ಕುಶಾಲನಗರದಲ್ಲಿ ಈದ್ ಮಿಲಾದ್ ಜಾಥಾ

| Published : Sep 14 2025, 01:06 AM IST

ಸಾರಾಂಶ

ಕುಶಾಲನಗರದಲ್ಲಿ ಶಾಂತಿ ಸೌಹಾರ್ದತೆ ಸಾರುವ ಈದ್‌ ಮಿಲಾದ್‌ ಜಾಥಾ ನಡೆಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರಪ್ರವಾದಿ ಪೈಗಂಬರ್ ಮುಹಮ್ಮದ್ ಅವರ 1500 ನೇ ಜನ್ಮ ದಿನದ ಪ್ರಯುಕ್ತ ಕುಶಾಲನಗರದಲ್ಲಿ ಶಾಂತಿ ಸೌಹಾರ್ದತೆ ಸಾರುವ ಈದ್ ಮಿಲಾದ್ ಜಾಥಾ ನಡೆಯಿತು.ದಾರುಲ್ ಉಲೂಂ ಮದ್ರಸ, ಹಿಲಾಲ್ ಮಸೀದಿ ಹಾಗೂ ನುಸ್ರತುಲ್ ಇಸ್ಲಾಂ ಯೂತ್ ಅಸೋಸಿಯೇಷನ್ ಆಶ್ರಯದಲ್ಲಿ ಪ್ರವಾದಿಯವರ ಜನ್ಮದಿನ ಹಿನ್ನಲೆ ಪ್ರವಾದಿಯವರ ಸಂದೇಶವನ್ನು ಸಾರುವ ಘೋಷಣೆ ಕೂಗಿದರು. ಕುಶಾಲನಗರದ ದಾರುಲ್ ಉಲೂಂ ಮದ್ರಸದಿಂದ ಹೊರಟ ಮೆರವಣಿಗೆಯು ಕುಶಾಲನಗರದ ಮುಖ್ಯರಸ್ತೆಯ ಮೂಲಕ ಸಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರಳಿತು. ಕುಶಾಲನಗರ ಗಣಪತಿ ದೇವಾಲಯ ಬಳಿ ದಾರುಲ್ ಉಲೂಂ ಮದ್ರಸ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶನ ಕಾರ್ಯಕ್ರಮ ನಡೆಯಿತು. ಮದ್ರಸ ವಿದ್ಯಾರ್ಥಿಗಳು ವಿಶೇಷ ಉಡುಗೆಗಳನ್ನು ತೊಟ್ಟು ಸಾರ್ವಜನಿಕರ ಗಮನ ಸೆಳೆದರು.

ಮೆರವಣಿಗೆಯಲ್ಲಿ ಪ್ರವಾದಿಯವರ ಜೀವನ ಸಂದೇಶಗಳನ್ನು, ಆದರ್ಶಗಳನ್ನು, ಅವರ ನಡೆದು ಬಂದ ಹಾದಿಯನ್ನು ಸಾರಲಾಯಿತು. ಎಲ್ಲರೂ ಜಾತಿ, ಧರ್ಮವನ್ನು ಬಿಟ್ಟು ಪರಸ್ಪರ ಸಹೋದರರಂತೆ, ಶಾಂತಿ ಸಮಾನತೆಯಿಂದ ಬಾಳಿ ಬದುಕಬೇಕು ಎಂದು ಧರ್ಮಗುರುಗಳು ಕರೆ ನೀಡಿದರು. ಮಕ್ಕಳಿಗೆ ಸಿಹಿ ಹಾಗೂ ತಂಪು ಪಾನೀಯಗಳನ್ನು ವಿತರಿಸಲಾಯಿತು. ಮೆರವಣಿಗೆ ಸಂದರ್ಭ ಬೀದಿ ಬದಿಗಳಲ್ಲಿ ಮುಸ್ಲಿಂ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಸೇರಿದ್ದರು.ಹಿಲಾಲ್ ಮಸೀದಿ ಕಮಿಟಿ ಪದಾಧಿಕಾರಿಗಳು, ದಾರುಲ್ ಉಲೂಂ ಮದ್ರಸ ಅಧ್ಯಾಪಕರು, ನುಸ್ರತುಲ್ ಇಸ್ಲಾಂ ಯೂತ್ ಅಸೋಸಿಯೇಷನ್ ನ ಪ್ರಮುಖರು ಇದ್ದರು.ನಂತರ ದಾರುಲ್ ಉಲೂಂ ಮದರಸದ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.