಂದಿ ಜೊತೆಗೆ, ಕೆಎಸ್ಆರ್‌ಪಿ, ಡಿಎಆರ್ ತಂಡಗಳನ್ನು ನಿಯೋಜನೆ ಮಾಡಿದ್ದಾರೆ.