ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಹಲವು ವರ್ಷದಿಂದ ನೆನೆಗುದಿ ಬಿದ್ದಿರುವ ಈಜಿಪುರ ಫ್ಲೈಓವರ್ ಕಾಮಗಾರಿಯನ್ನು ಮಾರ್ಚ್‌ಗೆ ಪೂರ್ಣಗೊಳಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.ಭಾನುವಾರ ಸಾರಿಗೆ ಸಚಿವ ಹಾಗೂ ಸ್ಥಳೀಯ ಶಾಸಕ ರಾಮಲಿಂಗಾರೆಡ್ಡಿ ಅವರೊಂದಿಗೆ ಈಜಿಪುರ ಫ್ಲೈಓವರ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಅಧಿಕಾರಿಗಳಿಂದ ಮಾಹಿತಿ ಪಡೆದು. ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ತಿಳಿಸಿದರು.
ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಕಾಮಗಾರಿ ಸರ್ವಿಸ್ ರಸ್ತೆ ಸೇರಿದಂತೆ ಮೊದಲಾದ ಕಾಮಗಾರಿಗೆ ಭೂಸ್ವಾಧೀನ ಪ್ರಕ್ರಿಯೆ ಬಾಕಿ ಇದೆ. ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.ಈ ವೇಳೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಫ್ಲೈಓವರ್ ಕಾಮಗಾರಿ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪುನಃ ಆರಂಭಿಸಲಾಗಿದೆ. ಕೇಂದ್ರೀಯ ಸದನದ ಬಳಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಸಿಲ್ಕ್ ಬೋರ್ಡ್‌ವರೆಗೆ ಒಂದು ಸಣ್ಣ ಮೇಲ್ಸೇತುವೆ ನಿರ್ಮಿಸಲು ಅನುಮೋದನೆ ನೀಡುವಂತೆ ಸಚಿವ ರಾಮಲಿಂಗಾರೆಡ್ಡಿ ಕೋರಿದರು.
ಇದೇ ವೇಳೆ, ಕೋರಮಂಗಲದಲ್ಲಿರುವ ಈಜಿಪುರದ 200 ಟನ್ ಸಾಮರ್ಥ್ಯದ ಘನತ್ಯಾಜ್ಯ ವರ್ಗಾವಣೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು. ಲೋವರ್ ಅಗರಂನಿಂದ ಇಬ್ಬಲೂರು ಸರ್ಜಾಪುರ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗಾಗಿ ರಕ್ಷಣಾ ಸಚಿವಾಲಯದಿಂದ ಭೂಮಿ ಹಸ್ತಾಂತರ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಮಾತುಕತೆ ನಡೆಸುವಂತೆ ರಾಮಲಿಂಗಾರೆಡ್ಡಿ ಅವರು ಡಿಕೆಶಿಗೆ ಮನವಿ ಮಾಡಿದರು.ಕೋರಮಂಗಲ 4ನೇ ಬ್ಲಾಕ್, ಎಸ್.ಟಿ. ಬೆಡ್, ಈಜಿಪುರ, ರಾಜೇಂದ್ರ ನಗರ, ಮತ್ತು ರಾಷ್ಟ್ರೀಯ ಕ್ರೀಡಾ ಗ್ರಾಮ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪ್ರವಾಹ ಸಮಸ್ಯೆಯನ್ನು ಯಶಸ್ವಿಯಾಗಿ ನಿವಾರಿಸಲಾಗಿದೆ. ಬಾಕಿ ಉಳಿದಿರುವ ಕೋರಮಂಗಲ 6ನೇ ಬ್ಲಾಕ್ ಮತ್ತು ಅಶ್ವಿನಿ ಲೇಔಟ್‌ನ ಕಾಮಗಾರಿಗಳಿಗೆ ಶೀಘ್ರ ಮಂಜೂರಾತಿ ನೀಡುವಂತೆ ಕೋರಿದ್ದು, ಡಿಸಿಎಂ ಸರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಈಜಿಪುರದಲ್ಲಿ ಅನುಮೋದನೆಗೊಂಡಿರುವ ಜನರಲ್ ಆಸ್ಪತ್ರೆ ಕಾಮಗಾರಿಯನ್ನು ಶೀಘ್ರದಲ್ಲೇ ಪ್ರಾರಂಭಿಸಿ, ಕೋರಮಂಗಲದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದ ಭೂಗತ ಕೇಬಲ್ ಯೋಜನೆಯನ್ನು ಇಡೀ ಬಿಟಿಎಂ ಕ್ಷೇತ್ರಕ್ಕೆ ವಿಸ್ತರಿಸಲು ಹಾಗೂ ನಾಗರಿಕರ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಬೀದಿ ದೀಪಗಳ ಅಳವಡಿಕೆಗೆ ಅನುದಾನ ನೀಡುವಂತೆ ಮನವಿ ಮಾಡಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.