ಸಾರಾಂಶ
ಹಗರಿಬೊಮ್ಮನಹಳ್ಳಿ: ರೈತರ ಬದುಕು ಹಸನಗೊಳಿಸುವ ನಿಟ್ಟಿನಲ್ಲಿ ಕ್ಷೇತ್ರದ ೧೭ಕೆರೆ ತುಂಬಿಸಲು ಶ್ರಮಿಸಲಾಗುವುದು ಎಂದು ಶಾಸಕ ಕೆ. ನೇಮರಾಜ ನಾಯ್ಕ ತಿಳಿಸಿದರು.
ತಾಲೂಕಿನ ಹಲಗಾಪುರ, ಹಂಪಾಪಟ್ಟಣ, ಕೆಂಚಟನಹಳ್ಳಿ, ವರದಾಪುರ ಸೇರಿ ವಿವಿಧ ಗ್ರಾಮಗಳಲ್ಲಿ ₹೧೦ಕೋಟಿಗೂ ಅಧಿಕ ಮೊತ್ತದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದ್ದು, ಅಭಿವೃದ್ಧಿ ಕುರಿತಂತೆ ರಾಜಕೀಯ ಮಾಡುವುದಿಲ್ಲ. ತಾಲೂಕಿನ ಕೆರೆಗಳಿಗೆ ತುಂಗಭದ್ರಾ ನೀರು ಭರ್ತಿ ಮಾಡುವ ನಿಟ್ಟಿನಲ್ಲಿ ವಿಸ್ತ್ರತ ವರದಿ ಸಿದ್ಧವಾಗಿದೆ. ಅಗತ್ಯ ಅನುದಾನ ಒದಗಿಸುವಂತೆ ಈಗಾಗಲೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಅನುದಾನ ಒದಗುತ್ತಿದ್ದಂತೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ತಾಲೂಕಿನ ಉಪ್ಪಾರಗಟ್ಟಿ ಗ್ರಾಮದಲ್ಲಿ ₹ ೪೦ಲಕ್ಷ ಅಂದಾಜು ಮೊತ್ತದಲ್ಲಿ ಕಣವಿನಾಯಕನಹಳ್ಳಿಯಲ್ಲಿ ೮೧ ಲಕ್ಷರೂ.ಅಂದಾಜು ಮೊತ್ತದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಸೇರಿ ತಾಲೂಕಿನ ಮಾದರೂ, ಪಿಲ್ಲೋಬನಹಳ್ಳಿ, ಹೊಸಕೇರಿ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಜೆಡಿಎಸ್ ಕ್ಷೇತ್ರಾಧ್ಯಕ್ಷ ವೈ. ಮಲ್ಲಿಕಾರ್ಜುನ, ತಾಪಂ ಮಾಜಿ ಅಧ್ಯಕ್ಷ ಪಿ. ಸೂರ್ಯಬಾಬು, ಪುರಸಭೆ ಮಾಜಿ ಸದಸ್ಯ ಬದಾಮಿ ಮೃತ್ಯುಂಜಯ, ಬ್ಯಾಟಿ ನಾಗರಾಜ, ಹನಸಿ ಶಿವಕುಮಾರಗೌಡ ಕೃಷ್ಣಮೂರ್ತಿ, ಬಿ.ಜಿ.ಬಡಿಗೇರ, ಹೊಟೇಲ್ ಸಿದ್ದರಾಜು, ಚಂದ್ರಶೇಖರ, ವೀರೇಶ, ಶೆಟ್ರು ಬಸಜ್ಜ, ಉಪ್ಪಾರಗಟ್ಟಿ ಜಯಣ್ಣ ಇತರರಿದ್ದರು.