ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜನ್ಮದಿನ ಪ್ರಯುಕ್ತ ನಡೆಯುವ ಶಾಂತಿ, ಸೌಹಾರ್ದತೆಯ ಪ್ರತೀಕವಾಗಿರುವ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಬುಧವಾರ ನಗರದಲ್ಲಿ ಸಂಭ್ರಮದಿಂದ ಆಚರಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜನ್ಮದಿನ ಪ್ರಯುಕ್ತ ನಡೆಯುವ ಶಾಂತಿ, ಸೌಹಾರ್ದತೆಯ ಪ್ರತೀಕವಾಗಿರುವ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಬುಧವಾರ ನಗರದಲ್ಲಿ ಸಂಭ್ರಮದಿಂದ ಆಚರಿಸಿದರು.ನಗರದ ವಿವಿಧೆಡೆ ಹಸಿರು ಧ್ವಜಗಳು, ಬಾವುಟಗಳು ಹಾರಾಡಿದವು. ಕಣ್ಣು ಹರಿದಷ್ಟು ದೂರ ಕಾಣುತ್ತಿದ್ದ ಬೃಹತ್ ಮೆರವಣಿಗೆಯಲ್ಲಿ ಹಿರಿಯರು, ಕಿರಿಯರು ಎನ್ನದೆ ಸಂಭ್ರಮ, ಸಡಗರದಿಂದ ಭಾಗಹಿಸಿದ್ದರು. ಹೆಣ್ಣುಮಕ್ಕಳು ರಸ್ತೆಯ ಎರಡೂ ಬದಿ ನಿಂತು ಮೆರವಣಿಗೆಯ ಉತ್ಸಾಹವನ್ನು ಕಣ್ತುಂಬಿಕೊಂಡರು. ಮೆರವಣಿಗೆ ಮಧ್ಯ ಟಿಪ್ಪು ಸುಲ್ತಾನ್ ವೇಷ ತೊಟ್ಟ ಬಾಲಕನೊಬ್ಬ ಎಲ್ಲರ ಗಮನ ಸೆಳೆದ.
ಶಿವಮೊಗ್ಗದ ಗಾಂಧಿ ಬಜಾರ್‌ನ ಸುನ್ನಿ ಜಾಮಿಯಾ ಮಸೀದಿಯಿಂದ ಆರಂಭಗೊಂಡ ಮೆರವಣಿಗೆ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿತು. ನಗರದ ಶಿಪ್ಪನಾಯಕ ವೃತ್ತದ ಬಳಿ ಮೆರವಣಿಗೆ ಆಗಮಿಸುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಭಾಗಿಯಾಗಿದ್ದರು. ಹಬ್ಬ ಹಿನ್ನೆಲೆ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಬಾವುಟ, ಬಂಟಿಂಗ್ಸ್ ಹಾಗೂ ಕಟೌಟ್ ಗಳು ಕಂಗೊಳಿಸಿದವು. ಮೆರವಣಿಗೆಯಲ್ಲಿ ಡಿಜೆ ಸಾಂಗ್ಸ್‌ಗೆ ಯವಕರು ಕುಣಿದು ಕುಪ್ಪಳಿಸಿದರು.ಬಿಗಿ ಪೊಲೀಸ್ ಬಂದೋಬಸ್ತ್: ಈದ್ ಮಿಲಾದ್ ಹಬ್ಬ ಅಂಗವಾಗಿ ನಡೆದ ಮೆರವಣಿಗೆ ಸಾಗುವ ಮಾರ್ಗದಲ್ಲಿ ಹೆಚ್ಚಿನ ಪೊಲೀಸ್ ಬಿಗಿ ಬಂದೋಬಸ್ತ್ ಇತ್ತು. ಭದ್ರತೆಗಾಗಿ 3 ಸಾವಿರಕ್ಕೂ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಹಾಗೂ ಡ್ರೋನ್ ಮೂಲಕವೂ ಹೆಚ್ಚಿನ ಕಣ್ಗಾವಲು ಇಡಲಾಗಿತ್ತು. ಖುದ್ದು ಎಸ್ಪಿ ಬಿ.ನಿಖಿಲ್ ಅವರು ಬಂದೋಬಸ್ತ್ ಪರಿಶೀಲನೆ ನಡೆಸಿದರು.
ಈದ್ ಮಿಲಾದ್ ಮೆರವಣಿಗೆ ವೇಳೆ ಗಾಂಜಾ ಬೇಡ ಬ್ರೋ ಅಭಿಯಾನಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆಯಲ್ಲಿ ಗಾಂಜಾ ಬೇಡ ಬ್ರೋ ಅಭಿಯಾನ ನಡೆಸುವ ಮೂಲಕ ಪ್ರವಾದಿ ಮೊಹಮ್ಮದ್ ಫೈಗಂಬರ್ ಅವರ ಜನ್ಮದಿನವನ್ನು ಸ್ಮರಿಸುವ ಈದ್ ಮಿಲಾದ್ ಹಬ್ಬವನ್ನು ಶಿವಮೊಗ್ಗ ನಗರದಲ್ಲಿ ವಿಭಿನ್ನವಾಗಿ ಆಚರಣೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಮಿತಿಮೀರಿ ಹೆಚ್ಚುತ್ತಿರುವ ಮಾದಕ ವಸ್ತುಗಳನ್ನು ತಡೆಯುವ ದೃಷ್ಟಿಯಿಂದ ಜಿಲ್ಲಾ ಪೊಲೀಸ್ ಇಲಾಖೆಯು ಬೇಡ ಬ್ರೋ ಎನ್ನುವ ಜಾಗೃತಿ ಪರಿಕಲ್ಪನೆಯನ್ನು ಜಾರಿಗೆ ತಂದಿದೆ. ಹಾಗೆಯೇ ಜಿಲ್ಲಾದ್ಯಂತ ಗಾಂಜಾವನ್ನು ಮಟ್ಟಹಾಕುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಇದರ ನಡುವೆ, ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸೋಮಿನಕೊಪ್ಪದಲ್ಲಿ ಇಂದು ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಬೇಡ ಬ್ರೋ, ಗಾಂಜಾ ಬೇಡ ಬ್ರೋ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಬಿ ವಿಭಾಗದ ಡಿವೈಎಸ್ಪಿ ಸಂಜೀವ್ ಕುಮಾರ್ ಮತ್ತು ವಿನೋಬನಗರ ಪೊಲೀಸ್ ಠಾಣೆಯ ಪಿಐ ಸಂತೋಷ್ ಕುಮಾರ್ ಡಿ.ಕೆ. ಅವರ ನೇತೃತ್ವದಲ್ಲಿ ಮುಸ್ಲಿಂ ಬಾಂಧವರು ಪೋಸ್ಟರ್‌ಗಳನ್ನು ಪ್ರದರ್ಶಿಸುವ ಮೂಲಕ ಜಾಗೃತಿ ಮೂಡಿಸಿದರು.
ಗೆಳೆಯರ ಬಳಗ ಮಂಡಗದ್ದೆ ವತಿಯಿಂದ ಸಿಹಿ ವಿತರಣೆಮುಸ್ಲಿಂ ಸಮುದಾಯಕ್ಕೆ ಈದ್ ಮಿಲಾದ್ ಸಂಭ್ರಮವಾಗಿದ್ದು, ಈ ಅಂಗವಾಗಿ ಗೆಳೆಯರ ಬಳಗ ಮಂಡಗದ್ದೆ ವತಿಯಿಂದ ಪಟ್ಟಣದ ವೃತ್ತದಲ್ಲಿ ಸೌಹಾರ್ದತೆ ಮತ್ತು ಭಾವೈಕ್ಯತೆಯ ಕಾರ್ಯಕ್ರಮ ನಡೆಸಲಾಯಿತು.
ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜನ್ಮದಿನ ಪ್ರಯುಕ್ತ ನಡೆಯುವ ಶಾಂತಿ, ಸೌಹಾರ್ದತೆಯ ಪ್ರತೀಕವಾಗಿರುವ ಈದ್ ಮಿಲಾದ್ ಹಬ್ಬದ ಮೆರವಣಿಗೆ ವೇಳೆ ಗೆಳೆಯರ ಬಳಗ ಮಂಡಗದ್ದೆ ವತಿಯಿಂದ ತಂಪು ಪಾನೀಯ ಹಾಗೂ ಸಿಹಿ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಹಿಂದೂ ಬಾಂಧವರು ಮುಸ್ಲಿಂ ಸಮುದಾಯದವರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯ ಕೋರಿ, ಸೌಹಾರ್ದತೆ, ಸಹಬಾಳ್ವೆ ಹಾಗೂ ರಾಷ್ಟ್ರೀಯ ಏಕತೆಯ ಮಹತ್ವ ಪ್ರತಿಪಾದಿಸಿದರು. ಕಾರ್ಯಕ್ರಮದಲ್ಲಿ ಎರಡೂ ಸಮುದಾಯಗಳ ಮುಖಂಡರು, ಯುವಕರು ಹಾಗೂ ಸಾರ್ವಜನಿಕರು ಪಾಲ್ಗೊಂಡು ಭಾವೈಕ್ಯತೆಯ ಸಂದೇಶ ಸಾರಿದರು.